ಕೆ.ಆರ್.ಪೇಟೆ,ಅ.03: ಸರ್ವರಿಗೂ ಆರೋಗ್ಯ ನೀಡುವ ದೃಷ್ಠಿಯಿಂದ ಸರ್ಕಾರದ ಆರೋಗ್ಯ ಇಲಾಖೆಯ ವತಿಯಿಂದ ಪ್ರಮುಖ ಗ್ರಾಮಗಳಲ್ಲಿಯೂ “ನಮ್ಮ ಕ್ಲಿನಿಕ್” ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ. ಇಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಹಾಗಾಗಿ ಪಟ್ಟಣದ ಜನತೆ ಈ ಆಸ್ಪತ್ರೆಯ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರಾದ ಹೆಚ್.ಟಿ.ಮಂಜು ಸಲಹೆ ನೀಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆ ನಮ್ಮ ಕ್ಲಿನಿಕ್ ಆಯುಷ್ಮಾನ್ ಆರೋಗ್ಯ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಾಂದ್ರತೆ ಹೆಚ್ಚು ಇರುವ ಸ್ಥಳದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಯಾವುದೇ ರೋಗಿಗಳು ದೂರಕ್ಕೆ ಹೋಗಿ ಚಿಕಿತ್ಸೆ ಪಡೆಯಲು ತೊಂದರೆಯಾಗಬಾರದು. ಸ್ಥಳೀಯದಲ್ಲಿಯೇ ಚಿಕಿತ್ಸೆ ಸಿಗಬೇಕು ಎಂಬ ಸದುದ್ದೇಶದಿಂದ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಈ ನಮ್ಮ ಕ್ಲಿನಿಕ್ ನಲ್ಲಿ ಓರ್ವ ವೈದ್ಯರು, 1 ಸ್ಟಾಪ್ ನರ್ಸ್, ದಾದಿಯರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದು ರೋಗಿಗಳಿಗೆ ಅಗತ್ಯ ಪ್ರಾಥಮಿಕ ಹಂತದ ಚಿಕಿತ್ಸೆ ನೀಡುತ್ತಾರೆ.

ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ದೊರೆತರೆ ರೋಗಿಗೆ ಹೆಚ್ಚು ಉಪಯೋಗವಾಗುತ್ತದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಿಗೆ ಹೋಗಲು ಸಹಾಯಕವಾಗುತ್ತದೆ. ಹಾಗಾಗಿ ಪಟ್ಟಣದ ಅಗ್ರಹಾರ ಬಡಾವಣೆ, ಅಂಬೇಡ್ಕರ್ ನಗರ, ಹೇಮಾವತಿ ಬಡಾವಣೆ, ಬಸವೇಶ್ವರ ನಗರ ಬಡಾವಣೆಯ ಬಡಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ನಾಲ್ಕೂ ಬಡಾವಣೆಗಳ ಹೃದಯ ಭಾಗದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಮ್ಮ ಕ್ಲಿನಿಕ್ ಮಿನಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಸ್ಥಳ ಆಯ್ಕೆ ಮಾಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯಉಮೇಶ್, ಪುರಸಭಾ ಸದಸ್ಯರಾದ ಬಿ.ಜಿ.ಗಿರೀಶ್, ಕೆ.ಆರ್.ಹೇಮಂತಕುಮಾರ್, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್, ಸಿಇಓ ಕಾಂತರಾಜು, ಜಿಲ್ಲಾ ಆರ್ಸಿಎಚ್ ಅಧಿಕಾರಿಗಳಾದ ಡಾ.ಅಶ್ವತ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್, ಹೆಲ್ತ್ ಇನ್ಸ್ಪೆಕ್ಟರ್ ಸತೀಶ್, ಧರ್ಮೇಂದ್ರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು.
– ಶ್ರೀನಿವಾಸ್ ಆರ್.
ಇದನ್ನು ಓದಿ: ಶಾಸಕ ಹೆಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ
