ಕೆ.ಆರ್.ಪೇಟೆ,ಅ.13: ನಾನು ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡುತ್ತೇನೆ. ನಂತರ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಗ್ರಾಮಗಳನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲಾ ಜಾತಿ, ಧರ್ಮ, ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಅನುಧಾನ ಹಂಚಿಕೆ ಮಾಡಿ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದೇನೆ. ಆದರೆ ನಮ್ಮ ಸರ್ಕಾರ ಇಲ್ಲದ ಕಾರಣ ನನ್ನ ಹಾಗೂ ಮತದಾರರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರಾದ ಹೆಚ್.ಟಿ.ಮಂಜು ಹೇಳಿದರು.

ಅವರು ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಶ್ರೀ ಈಶ್ವರ ದೇವಾಲಯದ ಆವರಣದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುಧಾನದ 5ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಕಾಂಕ್ರಿಟ್ ನೆಲಹಾಸು ಮತ್ತು ದೇವಾಲಯಕ್ಕೆ ಬಣ್ಣ ಬಳಿಯುವ ಕಾಮಗಾರಿಯ ಉದ್ಘಾಟನೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಬಳಿಕ ಗ್ರಾಮಸ್ಥರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಶಾಸಕನಾದೆ. ಆದರೆ ರಾಜ್ಯದಲ್ಲಿ ನಮ್ಮ ಪಕ್ಷವು ಜೆಡಿಎಸ್ ಅಧಿಕಾರಕ್ಕೆ ಬರಲಿಲ್ಲ. ಈಗ ಬಂದಿರುವ ಕಾಂಗ್ರೆಸ್ ಸರ್ಕಾರವು ಕೇವಲ 5 ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಮುಂದಾಗಿದೆ. ಇತರೆ ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರಾವರಿ, ಕುಡಿಯುವ ನೀರು, ಗ್ರಾಮಾಭಿವೃದ್ಧಿ, ನಗರಾಭಿವೃದ್ಧಿ, ಕೆರೆಗಳ ಅಭಿವೃದ್ದಿ, ಕೃಷಿ, ತೋಟಗಾರಿಕೆ, ರೇಷ್ಮೆ ಅಭಿವೃದ್ಧಿಗೆ ಸೇರಿದಂತೆ ಯಾವುದಕ್ಕೂ ಅನುಧಾನ ನೀಡುತ್ತಿಲ್ಲ ಇದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಭಾರೀ ಹಿನ್ನೆಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ವಿರೋಧ ಪಕ್ಷದ ಶಾಸಕರು ಇರುವ ಕ್ಷೇತ್ರಗಳನ್ನು ಕಡೆಗಣಿಸುತ್ತಿದೆ. ಅನುಧಾನ ನೀಡದೇ ಇರುವ ಬಗ್ಗೆ ಆಡಳಿತ-ವಿರೋಧ ಪಕ್ಷಗಳ ಶಾಸಕರಿಂದ ಭಾರೀ ಅಸಮಧಾನ ಸ್ಪೋಟಗೊಂಡ ನಂತರ ಈಗ ಎರಡೂವರೆ ವರ್ಷಗಳ ನಂತರ ವಿರೋಧ ಪಕ್ಷಗಳ ಶಾಸಕರಿಗೆ ತಲಾ 25ಕೋಟಿ ಅನುಧಾನ ನೀಡಿದೆ.

ಇದು ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಯಂತಾಗಿದೆ. ತಾಲ್ಲೂಕಿನಲ್ಲಿರುವ 400ಹಳ್ಳಿಗಳಿಗೆ ಏನೇನು ಸಾಲದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತೀರ ಅಗತ್ಯವಿರುವ ಗ್ರಾಮಗಳಿಗೆ 10ಲಕ್ಷ, 20ಲಕ್ಷ ಹೀಗೆ ಹಂಚಿಕೆ ಮಾಡಿ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. 2028ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತ. ಆಗ ನಿಮ್ಮ ಆಶೀರ್ವಾದ ಸದಾ ಹೀಗೇಯೇ ಇದ್ದರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುಧಾನ ತಂದು ಕೊಡುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಪಾಪೇಗೌಡ, ನಾಗೇಗೌಡ, ಕುಮಾರ್, ಶಿವರಾಂ, ಮಹಾದೇವ್, ಚಿಕ್ಕೇಗೌಡ, ನಾರಾಯಣ್, ಅಭಿಲಾಷಕೃಷ್ಣಾಚಾರ್, ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಗೋವಿಂದರಾಜು, ವಿಠಲಾಪುರ ಪಿಡಿಓ ರವಿಕುಮಾರ್, ಕಾರ್ಯದರ್ಶಿ ಸೀಮಾಬೇಗಂ ಸೇರಿದಂತೆ ನೂರಾರು ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷಿö್ಮಚೌದರಿ ಅವರು ಗ್ರಾಮ ಬೇಟಿಯ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಮನವಿ ಮಾಡಿದಾಗ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಪತ್ರ ಬರೆದು ಅನುಧಾನಕ್ಕೆ ಶಿಫಾರಸ್ಸು ಮಾಡಿದ್ದರು.
ಡಾ.ನಾಗಲಕ್ಷ್ಮಿ ಚೌೌಧರಿ ಅವರ ಶಿಫಾರಸ್ಸಿನ ಮೇರೆಗೆ ಹಲವು ಅಭಿವೃದ್ಧಿ ಕಾಮಗಾರಿಗೆ ಮಂಡ್ಯ ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 35ಲಕ್ಷ ರೂಪಾಯಿ ಅನುಧಾನ ಬಿಡುಗಡೆಯಾಗಿದೆ ಆದರೆ ತಾಂತ್ರಿಕ ಕಾರಣಗಳಿಂದ ಇದೂವರೆವಿಗೂ ಕಾಮಗಾರಿ ಆರಂಭವಾಗಿಲ್ಲ ಕೂಡಲೇ ಅನುಧಾನ ವಾಪಸ್ ಹೋಗದಂತೆ ಆದಷ್ಟು ಬೇಗ ತಾಂತ್ರಿಕ ತೊಡಕು ನಿವಾರಣೆ ಮಾಡಿ ಕಾಮಗಾರಿ ಆರಂಭಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಆದಷ್ಟು ಬೇಗ ಸದರಿ ಅನುಧಾನ ಬಿಡುಗಡೆ ಇರುವ ತಾಂತ್ರಿಕ ದೋಷವನ್ನು ಸರಿಪಡಿಸಿ ಅನುಧಾನ ಸದ್ಬಳಕೆ ಮಾಡಿ ಗ್ರಾಮದ ಅಭಿವೃದ್ದಿಗೆ ತಾವೂ ಸಹ ಅಗತ್ಯ ಅನುಧಾನ ನೀಡುವ ಭರವಸೆ ನೀಡಿದರು.
– ಶ್ರೀನಿವಾಸ್ ಆರ್.
