ಕೆ.ಆರ್.ಪೇಟೆ,ಅ.14: ಕೇಂದ್ರ ಸರ್ಕಾರದ ಯೋಜನೆಗಳು ಇಲ್ಲದೇ ಇದ್ದಿದ್ದರೆ ಗ್ರಾಮ ಪಂಚಾಯಿತಿಗಳು ಬಾಗಿಲು ಮುಚ್ಚುವ ಸ್ಥಿತಿ ಇರುತ್ತಿತ್ತು. ನರೇಗಾ, 15ನೇ ಹಣಕಾಸು, ಪಿಎಂ ಆವಾಸ್ ಸೇರಿದಂತೆ ಹಲವು ಕೇಂದ್ರ ಸರ್ಕಾರದ ಯೋಜನೆಗಳು ಗ್ರಾಮ ಪಂಚಾಯಿತಿಗಳನ್ನು ಉಳಿಸಿವೆ ಎಂದು ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಅವರು ಹೇಳಿದರು.
ಅವರು ತಾಲ್ಲೂಕಿನ ತೆಂಡೇಕೆರೆ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸಭಾ ಭವನವನ್ನು ಉದ್ಘಾಟಿಸಿ, ಅಂಚೆಮುದ್ದನಹಳ್ಳಿಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ, ಹಾದನೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ, ರಾಯಸಮುದ್ರ, ಶೀಳನೆರೆ ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷಗಳು ಕಳೆದಿದೆ. ಒಂದೇ ಒಂದು ಆಶ್ರಯ ಮನೆ ಮಂಜೂರು ಮಾಡಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಒಂದೇ ಒಂದು ರೂಪಾಯಿ ಅನುಧಾನ ನೀಡಿಲ್ಲ. ಕೇವಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ನೀಡಿ ಕಾಲ ಕಳೆಯುತ್ತಿದೆ. ಅದನ್ನೂ ಕೂಡ ಸರಿಯಾಗಿ ನೀಡುತ್ತಿಲ್ಲ ಎಂದು ಸದಸ್ಯರು ದೂರುತ್ತಿದ್ದಾರೆ. ರಾಷ್ಟçಪಿತ ಮಹಾತ್ಮ ಗಾಂಧೀಜಿಯವರು ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಆದಂತೆ ಎಂದು ಹೇಳಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಅನುಧಾನ ನೀಡದೇ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಈ ಮೂಲಕ ಗಾಂಧೀಜಿಯವರಿಗೆ ಅವಮಾನ ಮಾಡುತ್ತಿದೆ.

ಈಗಿನ ಗ್ರಾಮ ಪಂಚಾಯಿತಿ ಸದಸ್ಯರು 1ವರ್ಷ ಕೋವಿಡ್ನಲ್ಲಿ ಕೆಲಸ ಮಾಡಲು ಆಗಿಲ್ಲ. ಈಗ ರಾಜ್ಯ ಸರ್ಕಾರ ಎರಡೂವರೆ ವರ್ಷದಿಂದ ಒಂದೇ ಒಂದು ರೂಪಾಯಿ ಅನುಧಾನ ನೀಡಿಲ್ಲ. ಇದರಿಂದ ಈ ಭಾರಿ ಸದಸ್ಯರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಇನ್ನು ಮೂರೂವರೆ ತಿಂಗಳು ಗ್ರಾ.ಪಂ.ಸದಸ್ಯರಿಗೆ ಅಧಿಕಾರ ನಡೆಸುವ ಕಾಲಾವಕಾಶ ಇದೆ. ಈಗಲಾದರೂ ರಾಜ್ಯ ಸರ್ಕಾರವು ದೊಡ್ಡ ಮನಸ್ಸು ಮಾಡಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಕನಿಷ್ಠ 100ಮನೆಗಳನ್ನಾದರೂ ನೀಡಿದರೆ ಗ್ರಾ.ಪಂ.ಸದಸ್ಯರು ಅಧಿಕಾರದಿಂದ ಇಳಿಯುವಾಗ ಬಡವರಿಗೆ ಮನೆಗಳನ್ನಾದರೂ ಕೊಟ್ಟು ಇಳಿಯಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.

ಶಾಸಕರಿಗೆ ಸಂವಿಧಾನ ಬದ್ದವಾಗಿ ನೀಡುವ ಅನುಧಾನವನ್ನಾದರೂ ನೀಡಿದರೆ ಗ್ರಾಮಗಳ ಅಭಿವೃದ್ಧಿಗೆ ಸದ್ಬಳಕೆ ಮಾಡುತ್ತೇವೆ ಅದನ್ನೂ ನೀಡದೇ ಗ್ರಾಮೀಣ ಜನರ ಬದುಕಿನೊಂದಿಗೆ ರಾಜ್ಯ ಸರ್ಕಾರವು ಚೆಲ್ಲಾಟವಾಡುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ರಾಜ್ಯ ಸರ್ಕಾರದ ನಡೆಯ ವಿರುದ್ದ ಬೇಸರ ವ್ಯಕ್ತಪಡಿಸಿದರು. ಅಕ್ಟೋಬರ್ ತಿಂಗಳು ಕಳೆಯುತ್ತಾ ಗಾಂಧೀ ಗ್ರಾಮ ಪುರಸ್ಕಾರ ನೀಡಲು ಅನುಧಾನವಿಲ್ಲದೇ ಸಂಕಷ್ಟದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ ಎಂದು ಹೇಳಿದರು.

ತೆಂಡೇಕೆರೆ ಗ್ರಾಮ ಪಂಚಾಯಿತಿ ಸವಿತ ಇಂದ್ರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ.ಇಓ ಸುಷ್ಮಾ.ಕೆ, ತಾಲ್ಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಪಿ.ಆರ್.ಇ.ಡಿ ಕಾರ್ಯಪಾಲಕ ಇಂಜಿನಿಯರ್ ಎಂ.ಎಸ್.ಮಂಜುಳ, ಇಂಜಿನಿಯರ್ ಲೋಕೇಶ್, ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ಚೇತನ್, ತೆಂಡೇಕೆರೆ ಗ್ರಾ.ಪಂ.ಪಿಡಿಓ ಕೆ.ಎಸ್.ಕುಮಾರ್, ಸೌಮ್ಯ, ಗ್ರಾ.ಪಂ.ಉಪಾಧ್ಯಕ್ಷೆ ನಾಗರತ್ನ ಗಂಗಾಧರ್, ಸದಸ್ಯರಾದ ಹೆಚ್.ಎಂ.ಕಾಂತರಾಜು, ಗುಂಡಣ್ಣ, ಸ್ವಾಮೀಗೌಡ, ರವಿಕುಮಾರ್, ರಂಗರಾಜು, ಅಂಚನಹಳ್ಳಿ ರಾಜು, ಸೌಭಾಗ್ಯ, ಜ್ಯೋತಿಬಸವರಾಜು, ಗಂಗಮ್ಮಕುಮಾರ್, ರೋಹಿಣಿಮಹೇಶ್, ಶ್ರೀನಿವಾಸ್, ಜಯಮ್ಮಸಣ್ಣೇಗೌಡ, ಶಿಲ್ಪಶೇಖರ್, ಸವಿತ, ಮುಖಂಡರಾದ ಸ್ವಾಮೀಗೌಡ, ಅಂಚನಹಳ್ಳಿ ಸುಬ್ಬಣ್ಣ, ರಾಯಸಮುದ್ರ ಗೋಪಿನಾಥ್, ಹರಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೇಶ್, ಚೆಸ್ಕಾಂ ಇಂಜಿನಿಯರ್ ಸುನಿಲ್ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
