ಆದಿ ಮಾನವ ವಿಕಸಿತಗೊಂಡು ಶಿಲಾಯುಗದಲ್ಲಿ ಮಾನವ ಆಗಿದ್ದಾನೆ ಮತ್ತು ಕಾಲಾ ನಂತರ ಬದಲಾವಣೆ ಹೊಂದಿ ಮನುಷ್ಯನಾದ ಎನ್ನುವ ವಿಚಾರ ವಿಕಸಿತ ಜಗತ್ತಿನ ಪುಟಗಳಲ್ಲಿ ಬರೆಯಲಾಗಿದೆ.
ಸಾವಿರಾರು ವರ್ಷಗಳು ಕಳೆದ ನಂತರ ಬದಲಾದ ಮಾನವ ತನ್ನ ಆಯುಧಗಳನ್ನು ತಾನೆ ತಯಾರಿಸಿ ಮತ್ತು ತನ್ನದೇ ಆದ ಗುಂಪುಗಳ ಚಿಹ್ನೆ ವಿನ್ಯಾಸ ಮಾಡಿದವನಾಗಿದ್ದಾನೆ. ಕಾಲ ಮುಂದುವರಿದಂತೆ ಅವರವರ ಆಚರಣೆ ಮತ್ತು ನಡುವಳಿಕೆಗೆ ತಕ್ಕಂತೆ ಕೆಲವು ಗುಂಪುಗಳು ಹುಟ್ಟಿಕೊಂಡವು ಎಂಬುದು ಇತಿಹಾಸ. ಈ ಗುಂಪುಗಳ ಸಂಖ್ಯಾ ಬಲ, ತಯಾರಿಸಿದ ಆಯುಧ, ಶಕ್ತಿ ಪ್ರದರ್ಶನಗಳ ಆಧಾರಗಳ ಮೇಲೆ ಗುಂಪುಗಳ ಮಧ್ಯೆ ಸಂಘರ್ಷಗಳು ನಡೆದವು.
ಒಂದು ಗುಂಪಿನ ಭಾಷೆ ಮತ್ತೊಂದು ಗುಂಪಿನ ಸದಸ್ಯರಿಗೆ ಅರ್ಥ ಆಗದಂತಹ ಸಮಯವದು. ಆದುದರಿಂದ ಆ ಗುಂಪಿನ ಮುಖ್ಯಸ್ಥ ಇತರೆ ಗುಂಪುಗಳ ಮುಖ್ಯಸ್ಥರಿಗೆ, ಸಮಾನ ಅರ್ಥ ಆಗುವಂತಹ ಚಿಹ್ನೆಗಳನ್ನು ವಿನ್ಯಾಸ ಮಾಡಿದ್ದರು. ಈ ಚಿಹ್ನೆಗಳು ಸಂಘರ್ಷ ನಿಲ್ಲಬೇಕಾ, ವಿರಾಮ ಪಡೆಯಬೇಕೆ ಅಥವಾ ಮುಂದುವರಿಯಬೇಕೆ ಇತ್ಯಾದಿಗಳನ್ನು ತಿಳಿಸುವಂತಾದ್ದು. ಇನ್ನೂ ಮುಂದುವರಿದಂತೆ ಗುಂಪುಗಳ ಮಧ್ಯೆ ನಡೆಯುವ ಸಂವಹನೆ, ಈ ತರಹದ ಚಿಹ್ನೆಗಳಿಂದಲೇ ಆಗುತ್ತಿತ್ತು. ಇಂತಹ ಚಿಹ್ನೆಗಳ ಅನಾವರಣ ಆ ಗುಂಪಿನ ಪಂಡಿತರಿಗೆ ಅನಿವಾರ್ಯ ಆಗಿತ್ತು ಎಂಬುದನ್ನು ಪೌರಾಣಿಕ ಸ್ಥಳಗಳಲ್ಲಿ ಪುರಾತತ್ವ ಇಲಾಖೆಗಳು ಉತ್ಖನನ ಮಾಡಿದಾಗ ಸಿಕ್ಕ ಕುರುಹುಗಳಿಂದ ಕಂಡು ಕೊಂಡಿದ್ದಾರೆ.

