ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ಸರ್ಕಾರದ ದೊಡ್ಡ ಮಟ್ಟದ ಭೂಸ್ವಾಧೀನ ಯೋಜನೆ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಗೃಹ ಮಂಡಳಿಗೆ 2,760 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಈ ನಿರ್ಧಾರಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿ ವ್ಯಾಪ್ತಿಯ ದೊಡ್ಡಬೆಳವಂಗಲ, ದೊಡ್ಡಹೆಜ್ಜೆ, ವೆಂಕಟೇಶಪುರ ಸೇರಿದಂತೆ ಐದು ಗ್ರಾಮಗಳಲ್ಲಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಪ್ಲಾನ್ ಮಾಡಿದೆ ಎಂದು ಮಾಹಿತಿ ಹೊರಬಿದ್ದಿದೆ.
ಈ ಸುದ್ದಿ ತಿಳಿದೊಡನೆ, ರೈತರು ಆಕ್ರೋಶದಿಂದ ಬೀದಿಗಿಳಿದಿದ್ದಾರೆ. ಗ್ರಾಮಸ್ಥರು ಬೃಹತ್ ಪಾದಯಾತ್ರೆ ಕೈಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಕೃಷಿ ಭೂಮಿ ಸ್ವಾಧೀನ ನೋಟಿಸ್ಗಳನ್ನು ಬೆಂಕಿಗೆ ಆಹುತಿಯಾಗಿ ಹಚ್ಚಿದ ರೈತರು ತಮ್ಮ ಜೀವ ಬಲಿದಾನಕ್ಕೂ ಸಿದ್ಧರಿದ್ದೇವೆ ಆದರೆ ಭೂಮಿ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ರೈತರ ಕೋಪದ ಕಿಡಿ
“ಇದು ನಮ್ಮ ಜೀವಾಳವಾದ ಕೃಷಿ ಭೂಮಿ. ನಾವು ನಗರಗಳ ಅಭಿವೃದ್ಧಿಗಾಗಿ ನಮ್ಮ ಅಸ್ತಿತ್ವ ಕಳೆದುಕೊಳ್ಳಲು ಸಿದ್ಧರಿಲ್ಲ,” ಎಂದು ಆಕ್ರೋಶಗೊಂಡ ರೈತರು ಹೇಳಿದ್ದಾರೆ.
ದೊಡ್ಡ ಬೆಳವಂಗಲದಿಂದ ಚಿಕ್ಕ ಬೆಳವಂಗಲದವರೆಗೆ ರೈತರು ಬೃಹತ್ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹಿಂದಿನ ಭೂಸ್ವಾಧೀನ ಹಿನ್ನೆಲೆ
ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಟೌನ್ಶಿಪ್, ಕ್ವೀನ್ ಸಿಟಿ ಮತ್ತು ಕೆಐಎಡಿಬಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಈಗಾಗಲೇ ಸುಮಾರು 10,000 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈಗ ಮತ್ತೆ ಗೃಹ ಮಂಡಳಿಯ ಯೋಜನೆ ಹೆಸರಿನಲ್ಲಿ ರೈತರ ಬದುಕಿಗೆ ಧಕ್ಕೆಯುಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಎಚ್ಚರಿಕೆ
ಸರ್ಕಾರವು ತನ್ನ ನಿರ್ಧಾರ ಹಿಂತೆಗೆದುಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ.
“ಪ್ರಾಣ ಬೇಕಾದರೂ ಬಿಡುತ್ತೇವೆ, ಭೂಮಿ ಬಿಡಲ್ಲ” — ಅನ್ನದಾತರ ಘೋಷಣೆಗಳು ದೊಡ್ಡಬಳ್ಳಾಪುರದ ಗ್ರಾಮಗಳಲ್ಲಿ ಮೊಳಗಿವೆ.
ಇದನ್ನು ಓದಿ: ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿರುವ ಮಣ್ಣಿನ ಜ್ವಾಲಾಮುಖಿ 20 ವರ್ಷಗಳ ಬಳಿಕ ಸ್ಫೋಟ
ರಾಜ್ಯ ಸರ್ಕಾರದ ಗೃಹ ಮಂಡಳಿ ಯೋಜನೆಗೆ ಭೂಸ್ವಾಧೀನ ಕ್ರಮ ಕೈಗೊಳ್ಳಲು ರೈತರಿಂದ ಬೃಹತ್ ವಿರೋಧ ವ್ಯಕ್ತವಾಗಿದೆ. ಕೃಷಿ ಭೂಮಿಯನ್ನು ಉಳಿಸಲು ರೈತರು ಹೋರಾಟಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಹೆಚ್ಚುವ ಸಾಧ್ಯತೆ ಇದೆ.
