ತುಮಕೂರು:ತುಮಕೂರು ದಸರಾ ಸಮಿತಿಯ 35ನೇ ದಸರಾ ಉತ್ಸವದಲ್ಲಿ ನಗರದ ಶ್ರೀರಾಮ ಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಸಾಂಪ್ರದಾಯಕ ಶಮೀ ಪೂಜೆ ನೆರವೇರಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ದಸರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಇದರ ಅಂಗವಾಗಿ ವಿವಿಧ ಧಾರ್ಮಿಕ, ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನೆರವೇರಿದವು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ದಸರಾದಂತಹ ಉತ್ಸವಗಳು ಚಿಂತನೆಗೆ ಅವಕಾಶ ಆಗಬೇಕೇ ಹೊರತು ಆಡಂಬರವಾಗಬಾರದು.ನವರಾತ್ರಿ ಆಚರಣೆಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿದೆ.9 ಶಕ್ತಿಗಳನ್ನು ದುರ್ಗೆಯ 9 ಅವತಾರಗಳಲ್ಲಿ ಆರಾಧನೆ ಮಾಡುತ್ತೇವೆ. ನವರಾತ್ರಿಯನ್ನು ದೇಶಾದ್ಯಂತ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ವೈಭವದಿಂದ ಆಚರಿಸಲಾಗುತ್ತದೆ ಎಂದರು.
ದಸರಾ ಸಮಿತಿಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್ ಮಾತನಾಡಿ, ಸಮಿತಿ ಆಚರಿಸುತ್ತಿರುವ ದಸರಾ ಕಾರ್ಯಕ್ರಮಗಳು ಸಜ್ಜನಿಕೆ, ಸಜ್ಜನರ ಸಮಾಗಮವಾಗಿದೆ. ಇಷ್ಟೂ ದಿನ ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ, ಭಾವೈಕ್ಯತೆ ಸಾರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿತ್ತು ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಶಮೀ ಪೂಜೆ ನೆರವೇರಿಸಿ ಬನ್ನಿ ಕಡಿದು ಅಲ್ಲಿದ್ದ ನಾಗರೀಕರಿಗೆ ಬನ್ನಿ ಹಂಚಿ ನವರಾತ್ರಿಯ ಮತ್ತು ವಿಜಯದಶಮಿಯ ಶುಭಾಶಯ ಕೋರಿದರು.
ತುಮಕೂರು ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಆಚರಣಾ ಸಮಿತಿ ಅಧ್ಯಕ್ಷ ಡಾ.ಎಸ್.ಪರಮೇಶ್, ಕೋರಿ ಮಂಜುನಾಥ್, ಜಿ.ಕೆ.ಶ್ರೀನಿವಾಸ್, ಬಿ.ಎಸ್.ಮಹೇಶ್, ಜಿ.ಎಸ್.ಬಸವರಾಜು, ಕೆ.ಎನ್.ಗೋವಿಂದರಾಜು, ಕೆ.ಪರಶುರಾಮಯ್ಯ, ಕೆ.ಶಂಕರ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