“ತಂತ್ರ”ದ ಉದ್ದೇಶ ಅಂತಹ ಚಿಹ್ನೆಗಳ ಅರ್ಥಗಳನ್ನು ಅನಾವರಣ ಮಾಡುವುದೇ ಆಗಿದೆ. ಪುರಾತತ್ವ ಉತ್ಖನನ ಸಂದರ್ಭಗಳಲ್ಲಿ ಸಿಕ್ಕ ಚಿಹ್ನೆಗಳನ್ನು ಒಳಗೊಂಡ ಕಲ್ಲು, ವೀರ ಕಲ್ಲು, ವಿವಿಧ ಲೋಹದ ಹಾಳೆಗಳು, ಬಿತ್ತಿ ಚಿತ್ರಗಳನ್ನು ಬಿಂಬಿಸುವ ಕಲ್ಲಿನ ಪದರಗಳನ್ನು ಇಂದಿನ ಪಂಡಿತರು, ವಿದ್ವಾಂಸರು ಮತ್ತು ಇತಿಹಾಸಗಾರರು ಇಂತಹ ರಹಸ್ಯ ಚಿಹ್ನೆ ಮತ್ತು ಲಿಪಿ ಭೇದಿಸುವುದರಲ್ಲಿ ಯಶಸ್ವಿ ಆಗುತ್ತಿದ್ದಾರೆ. ಪ್ರಪಂಚಾದ್ಯಂತ ಚಿಹ್ನೆಗಳನ್ನು ಭೇದಿಸಿ ಅರ್ಥ ಮಾಡಿಕೊಳ್ಳುವುದು, ರಹಸ್ಯವನ್ನು ತಿಳಿದಿಕೊಳ್ಳುವುದು, ನಿಧಿಯನ್ನು ಕಂಡು ಹಿಡಿಯುವುದು, ಅತೀಂದ್ರಿಯ ಶಕ್ತಿ ಅಸ್ವಾದಿಸುವುದು, ಪೌರಾಣಿಕ ವಿಷಯಗಳನ್ನು ತಿಳಿಯುವುದು ಇತ್ಯಾದಿ ಇಂದೂ ಸಹ ನಡೆಯುತ್ತಾ ಬಂದಿದೆ ಮತ್ತು ಹಲವಾರು ಚಲನ ಚಿತ್ರಗಳು ಬಂದು ಹೋಗಿವೆ . ಆದರೆ ಕೆಲವೇ ಕೆಲ ತಾಂತ್ರಿಕರು ಈ ಚಿಹ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮುಗ್ಧರನ್ನು ಭೌತಿಕ ಆಸೆಗಳಿಗೆ ಮೋಸ ಮಾಡುತ್ತಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಪ್ರಪಂಚದಲ್ಲಿ ನೂರಾರು ದಾರ್ಶನಿಕರು ದೇವತೆಗಳ ಭಂಗಿ, ಕೈ ಮುದ್ರೆ, ಕಣ್ಣುಗಳ ಸನ್ನೆ, ಅನುರಾಗ, ಮಿಲನ ಭಂಗಿಗಳು, ಚಕ್ರ ವಿನ್ಯಾಸ, ಕುಂಡಲಿನಿ ಶಾಸ್ತ್ರಗಳನೆಲ್ಲಾ ತಮ್ಮ ತಮ್ಮ ಚಿಹ್ನೆ ಕೃತಿಗಳ ಮೂಲಕ ಪ್ರಪಂಚಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಈ ಚಿಹ್ನೆಗಳು ಯಂತ್ರ ಮತ್ತು ಮಂತ್ರ ಸಂಯೋಗದಿಂದ ಮಾದರಿ, ರೂಪ, ನಮೂನೆಗಳಿಂದ ಬರೆದಿದ್ದಾರೆ ಹಾಗು ಅದನ್ನೆ ಶಿಲ್ಪಿಗಳು ದೇವಸ್ಥಾನಗಳ ಗೋಡೆಗಳಲ್ಲಿ ಬಿತ್ತಿ ಚಿತ್ರಗಳನ್ನು ಕೆತ್ತಿದ್ದಾರೆ.

