ತುಮಕೂರು:ಯಾವುದೇ ಹಳ್ಳಿ, ನಗರಗಳ ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಸಹಕಾರ ಗಮನಾರ್ಹವಾಗಿದೆ. ನಗರಗಳ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗಿರುವ ಸಹಕಾರ ಸಂಸ್ಥೆಗಳು ನಿವೇಶನ ಖರೀದಿ, ಮನೆ ನಿರ್ಮಾಣ, ವಾಹನ ಸಾಲ ಮತ್ತಿತರ ಆರ್ಥಿಕ ನೆರವು ಒದಗಿಸಿ ನೆರವಾಗುತ್ತಿವೆ ಎಂದು ತುಮಕೂರು ದಸರಾ ಸಮಿತಿ ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ್ ಹೇಳಿದರು.
ನಗರದ ಶ್ರೀರಾಮ ಮಂದಿರ ಆವರಣದಲ್ಲಿ ತುಮಕೂರು ದಸರಾ ಸಮಿತಿಯ 35ನೇ ದಸರಾ ಉತ್ಸವ ಸಮಾರಂಭದಲ್ಲಿ ನಗರದ ವಿವಿಧ ಸಹಕಾರ ಸಂಸ್ಥೆಗಳ ಸಾಧಕರನ್ನು ಗೌರವಿಸಿ ಮಾತನಾಡಿದಅವರು, ಸಹಕಾರ ಸಂಸ್ಥೆಗಳು ಇಲ್ಲದೇ ಹೋಗಿದ್ದರೆ ಜನ ಸಾಮಾನ್ಯರು ತಮ್ಮ ವ್ಯವಹಾರಗಳಿಂದ ಖಾಸಗಿಯವರ ಹೆಚ್ಚು ಬಡ್ಡಿಯ ಸಾಲದ ಸುಳಿಯಲ್ಲಿ ಸಿಲುಕು ತೊಂದರೆ ಅನುಭವಿಸುತ್ತಿದ್ದರು. ಸಹಕಾರ ಸಂಸ್ಥೆಗಳ ಪದಾಧಿಕಾರಿಗಳಿಗೆ ಯಾವುದೇ ಗೌರವಧನ ಸಿಗುವುದಿಲ್ಲ. ಆದರೂ ಜನರಿಗೆ ಸಹಾಯವಾಗಲಿ ಎಂದು ಸಂಸ್ಥೆ ಕಟ್ಟಿ ಸೇವಾಮನೋಭಾವದಿಂದ ಸಹಾಯ ಮಾಡುತ್ತಿದ್ದಾರೆ.ಇವರ ಸೇವೆ ಶ್ಲಾಘನೀಯಎಂದು ಹೇಳಿದ ಎಸ್.ಪಿ.ಚಿದಾನಂದ್, ಸಾಲ ಪಡೆದವರೂ ಸಕಾಲದಲ್ಲಿ ಮರುಪಾವತಿ ಮಾಡಿ ಸಂಸ್ಥೆಯನ್ನೂ ಬೆಳೆಸಿ ತಾವೂ ಬೆಳೆಯಬೇಕು ಎಂದು ಹೇಳಿದರು.
ಈ ವೇಳೆ ವಿವಿಧ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಜಿ.ಕೆ.ಶ್ರೀನಿವಾಸ್, ಬಿ.ಬಿ.ಮಹದೇವಯ್ಯ, ಮತ್ತಿತರರಿಗೆ ದಸರಾ ಗೌರವ ಸಮರ್ಪಣೆ ಮಾಡಲಾಯಿತು.
ದಸರಾ ಸಮಿತಿಅಧ್ಯಕ್ಷ ಬಿ.ಎಸ್.ಮಂಜುನಾಥ್,ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಕೆ.ಪರಶುರಾಮಯ್ಯ, ಕೆ.ಶಂಕರ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
