ಕೆ.ಆರ್.ಪೇಟೆ,ಅ.04: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸಂಘಟನೆಗಳ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಬಳಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ 12ನೇ ವರ್ಷದ ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ಮತ್ತು ಶೋಭಾಯಾತ್ರೆಯು ದಸರಾ ಮೆರವಣಿಗೆಯ ಮಾದರಿಯಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಶನಿವಾರ ವಿಜೃಂಭಣೆಯಿ0ದ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಅವರು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಗಣೇಶೋತ್ಸವಕ್ಕೆ ಹಾಗೂ ಶೋಭಾಯಾತ್ರೆಗೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಸೇರಿದಂತೆ ಹಲವು ಗಣ್ಯರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮಂಗಳವಾದ್ಯ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಐಡ್ರಾಲಿಕ್ ಡಿಜೆ, ನಾಸಿಕ್ ಡೋಲು ನಾದ, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆಗಳ ಕುಣಿತ, ಇತ್ಯಾದಿ ವಿವಿಧ ಪ್ರಾಕಾರದ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಭಾರತಾಂಭೆ, ಶ್ರೀರಾಮ, ಶ್ರೀ ಆಂಜನೇಯಸ್ವಾಮಿ, ಛತ್ರಪತಿ ಶಿವಾಜಿ ಮಹಾರಾಜ್, ಡಾ.ಬಿ.ಆರ್.ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ, ವೀರಮದಕರಿ ನಾಯಕ ಸೇರಿದಂತೆ ವಿವಿಧ ಮಹನೀಯರ ಸ್ತಬ್ದ ಚಿತ್ರಗಳು ಮೆರವರಣಿಗೆಯಲ್ಲಿ ಸಾಗಿದ್ದು ದಸರಾ ಸಡಗರವನ್ನು ನೆನಪಿಸುವಂತಿತ್ತು. ಶೋಭಾಯಾತ್ರೆಯಲ್ಲಿ ಯುವತಿಯರಿಗೆ ಮತ್ತು ಯುವಕರಿಗೆ ಪ್ರತ್ಯೇಕ ಐಡ್ರಾಲಿಕ್ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಯುವಕರು ಮತ್ತು ಯುವತಿಯರು ಡಿಜೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಗಣೇಶೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿ ನೃತ್ಯದಲ್ಲಿ ಮಾಡಿ ಸಂಭ್ರಮಿಸಿದರು.

ಶೋಭಾಯಾತ್ರೆಯು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಆರಂಭವಾಗಿ ಪ್ರವಾಸಿ ಮಂದಿರ ವೃತ್ತ, ತಾಲ್ಲೂಕು ಆಸ್ಪತ್ರೆ ರಸ್ತೆಯ ಮೂಲಕ ಸಾಗಿ, ಪುನಃ ಅದೇ ಮಾರ್ಗದಲ್ಲಿ ಸಾಗಿದ ಮೆರವಣಿಗೆಯು ಪೊಲೀಸ್ ಠಾಣೆ ರಸ್ತೆ, ಹಳೆ ಪುರಸಭಾ ಕಚೇರಿ, ಬೋರಲಿಂಗೇಗೌಡರ ಸರ್ಕಲ್, ಅಂಬೇಡ್ಕರ್ ನಗರ, ಬಸವೇಶ್ವರನಗರ, ದುರ್ಗಾಭವನ್ ಸರ್ಕಲ್, ಮುಕ್ಕಟ್ಟೆ ಚೌಕ, ಮೂಡಲ ಆಂಜನೇಯಸ್ವಾಮಿ ದೇವಸ್ಥಾನದ ಮೂಲಕ ಸಾಗಿ ದೇವಿರಮ್ಮಣ್ಣಿ ಕೆರೆಯವರೆಗೆ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ಸಾರ್ವಜನಿಕರಿಗೆ ಭರಪೂರ ಮನರಂಜನೆ ನೀಡಿದವು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಗಣೇಶನ ದರ್ಶನ ಪಡೆದು, ಕಲಾತಂಡಗಳ ಪ್ರದರ್ಶನವನ್ನು ವೀಕ್ಷಣೆ ಮಾಡಿ ಸಂಭ್ರಮಿಸಿದರು.

ಭಜರಂಗದಳ, ವಿಶ್ವಹಿಂದೂಪರಿಷತ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರಾದ ಆರ್.ಬಾಲಸುಬ್ರಹ್ಮಣ್ಯಂ, ಮುರುಗೇಶ್, ನಟರಾಜ್, ಭಾಸ್ಕರ್ ರಾಜೇ ಅರಸ್, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್, ಮಹೇಂದ್ರ, ಕುಮಾರ್ ಸೇರದಂತೆ ಹಲವು ಮುಖಂಡರು ಗಣೇಶೋತ್ಸವ ಹಾಗೂ ಶೋಭಾ ಯಾತ್ರೆಯ ಉಸ್ತುವಾರಿ ವಹಿಸಿದ್ದರು.
ಇದನ್ನು ಓದಿ: ಕೆ.ಆರ್.ಪೇಟೆ- ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಯಾರ ಪಾಲು?
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ನಾಗಮಂಗಲ ಡಿ.ವೈ.ಎಸ್.ಪಿ. ಚೆಲುವರಾಜು ಅವರ ನೇತೃತ್ವದಲ್ಲಿ ಮೆರವಣಿಗೆ ಸುಮಾರು 500ಕ್ಕೂ ಹೆಚ್ಚು ಪೊಲೀಸರ ತಂಡವು ಪಟ್ಟಣದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
– ಶ್ರೀನಿವಾಸ್ ಆರ್.


[…] […]