ನನ್ನ ವಂಶಸ್ತರಿಂದ ಬಂದ ತಾಮ್ರದ ಹಾಳೆಗಳಲ್ಲಿ ಕಂಡ ಯಂತ್ರ ವಿನ್ಯಾಸ ನನ್ನ ಕುತೂಹಲಕ್ಕೆ ಕಾರಣವಾಯಿತು. ಗಮನ ಕೊಟ್ಟಾಗ, ಅಲ್ಲಿದ್ದ ರೂಪ ರೇಖಾ ಚಿತ್ರಗಳ ಬಗ್ಗೆ ತಿಳಿದುಕೊಳ್ಳುವ ಮನಸ್ಸು ಮಾಡಿದೆ. ಈ ರೇಖೆಗಳ ವಿನ್ಯಾಸ ತಾಮ್ರದ ಹಾಳೆಗಳ ಮೇಲೆ ಮಾಡಲಾಗಿದೆ. ಪುರಾತತ್ವ ಇಲಾಖೆಗೆ ಸಿಕ್ಕ ಸಾವಿರಾರು ಬಿತ್ತಿ ಚಿತ್ರಗ ಳು, ರೇಖಾ ಮಾದರಿಗಳು, ವರ್ಣ ಚಿತ್ರಗಳು ಇತ್ಯಾದಿಗಳೆಲ್ಲ ಕಲ್ಲಿನ ಮೇಲೆ ಅಥವ ತಾಮ್ರದ ಹಾಳೆಗಳ ಮೇಲೆ ಬಿಡಿಸಲಾಗಿದೆ. ಕಾರಣ, ಇವೆರೆಡು ಸಾವಿರಾರು ವರ್ಷಗಳು ಕಳೆದರು ಹಾಳಾಗುವುದಿಲ್ಲ ಎಂದು. ಈ ಗೂಢಲಿಪೀಕರಣ ಸಂಕೇತ ಅಥವ ಚಿಹ್ನೆಗಳ ಹಿಂದೆ ಹಲವಾರು ಅರ್ಥಗಳು ಇದ್ದು ಇಂತಹ ವಿನ್ಯಾಸವನ್ನು ಆಧುನಿಕ ತಂತ್ರಜ್ಞಾನದ “ಸಿಲಿಕಾನ್ ಚಿಪ್” ಗೆ ಹೋಲಿಸಬಹುದು.

ನನ್ನ ವೃತ್ತಿ ಜೀವನ ಸಮಯದಲ್ಲಿ ಮಾನಸಿಕ ಕಾಯಿಲೆಗಳ ರೋಗಿಗಳನ್ನು ಶಕ್ತಿಪ್ರದಾಯಕ ದೇವಿ ದೇವಸ್ಥಾನಗಳಿಗೆ, ಮಂತ್ರವಾದಿಗಳ ಹತ್ತಿರ, ಮಾಟ ತೆಗೆಸುವರ ಹತ್ತಿರ, ಯಂತ್ರ ಅಂತ್ರ ಪವಾಡ ಮಾಡುವುರ ಬಳಿ ಕರೆದುಕಂಡು ಹೋಗಿ ವಾಸಿ ಆಗಲಿಲ್ಲವೆಂದು ಕರೆದುಕೊಂಡು ಬರುತ್ತಿದ್ದರು. ಬಂದಾಗ ಅವರ ಕೊರಳಲ್ಲಿ ತರತರಹದ ಯಂತ್ರಗಳನ್ನು ಕಟ್ಟಿಸಿಕೊಂಡು ಬರುತ್ತಿದ್ದರು. ಆದುದರಿಂದ ನನ್ನ ಕುತೂಹಲ ಇವುಗಳ ಮೇಲೆ ಇಮ್ಮಡಿಸಿತ್ತು. ನಾನು ಮನೋವೈದ್ಯನಾದ್ದರಿಂದ ಕೆಲವು ಪುಸ್ತಕಗಳನ್ನು ಓದಿದಾಗ “ಭೌಧ್ದ” ಮತ್ತು “ತಾವೋ” ಧರ್ಮ ಗ್ರಂಥಗಳಲ್ಲಿ ಇಂತಹ ಗೂಢಲಿಪೀಕರಣ ರೇಖಾ ವಿನ್ಯಾಸಗಳು ಅಧಿಕವಾಗಿ ಕಂಡವು. ಇವುಗಳನ್ನು ಅನಾವರಣ ಮಾಡಿ ಅಥವ ಸಂಶೋಧನೆ ಮಾಡಿ ಅವುಗಳ ಮೂಲ ಅರ್ಥ ತಿಳಿದುಕೊಳ್ಳುವ ಉದ್ದೇಶ ನನಗಿಲ್ಲ. ಆದರೆ ಇವುಗಳಲ್ಲಿ ಜೀವನಕ್ಕೆ ಸಂಬಂಧ ಪಟ್ಟ ವಿಚಾರಗಳು ತುಂಬಾ ಇವೆ ಎನ್ನುವ ವಿಚಾರಕ್ಕೆ ಬಂದೆ.

