ಕೆ.ಆರ್.ಪೇಟೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡು, ಅಧಿಕಾರ ಸ್ವೀಕಾರ ಮಾಡಿ ಇದೇ ಮೊದಲ ಭಾರಿಗೆ ತವರೂರು ಕೆ.ಆರ್.ಪೇಟೆಗೆ ಆಗಮಿಸಿದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೈಮಗ್ಗ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ಐಪನಹಳ್ಳಿ ಬಿ.ನಾಗೇಂದ್ರಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ತಾಲ್ಲೂಕಿನ ಗಡಿಭಾಗ ಅಶೋಕ್ ನಗರದ ಬಳಿ ಸ್ವಾಗತಿಸಿ, ಬೈಕ್ ರಾಲಿ ಮೂಲಕ ಕೆ.ಆರ್.ಪೇಟೆ ಪಟ್ಟಣದ ವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಂಡು ಪ್ರವಾಸಿ ಮಂದಿರ ವೃತ್ತದಲ್ಲಿ ನಾಗೇಂದ್ರಕುಮಾರ್ ಅವರನ್ನು ಹೆಗಲಮೇಲೆ ಹೊತ್ತು, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಟಿಬಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್ ತಮ್ಮ ರಾಜಕೀಯ ಗುರು್ಳಾದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಅವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ರಾಜ್ಯಸಭೆಯ ಮಾಜಿ ಸಭಾಪತಿ ಕೆ.ರೆಹಮಾನ್ ಖಾನ್ ಅವರ ನಿವಾಸಕ್ಕೆ ಬೇಟಿ ನೀಡಿ ರೆಹಮಾನ್ ಖಾನ್ ಸಹೋದರ ಪುರಸಭಾ ಮಾಜಿ ಅಧ್ಯಕ್ಷ ಕೆ.ಗೌಸ್ ಖಾನ್ ಅವರಿಂದ ಅಭಿನಂದನೆ ಸ್ವೀಕಾರ ಮಾಡಿದರು.

ನಂತರ ಪ್ರವಾಸಿ ಮಂದಿರದಲ್ಲಿ ಸಾವಿರಾರು ಅಭಿಮಾನಿಗಳಿಂದ ಅಭಿನಂದನೆ ಸ್ವೀಕಾರ ಮಾಡಿ ಮಾತನಾಡಿದ ಬಿ.ನಾಗೇಂದ್ರಕುಮಾರ್ ಅವರು ಕಳೆದ 30ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ನಿಷ್ಠಾವಂತ ಕಾರ್ಯಕರ್ತನಾಗಿ ಶ್ರಮಿಸಿದ ನನ್ನನ್ನು ಗುರುತಿಸಿ ಪ್ರತಿಷ್ಠಿತ ಕರ್ನಾಟಕ ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಸೇರಿದಂತೆ ನನ್ನ ಆಯ್ಕೆಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ರಾಜ್ಯದ ಕೈಮಗ್ಗ ಇಲಾಖೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕೈಮಗ್ಗ ವೃತ್ತಿ ಮಾಡುವವರ ಹಿತಕಾಯಲು, ಕೈಮಗ್ಗ ಉತ್ಪನ್ನಗಳು ಹಾಗೂ ಮಾರಾಟ ವ್ಯವಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಒಳ್ಳೆಯ ಹೆಸರು ತರಲು ಶಕ್ತಿಮೀರಿ ದುಡಿಯುತ್ತೇನೆ. ಈ ಮೂಲಕ ಸಿಎಂ, ಡಿಸಿಎಂ ಅವರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಸಿ.ಆರ್.ರಮೇಶ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ.ಮಂಜೇಗೌಡ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಕಾಡಾ ನಿರ್ದೇಶಕರಾದ ರುಕ್ಮಾಂಗದ, ಜಿಲ್ಲಾ ಕುರುಬರ ಸಂಘಸ ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್, ತಾಲ್ಲೂಕು ದರಖಾಸ್ತು ಕಮಿಟಿ ಸದಸ್ಯರಾದ ಬಸ್ತಿ ರಂಗಪ್ಪ, ಮಡುವಿನಕೋಡಿ ಕಾಂತರಾಜು, ತಾ.ಪಂ.ಮಾಜಿ ಸದಸ್ಯರಾದ ವಿನೂತಸುರೇಶ್, ಮೂಡನಹಳ್ಳಿ ನಾಗೇಂದ್ರ, ಪುರಸಭಾ ಅಧ್ಯಕ್ಷೆ ಪಂಕಜಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸದಸ್ಯರಾದ ಡಿ.ಪ್ರೇಮಕುಮಾರ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಹೆಚ್.ಎ.ಕೃಷ್ಣೇಗೌಡ, ಕೆಡಿಪಿ ಸದಸ್ಯ. ಆಕಾಶ್, ಬೀರುವಳ್ಳಿ ಸೊಸೈಟಿ ಅಧ್ಯಕ್ಷ ನವೀನ್, ಆಲಂಬಾಡಿಕಾವಲು ಸೊಸೈಟಿ ಅಧ್ಯಕ್ಷ ಮೋಹನ್, ಡೇರಿ ಅಧ್ಯಕ್ಷ ದಿವಾಕರ್ ಕೆ.ಮಾಸ್ತೀಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರತಿಮಾ, ಲೋಲಾಕ್ಷಿ, ಶಿವಮ್ಮ, ಲತಾ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
