
ಶುಭೋದಯ
*************
ಸಮಯ ಬದಲಾಗುತ್ತೆ ಪರಿಸ್ಥಿತಿ ಅಲ್ಲ,
ಕಾಲ ಕಳೆಯುತ್ತಿದೆ ಅಂದುಕೊಂಡ ಹಾಗಲ್ಲ,
ಸಮಯಕ್ಕೂ ಪರಿಸ್ಥಿತಿಗೂ ಸಂಬಂಧ ಇಲ್ಲ.
*************
1. ಕರ್ನಾಟಕ ಸ್ಪಷ್ಟ ನಿಲುವು…”; ಬಸ್ ಸಂಚಾರ ಸ್ಥಗಿತ ಕುರಿತು ‘ಮಹಾ’ ಸರ್ಕಾರ ಮಹತ್ವದ ಹೇಳಿಕೆ
ಬೆಳಗಾವಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತವಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವೇ ಮಾಹಿತಿ ನೀಡಿದೆ. ಹೌದು.. ಕರ್ನಾಟಕ ನಮ್ಮ ಆಡಳಿತದೊಂದಿಗೆ ಚರ್ಚೆಯಲ್ಲಿ ತೊಡಗುವವರೆಗೆ, ರಾಜ್ಯದಿಂದ ಕರ್ನಾಟಕಕ್ಕೆ ತೆರಳುವ ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಹೇಳಿದ್ದಾರೆ.
*************************
2.ವಿದ್ಯುತ್ ಕ್ಷೇತ್ರದ ಖಾಸಗೀಕರಣ: ಜೂನ್ 26 ರಂದು ದೇಶಾದ್ಯಂತ ಪ್ರತಿಭಟನೆಗೆ AIPEF ಕರೆ!
ನವದೆಹಲಿ: ವಿದ್ಯುತ್ ಕ್ಷೇತ್ರದ ಖಾಸಗೀಕರಣದ ವಿರುದ್ಧ ಅಖಿಲ ಭಾರತ ವಿದ್ಯುತ್ ಎಂಜಿನಿಯರ್ ಒಕ್ಕೂಟ (AIPEF) ಜೂನ್ 26 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ವಿದ್ಯುತ್ ಉಪಯುಕ್ತತೆಗಳು ಮತ್ತು ಇಲಾಖೆಗಳ ಖಾಸಗೀಕರಣ ವಿರೋಧಿಸಿ ಜೂನ್ 26 ರಂದು ಪ್ರತಿಭಟನೆ ನಡೆಸಲು ವಿದ್ಯುತ್ ನೌಕರರು ಮತ್ತು ಎಂಜಿನಿಯರ್ ಗಳ ರಾಷ್ಟ್ರೀಯ ಸಮನ್ವಯ ಸಮಿತಿ (NCCOEEE) ನಿರ್ಧರಿಸಿದೆ ಎಂದು AIPEF ಭಾನುವಾರ ಹೇಳಿದೆ.
*********************************
3.ಜಾತಿ ಹೆಸರಲ್ಲಿ ಹೊಡೆದಾಳುವವರ ಮಧ್ಯೆ ನಾವು ಹಿಂದೂಗಳನ್ನು ಒಗ್ಗೂಡಿಸಬೇಕು: RSS ಮುಖ್ಯಸ್ಥ ಮೋಹನ್ ಭಾಗವತ್
ಗುವಾಹಟಿಯಲ್ಲಿ ಆರ್ಎಸ್ಎಸ್ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮೋಹನ್ ಭಾಗವತ್, ನಾವು ಎಲ್ಲಾ ಹಿಂದೂಗಳನ್ನು ಒಂದೇ ಎಂದು ಪರಿಗಣಿಸುತ್ತೇವೆ. ಆದರೆ ಕೆಲವರು ಜಾತಿಯ ಆಧಾರದ ಮೇಲೆ ಅವರ ನಡುವೆ ತಾರತಮ್ಯ ಮಾಡುತ್ತಾರೆ. ನಾವು ಎಲ್ಲಾ ಹಿಂದೂಗಳನ್ನು ಒಂದುಗೂಡಿಸಬೇಕು ಮತ್ತು ಅವರ ಸಂತೋಷ ಮತ್ತು ದುಃಖದಲ್ಲಿ ಅವರೊಂದಿಗೆ ಇರಬೇಕು. ಸಂಘದ ಶಾಖೆ ಇರುವಲ್ಲೆಲ್ಲಾ ನಾವು ಹಿಂದೂಗಳನ್ನು ಒಗ್ಗೂಡಿಸಲು ಕೆಲಸ ಮಾಡಿದ್ದೇವೆ. ಸಂಘ ಇರುವಲ್ಲೆಲ್ಲಾ ನಾವು ಹಿಂದೂಗಳ ನೀರು, ಭೂಮಿ, ಮನೆಗಳು, ದೇವಾಲಯಗಳು ಮತ್ತು ಸ್ಮಶಾನಗಳನ್ನು ರಕ್ಷಿಸಬೇಕು ಎಂದರು.
*************************************
4.”ಗುಲಾಮಿ ಮನಸ್ಥಿತಿ…”: ಮಹಾಕುಂಭ ಮೇಳದ ಬಗ್ಗೆ ಟೀಕೆಗಳಿಗೆ ಪ್ರಧಾನಿ ಮೋದಿ ಕೆಂಡಾಮಂಡಲ
ಭಾಗೇಶ್ವರ್ ಧಾಮ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾ ಕುಂಭಮೇಳದ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ, ಅದನ್ನು ಟೀಕಿಸುವ, ಜನರನ್ನು ವಿಭಜಿಸುವಲ್ಲಿ ತೊಡಗಿರುವ ನಾಯಕರ ಗುಂಪೊಂದು ಇದೆ ಮತ್ತು ಅನೇಕ ಬಾರಿ ವಿದೇಶಿ ಶಕ್ತಿಗಳು ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ” ಎಂದು ಮೋದಿ ಆರೋಪಿಸಿದ್ದಾರೆ.
***************************************
5.ಮೇಘಾಲಯ: ಅಕ್ರಮವಾಗಿ ಭಾರತ ಪ್ರವೇಶಿಸಿದ ಆರು ಬಾಂಗ್ಲಾದೇಶಿಯರ ಬಂಧನ
ಶಿಲ್ಲಾಂಗ್: ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಭಾನುವಾರ ಬಂಧಿಸಿದ್ದಾರೆ. ಅವರಲ್ಲಿ ಕೆಲವರು ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡಿದ್ದವರು ಇದ್ದಾರೆ. ಮತ್ತೆ ಉದ್ಯೋಗ ಅರಸಿ ಮುಂಬೈಗೆ ಹೋಗಲು ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಗಡಿ ದಾಟಿದ ನಂತರ ಅವರನ್ನು ಬಂಧಿಸಲಾಗಿದೆ.
***************************
ಶುಭದಿನ