ಹಿಂದು ಧರ್ಮ ಗ್ರಂಥಗಳಲ್ಲಿ ಒಂದಾದ ತಂತ್ರ ವಿಜ್ಞಾನದಲ್ಲಿ ಜೀವ ಕರ್ತನಾದ “ಶಿವ ಮತ್ತು ಪಾರ್ವತಿ”ಯ ದೃಷ್ಟಾಂತ ಪ್ರಧಾನವಾಗಿದೆ. ಇವರಿಬ್ಬರ ದೈವ ಐಕ್ಯತಾ ಪ್ರತೀಕ “ಲಿಂಗ” ಆರಾಧನೆ ಆಗಿದೆ. ಲಿಂಗ ವೃತ್ತಾಂತ “ಲಿಂಗ ಮತ್ತು ಯೋನಿ” ಮಧ್ಯೆ ಇದೆ. ತಂತ್ರದ ನಿರೂಪಣೆ “ಯಂತ್ರ” ಮತ್ತು “ಮಂತ್ರ” ಗಳ ಮಧ್ಯೆ ಇರುವುದರಿಂದ ಯಂತ್ರವನ್ನು ಶರೀರ ಎಂದು ಮತ್ತು ಮಂತ್ರವನ್ನು ಮನಸ್ಸು ಎಂದು ಹೆಣೆಯಲಾಗಿದೆ. ನಮ್ಮ ಅರಿವಿಗೆ, ಚೇತನ “ಶಿವ” ಎಂದಾದರೆ ಶಕ್ತಿ “ಪಾರ್ವತಿ”. ಇವರಿಬ್ಬರ ಮೂಲ ಕುಂಡಲನಿ ಚಕ್ರ ಯಂತ್ರ ಸಂತಾನ ಪ್ರಕ್ರಿಯೆ ಇಂದ ಜೀವಿಗಳು ಪ್ರಪಂಚದ ಮೇಲೆ ಪಾದಾರ್ಪಣೆ ಮಾಡಿದವು ಎಂಬದು ಅಂದಿನ “ತಂತ್ರ” ಜ್ಞಾನ.

“ಶಿವ” ವಿಶ್ವದಲ್ಲಿ ಕಾಣದೆ ಇರುವ ಅದಮ್ಯ ಚೇತನ. “ಪಾರ್ವತಿ” ವ್ಯಕ್ತವಾಗುವ ಅದಮ್ಯ ಸಂಚಲನ ಶಕ್ತಿ. ವಿಶ್ವದಲ್ಲಿ ಕಾಣಿಸಿಕೊಳ್ಳುವ ಸರ್ವಸ್ವವೂ ಇವರಿಬ್ಬರು ಇಲ್ಲದೆ ಆಗುತ್ತಿರಲಿಲ್ಲ. ನಿರ್ಗುಣ ಸಂಪನ್ನನಾದ “ಶಿವ” ಎಲ್ಲಡೆ ವ್ಯಾಪಿಸಿದ್ದಾನೆ ಆದರೆ ಕಾಣುವುದಿಲ್ಲ. ಶಕ್ತಿ , ಸಂಚಲನಾ ಶೀಲ ಮತ್ತು ಅನುಭವಿಸಬಹುದಾದ ಮಾಧ್ಯಮ. ನಮ್ಮ ಸುತ್ತ ಮುತ್ತಲಿನ ಇರುವ ಸಮಸ್ತ ಕೋಟಿ ಕೋಟಿ ಜೀವಿ ಮತ್ತು ವಸ್ತುಗಳು ಶಕ್ತಿ ಸ್ವರೂಪವೇ ಆಗಿದೆ. ಇಷ್ಟೆ ಅಲ್ಲದೆ ಸಂಜ್ಞೆ, ಸಂಕೇತ, ಅರಿವು, ಮನಸ್ಸುಗಳು, ಬ್ರಹ್ಮ ಜ್ಞಾನ ಎಲ್ಲವೂ ಸಹ ಶಕ್ತಿ ಆಗಿವೆ. ಇಂತಹ ಅತೀಂದ್ರಿಯ ಶಕ್ತಿ ಪುರುಷನಾದ “ಶಿವ” ಧಾರೆ ಎರೆಯುವುದರಿಂದ ಎಲ್ಲವೂ ಬಂದಿದೆ.
