
ಹಾಸನ: ಚನ್ನರಾಯಪಟ್ಟಣದಲ್ಲಿ ಕಾಡು ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಎಸ್.ಸಿ.ಜ್ಯೋತಿ ತಿಳಿಸಿದರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಶನಿವಾರ ಅರಣ್ಯ ಇಲಾಖೆ, ಚನ್ನರಾಯಪಟ್ಟಣ ಉಪ ವಿಭಾಗ, ಪ್ರಾದೇಶಿಕ ವಲಯದಿಂದ ಆಯೋಜಿಸಲಾಗಿದ್ದ ಕಾಳ್ಗಿಚ್ಚಿನಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಪ್ರಕೃತಿಯನ್ನು ಜೀವಂತವಾಗಿಟ್ಟುಕೊಂಡರೆ ನಾವೆಲ್ಲರೂ ಜೀವಂತವಾಗಿರುತ್ತೇವೆ. ಪ್ರಕೃತಿಗೆ ಮೃತ್ಯು ನೀಡಿದರೆ, ನಾವ್ಯಾರೂ ಉಳಿಯುವುದಿಲ್ಲ. ಕಾಡು ನಾಶದಿಂದ ಪರಿಸರ ಅಸಮತೋಲದನದ ಜತೆಗೆ ಮನುಷ್ಯನ ಜೀವನ ಕ್ರಮದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಾಲಚಕ್ರದಲ್ಲೂ ಬದಲಾವಣೆಯಾಗುತ್ತದೆ. ಮಳೆಗಾಲದಲ್ಲಿ ಸರಿಯಾಗಿ ಮಳೆ ಬರುವುದಿಲ್ಲ. ಬೇಸಿಗೆಯಲ್ಲಿ ಅತಿಯಾದ ಬಿಸಿಲಿರುತ್ತದೆ. ಹೀಗಾಗಿ ಪರಿಸರ ಮತ್ತು ವನ್ಯಜೀವಿ ರಕ್ಷಣೆಯ ಅರಿವು ಅಗತ್ಯವಾಗಿ ಮೂಡಿಸಬೇಕು. ಕಾಡುಗಳ ರಕ್ಷಣೆ ಮತ್ತು ಸಂವರ್ಧನೆ ತುರ್ತು ಅಗತ್ಯವಾಗಿದೆ. ಹತ್ತಾರು ಪಕ್ಷಿ ಸಂಕುಲಗಳು ನಾಶವಾಗಿವೆ ಹಾಗೂ ಕೆಲವು ಅಳಿವಿನಂಚಿನಲ್ಲಿದೆ. ಹುಲಿ, ಸಿಂಹ, ನವಿಲು ಸಹಿತವಾಗಿ ಎಲ್ಲ ಪ್ರಾಣಿ ಪಕ್ಷಿಗಳ ರಕ್ಷಣೆಯಾಗಬೇಕು. ಪ್ರಾಣಿ ಪಕ್ಷಿಗಳ ರಕ್ಷಣೆಯ ಜತೆಗೆ ಅವುಗಳಿಗೆ ಬೇಕಾದ ಆಹಾರ ವ್ಯವಸ್ಥೆ ಮಾಡಬೇಕು. ಮಕ್ಕಳಿಗೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು. ಕಾಂಕ್ರೀಟೀಕರಣಕ್ಕೆ ಬದಲಾಗಿ ಕಾಡುಗಳನ್ನು ಬೆಳೆಸುವ ಪ್ರವೃತ್ತಿ ಹೆಚ್ಚಾಗಬೇಕೆಂದರು.
ಕಾಡು ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಾರ್ವಜನಿಕರು ಮುಖ್ಯವಾಗಿ ಕಾಡಿಗೆ ಬೆಂಕಿ ಬೀಳದಂತೆ ಜಾಗ್ರತೆ ವಹಿಸಬೇಕಾಗಿದೆ. ಕಾಡಿನ ಬೆಂಕಿ ಅನಾಹುತ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯಲಿದೆ,ಕಾಡಿಗೆ ನಿರಂತರ ಬೆಂಕಿ ಬೀಳುವುದರಿಂದ ವನ್ಯಜೀವಿಗಳ ನಾಶ, ಹಳ್ಳ ಕೊಳ್ಳಗಳೆಲ್ಲಾ ಬರಿದಾಗಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಮುಂದೆ ಕುಡಿಯುವ ನೀರಿಗಾಗಿ ಯುದ್ಧ ನಡೆಯಲಿದೆ, ಮುಂದಿನ ಪೀಳಿಗೆಗೆ ಅಮೂಲ್ಯ ಸಸ್ಯ ಭಂಡಾರವನ್ನು ಉಳಿಸುವುದರೊಂದಿಗೆ, ಕಾಳಿಚ್ಚು ಸಂಭವಿಸದಂತೆ ಎಲ್ಲರೂ ಎಚ್ಚರ ವಹಿಸಬೇಕು.ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವುದು ಹೆಚ್ಚಾಗುತ್ತಿದ್ದು ಸಾರ್ವಜನಿಕರಿಗೆ ಕಾಡಿನ ಮಹತ್ವ ಮತ್ತು ಪ್ರಾಣಿ ಪಕ್ಷಗಳ ಪ್ರಪಂಚದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು
ಜಾಗೃತಿ ಕಾರ್ಯಕ್ರಮದಲ್ಲಿ ಬಿ.ಟಿ.ಮಾನವ ಕಲಾತಂಡದ ವತಿಯಿಂದ ಕಾಳ್ಗಿಚ್ಚಿನಿಂದ ಅರಣ್ಯ ಮತ್ತು ವನ್ಯಜೀವಿ ನಾಶದ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ಆರ್ ನಾಗರಾಜಯ್ಯ, ಗಸ್ತು ಅರಣ್ಯ ಪಾಲಕರಾದ ಓ. ದೇವರಾಜು, ಶಿವಕುಮಾರ್, ಅರಣ್ಯ ವೀಕ್ಷಕರಾದ ಮೋಹನ್, ಚೇತನ್, ಮಂಜು, ಸಚಿನ್ ಸೇರಿದಂತೆ ಬಿ.ಟಿ. ಮಾನವ ಕಲಾಸಂಘದ ಕಲಾವಿದರು ಉಪಸ್ಥಿತರಿದ್ದರು.