ಮುಂಬೈ: ಅರೇಬಿಯನ್ ಸಮುದ್ರದಲ್ಲಿ ಉಂಟಾದ ಹೊಸ ಚಂಡಮಾರುತಕ್ಕೆ ‘ಶಕ್ತಿ’ (Shakti Cyclone) ಎಂದು ಹೆಸರಿಸಲಾಗಿದೆ. ಸದ್ಯ ಇದು ಮಹಾರಾಷ್ಟ್ರ ಕರಾವಳಿಯ ಸಮೀಪದಲ್ಲಿ ಅಬ್ಬರಿಸುತ್ತಿದ್ದು, ಗಾಳಿಯ ವೇಗ ಮತ್ತು ಮಳೆ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘ಶಕ್ತಿ’ ಎಂಬ ಹೆಸರನ್ನು ಶ್ರೀಲಂಕಾ ದೇಶವು ಸೂಚಿಸಿದ್ದು, ಇದು ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಉಷ್ಣವಲಯದ ಚಂಡಮಾರುತಗಳ ಕುರಿತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಏಷ್ಯಾ ಮತ್ತು ಪೆಸಿಫಿಕ್ (ESCAP) ಸಮಿತಿಯ ಹೆಸರಿಸುವ ಸಂಪ್ರದಾಯದಡಿ ಆಯ್ಕೆ ಮಾಡಲಾಗಿದೆ.
ಇದನ್ನು ಓದಿ: ಭಾರತವೇ ಜಾಗತಿಕ ರೈಲು ಉಪಕರಣ ರಫ್ತು ಕೇಂದ್ರ
ಈ ಸಮಿತಿಯಲ್ಲಿ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಥೈಲ್ಯಾಂಡ್, ಯೆಮನ್, ಒಮಾನ್, ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿ ಒಟ್ಟು 13 ರಾಷ್ಟ್ರಗಳಿವೆ. ಪ್ರತಿ ದೇಶವು ಪೂರ್ವಾನುಮೋದಿತ ಪಟ್ಟಿಯಿಂದ ಚಂಡಮಾರುತಗಳಿಗೆ ಹೆಸರುಗಳನ್ನು ಸೂಚಿಸುತ್ತದೆ.
ಹವಾಮಾನ ತಜ್ಞರ ಪ್ರಕಾರ, ‘ಶಕ್ತಿ’ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಮಹಾರಾಷ್ಟ್ರ ಹಾಗೂ ಕರಾವಳಿ ಕರ್ನಾಟಕ ಪ್ರದೇಶಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧಿಸಲಾಗಿದೆ.
