ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಜಿ.ಪಿ.ಮೆಹ್ರಾ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್ ಮನ್ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಆತನ ಬಳಿ ಇದ್ದ ನಗದು, ಚಿನ್ನ, ಬೆಳ್ಳಿ, ನಿವೇಶನಗಳನ್ನು ಕಂಡು ದಂಗಾಗಿ ಹೋಗಿರುವ ಘಟನೆ ನಡೆದಿದೆ!
ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಾಗಲೇ ಇದೊಂದು ಮಧ್ಯಪ್ರದೇಶದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಪತ್ತೆಯಾದ ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದೆ ಎಂಬುದು ಬಹಿರಂಗಗೊಂಡಿದೆ.
ದಾಳಿ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವುದರಿಂದ ಅಧಿಕಾರಿಗಳು ಹಣ ಎಣಿಸಲು ಯಂತ್ರಗಳನ್ನು ತರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಮೆಹ್ರಾ ನಿವಾಸದಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳು, ಕೇಜಿಗಟ್ಟಲೇ ಬೆಳ್ಳಿ ಪತ್ತೆಯಾಗಿದೆ. ಆದರೆ ಅಧಿಕಾರಿಗಳನ್ನು ದಂಗುಬಡಿಸಿದ್ದು ಫಾರಂಹೌಸ್ ನಲ್ಲಿ ಅಚ್ಚುಕಟ್ಟಾಗಿ ಬರೋಬ್ಬರಿ 17 ಟನ್ ಗಳಷ್ಟು ಜೇನುತುಪ್ಪ ಶೇಖರಿಸಿಟ್ಟಿರುವುದು!
ಶುಕ್ರವಾರ (ಅ.10) ಬೆಳಗ್ಗೆ ಭೋಪಾಲ್ ಮತ್ತು ನರ್ಮದಾಪುರಂ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಡಿಎಸ್ ಪಿ ಶ್ರೇಣಿಯ ನಾಲ್ಕು ಅಧಿಕಾರಿಗಳು ದಾಳಿ ನಡೆಸಿದ್ದರು. ಮಣಿಪುರ ಕಾಲೋನಿಯಲ್ಲಿ ಮೆಹ್ರಾಗೆ ಸೇರಿದ ನಿವಾಸದಲ್ಲಿ ಅಧಿಕಾರಿಗಳು 8.79 ಲಕ್ಷ ರೂ. ನಗದು, 50 ಲಕ್ಷ ಮೌಲ್ಯದ ಚಿನ್ನಾಭರಣ, 56 ಲಕ್ಷ ರೂ.ಗಳ ಫಿಕ್ಸೆಡ್ ಡೆಪಾಸಿಟ್ ದಾಖಲೆ ವಶಪಡಿಸಿಕೊಂಡಿದ್ದರು.
ಆದರೆ ಮೆಹ್ರಾ ಅವರ ಎರಡನೇ ನಿವಾಸವಾದ ಡಾನಾ ಪಾನಿ ಬಳಿಯ ಓಪಲ್ ರೀಜೆನ್ಸಿಯಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ತನಿಖಾಧಿಕಾರಿಗಳು ಸುಮಾರು 26 ಲಕ್ಷ ನಗದು, 3.05 ಕೋಟಿ ರೂಪಾಯಿಗಳ ಮೌಲ್ಯದ 2.6 ಕಿಲೋಗ್ರಾಂಗಳಷ್ಟು ಚಿನ್ನ ಮತ್ತು 5.5 ಕಿಲೋಗ್ರಾಂಗಳಷ್ಟು ಬೆಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಮೆಹ್ರಾನ ನಗರದ ಆಸ್ತಿ-ಪಾಸ್ತಿಯ ಜತೆಗೆ , ನರ್ಮದಾಪುರಂನ ಸೋಹಾಗ್ಪುರದ ಸೈನಿ ಗ್ರಾಮದಲ್ಲಿರುವ ತೋಟದ ಮನೆ ಶ್ರೀಮಂತಿಕೆಯ ಸಾಮ್ರಾಜ್ಯವನ್ನು ಬಹಿರಂಗಪಡಿಸಿದೆ. ಇಲ್ಲಿ, ಅಧಿಕಾರಿಗಳು 17 ಟನ್ ಜೇನುತುಪ್ಪ, ಆರು ಟ್ರ್ಯಾಕ್ಟರ್ಗಳು, ನಿರ್ಮಾಣ ಹಂತದಲ್ಲಿರುವ 32 ಕುಟೀರಗಳು, ಏಳು ಪೂರ್ಣಗೊಂಡ ಕುಟೀರಗಳು ಮತ್ತು ಮೀನು ಸಾಕಣೆ ಸೌಲಭ್ಯಗಳನ್ನು ಹೊಂದಿರುವ ಖಾಸಗಿ ಕೊಳ. ಇದರ ಜೊತೆಗೆ, ಒಂದು ದನದ ಕೊಟ್ಟಿಗೆ, ಒಂದು ದೇವಾಲಯ ಮತ್ತು ಐಷಾರಾಮಿ ಕಾರುಗಳು, ಇದರಲ್ಲಿ ಫೋರ್ಡ್ ಎಂಡೀವರ್, ಸ್ಕೋಡಾ ಸ್ಲಾವಿಯಾ, ಕಿಯಾ ಸೋನೆಟ್ ಮತ್ತು ಮಾರುತಿ ಸಿಯಾಜ್ ಎಲ್ಲವೂ ಮೆಹ್ರಾ ಕುಟುಂಬದ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ.
ಬಳಿಕ ಲೋಕಾಯುಕ್ತ ಅಧಿಕಾರಿಗಳು ಗೋವಿಂದಪುರ ಕೈಗಾರಿಕಾ ಪ್ರದೇಶದಲ್ಲಿರುವ ಕೆಟಿ ಇಂಡಸ್ಟ್ರೀಸ್ಗೆ ದಾಳಿ ನಡೆಸಿದ್ದ ವೇಳೆ, 1.25 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ವಾಣಿಜ್ಯ ಸಂಬಂಧ ದಾಖಲೆಗಳು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಮೆಹ್ರಾನಿಗೆ ಸಂಬಂಧಿಸಿದ ನಿವಾಸ, ತೋಟದ ಮನೆ, ವಾಣಿಜ್ಯ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದು, ಆತನಿಗೆ ಸಂಬಂಧಪಟ್ಟ ಆಸ್ತಿ-ಪಾಸ್ತಿಗಳ ಲೆಕ್ಕಾಚಾರ ಮುಂದುವರಿದಿದ್ದು, ಇದು ನೂರಾರು ಕೋಟಿ ರೂಪಾಯಿಯ ಭ್ರಷ್ಟಾಚಾರವಾಗಿದ್ದು, ವಿಧಿವಿಜ್ಞಾನ ತಂಡ ವಶಪಡಿಸಿಕೊಂಡ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

[…] ಇದನ್ನು ಓದಿ: Lokayukta-ಈ ಭ್ರಷ್ಟನ ಮನೇಲಿ ಕೆಜಿಗಟ್ಟಲೇ ಚಿನ್ನ, … […]