ಕೆ.ಆರ್.ಪೇಟೆ,ಅ.14 : ಸರ್ಕಾರಿ ಸೇವೆ ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೀಸಲಾತಿಯ ಪ್ರತಿಫಲ ಜೊತೆಗೆ ಹಾಗೂ ಪ್ರತಿಭಾವಂತರಿಗೆ ಮಾತ್ರ ಸಿಗುವಂತಹ ಅಪರೂಪದ ಅವಕಾಶವಾಗಿದೆ. ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ತಮಗೆ ಸಿಕ್ಕಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಸೇವಾವಧಿಯಲ್ಲಿ ಪ್ರಾಮಾಣಕವಾದ ಸೇವೆಯನ್ನು ಜನಸಾಮಾನ್ಯರಿಗೆ, ರೈತರಿಗೆ ನೀಡಿದರೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ನಾಟನಹಳ್ಳಿ ಸೋಮರಾಜು ಹೇಳಿದರು.

ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ನಾಡಕಚೇರಿಗೆ ಉಪ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕಾರ ಮಾಡಿರುವ ಜಗದೀಶ್ ಅವರನ್ನು ದಸಂಸ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಶೃಂಗೇರಿ ತಾಲ್ಲೂಕು ಕಚೇರಿಯಿಂದ ಬೂಕನಕೆರೆಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡಿದ ಉಪ ತಹಸೀಲ್ದಾರ್ ಜಗದೀಶ್ ಅವರು ಸೇವೆ ಸಲ್ಲಿಸಿರುವ ಕಡೆಗಳಲ್ಲಿ ದಕ್ಷ, ಪ್ರಾಮಾಣಿಕವಾಗಿ ಉತ್ತಮ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆದಿರುವ ಹಿನ್ನೆಲೆಯಲ್ಲಿ ತಾಲ್ಲೂಕು ದಸಂಸ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ. ನಮ್ಮ ತಾಲ್ಲೂಕಿನಲ್ಲಿ ಅದೇ ರೀತಿಯ ಉತ್ತಮ ಸೇವೆ ಸಲ್ಲಿಸಿ ಮತ್ತಷ್ಟು ಹೆಸರು ಪಡೆದುಕೊಳ್ಳಲಿ, ಬೂಕನಕೆರೆ ಹೋಬಳಿಯ ಜನಸಾಮಾನ್ಯರಿಗೆ, ರೈತರಿಗೆ ತ್ವರಿತ ಗತಿಯಲ್ಲಿ ಕಂದಾಯ ಇಲಾಖೆಯ ಸೇವೆಗಳು ಸಕಾಲದಲ್ಲಿ ದೊರೆಯುವಂತಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬೂಕನಕೆರೆ ನಾಡಕಚೇರಿಯ ಉಪತಹಸೀಲ್ದಾರ್ ಜಗದೀಶ್ ಅವರು ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಅನಿವಾರ್ಯವಾಗಿದೆ. ಶೃಂಗೇರಿ ತಾಲ್ಲೂಕು ಕಚೇರಿಯಲ್ಲಿ ಹಲವು ವರ್ಷಗಳ ಕಾಲ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಉಪ ತಹಸೀಲ್ದಾರ್ ಆಗಿ ಮುಂಬಡ್ತಿ ಪಡೆದು ಕೆ.ಆರ್.ಪೇಟೆಗೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ನಾಡಕಚೇರಿಯ ಉಪ ತಹಸೀಲ್ದಾರ್ ಆಗಿ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡಿದ್ದೇನೆ. ನನ್ನ ಶಕ್ತಿ ಮೀರಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಕೆ.ಆರ್.ಪೇಟೆ ತಾಲ್ಲೂಕಿನ ರೈತರು, ಸಾರ್ವಜನಿಕರಿಗೆ ನನ್ನ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಪ ತಹಸೀಲ್ದಾರ್ ಜಗದೀಶ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಚಿಕ್ಕಗಾಡಿಗನಹಳ್ಳಿ ಎನ್.ಪರಮೇಶ್, ತಾಲೂಕು ಸಂಚಾಲಕ ನಾಟನಹಳ್ಳಿ ಸೋಮರಾಜು, ಮತ್ತು ತಾಲೂಕು ಸಂಘಟನಾ ಸಂಘಟನಾ ಸಂಚಾಲಕ ಜಕ್ಕನಹಳ್ಳ್ಳಿ ಗೋಪಿ, ಚಂದ್ರು, ರಾಜಸ್ವ ನಿರೀಕ್ಷಕಿ ಚಂದ್ರಕಲಾಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