“ತಂತ್ರ” ದ ಪ್ರಕಾರ ಜೀವ ಬರುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಬಂದಿರುವ ಜೀವ ಯಾವುದೇ ತಾಂತ್ರಿಕ ಕೋನತೆಯಿಂದ ಅಳಿಯುವುದಕ್ಕೂ ಸಾಧ್ಯ ಆಗುವುದಿಲ್ಲ.

ಜೀವಿ ಬರುವಾಗ ಯಾರ ಅನುಮತಿ ಬೇಕಿತ್ತು. ಜೀವಿಗಳು ಹೇಗೆ ಬಂದಿದ್ದಾವೆ ಎಂಬುದೇ ವಿಸ್ಮಯ ಮತ್ತು ಅರಗಿಸಿಕೊಳ್ಳಲಾಗದ ಸ್ಥಿತಿ. ಇಲ್ಲಿ ಯಾವುದೇ ಪ್ರಯತ್ನ ಇಲ್ಲ, ಸ್ಪರ್ಧೆ ಇಲ್ಲ. ಆದರೂ ಜೀವಂತ ಇದ್ದೇವೆ, ಬದುಕುತ್ತಿದ್ದೇವೆ, ಬೆಳೆಯುತ್ತಿದ್ದೇವೆ ಮತ್ತು ನಿರ್ಗಮಿಸುತ್ತಿದ್ದೇವೆ. ನಮ್ಮ ವಿಕಸಿತಗೊಂಡ ಅಗಾಧವಾದ ಮೆದುಳಿನ ತಂತ್ರಜ್ಞಾನದಿಂದ ಸ್ಪರ್ಧಾ ಮನೋಭಾವ ಹೆಚ್ಚಾಗಿದೆ. ಮಾನವ ಮಾನವನನ್ನು ಅರಿಯುವ ಸಮಯದಲ್ಲಿ ನಾವು ಅತಿಯಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಮೂಲ “ತಂತ್ರ” ವಿಚಾರಗಳನ್ನು ಮರೆಯುತ್ತಿದ್ದೇವೆ. ಈ ಸನ್ನಿವೇಶದಲ್ಲಿ ಯಂತ್ರ ಮತ್ತು ಮಂತ್ರಗಳ “ತಂತ್ರ”ದ ಅಧ್ಯಾತ್ಮಿಕ ಜ್ಞಾನ ಪುನರಾವರ್ತನೆ ಆಗುತ್ತಿಲ್ಲವಲ್ಲ ಎನ್ನುವುದೇ ನನ್ನ ಜಿಜ್ಞಾಸೆ ಮತ್ತು ನನ್ನ ಸೈದ್ಧಾಂತಿಕ ಪ್ರಶ್ನೆ.
“ಫಲವತ್ತತೆಯೇ ಇಲ್ಲದಿದ್ದರೆ “ಶಿವ” ನನ್ನು ಅರಿಯುವರು ಯಾರು? ಆಧುನಿಕ ತಂತ್ರಜ್ಞಾನದಿಂದ ತಯಾರು ಮಾಡಿದ ಕೃತಕ ಬುದ್ದಿಮತೆಯುಳ್ಳ ಮಾನವನಿಗೆ “ಶಿವ” ನನ್ನು ಅರಿಯಲು ಸಾಧ್ಯವೇ?”…
ಮುಂದಿವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದು: “ಚಿಹ್ನೆ – ಲಿಪಿ ಅನಾವರಣ – ಭಿತ್ತಿಚಿತ್ರ – … […]