ಹಾಸನ, ಅ.21 : ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ಟೀಕಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಆರ್ಎಸ್ಎಸ್ನ್ನು ವಿರೋಧಿಸಿದವರು ನಾಶವಾಗಿದ್ದಾರೆ. ಇಂದಿರಾ ಗಾಂಧಿ, ನೆಹರು — ಇವರೆಲ್ಲರೂ ಆರ್ಎಸ್ಎಸ್ನ್ನು ಎದುರಿಸಿ ಸುಸ್ತಾಗಿದ್ದಾರೆ, ಕೆಲವರು ತೀರಿಹೋಗಿದ್ದಾರೆ. ಈಗಲೂ ಕೆಲವರು ರಾಜ್ಯದ ಮುಂದೆ ಹೀರೋ ಅಲ್ಲ, ವಿಲನ್ ಆಗಲು ಹೊರಟಿದ್ದಾರೆ” ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
“ಆರ್ಎಸ್ಎಸ್ ಬಗ್ಗೆ ಮಾತನಾಡಿ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಹಾಗೂ ಹರಿಪ್ರಸಾದ್ರಿಗೆ ಆರ್ಎಸ್ಎಸ್ನ ತತ್ವ ತಿಳಿದಿಲ್ಲ. ಆರ್ಎಸ್ಎಸ್ ಸೂರ್ಯನಂತಿದೆ, ಅದನ್ನು ಮುಟ್ಟಿದವರು ತಾವೇ ಕರಗಿ ಹೋಗುತ್ತಾರೆ” ಎಂದು ಕಿಡಿಕಾರಿದರು.
ಅವರ ಭಾಷಣದಲ್ಲಿ ಅವರು “ಭಾರತೀಯ ಸಂಸ್ಕೃತಿ ಮತಾಂತರದಿಂದಲ್ಲ, ಹಿಂದೂ ಸಂಸ್ಕೃತಿಯ ಬಲದಿಂದ ಉನ್ನತ ಮಟ್ಟಕ್ಕೆ ಹೋಗಿದೆ” ಎಂದು ಹೇಳಿ, “ಆರ್ಎಸ್ಎಸ್ ಯನ್ನು ನಿಲ್ಲಿಸಲು ಯಾರೇ ಪ್ರಯತ್ನಿಸಿದರೂ ಸಂಘಟನೆ ಇನ್ನಷ್ಟು ಬಲವಾಗುತ್ತದೆ” ಎಂದು ಹೇಳಿದರು.
“ತುರ್ತು ಪರಿಸ್ಥಿತಿ ಸಮಯದಲ್ಲೂ ಇದೇ ರೀತಿಯ ದಮನ ನಡೆಯಿತು. ಅಂದಿನಂತೆ ಈಗಲೂ ಸಂಘಟನೆ ಬಲವಾಗಿ ಎದ್ದು ನಿಲ್ಲಲಿದೆ” ಎಂದು ಹೇಳಿದರು.
ಹೈಕೋರ್ಟ್ ನೀಡಿದ ತೀರ್ಪು ಸಂತೋಷ ತಂದಿದೆ. ಯಾರೇ ಅಡ್ಡ ಬಂದ್ರೂ ಆರ್ಎಸ್ಎಸ್ ಬೆಳವಣಿಗೆ ನಿಲ್ಲುವುದಿಲ್ಲ ಎಂದು ಈಶ್ವರಪ್ಪ ಅಭಿಪ್ರಾಯ ಪಟ್ಟರು.
ಉಗ್ರಪ್ಪನವರಿಗೂ ವಕೀಲರಿಗೂ ಆರ್ಎಸ್ಎಸ್ ಅಥವಾ ಗಾಂಧೀಜಿ ಹತ್ಯೆಯ ಸಂಗತಿಗಳ ಬಗ್ಗೆ ಅಷ್ಟೊಂದು ಅರಿವು ಇಲ್ಲ. ಮಹಾತ್ಮ ಗಾಂಧೀಜಿ ಹತ್ಯೆಗೆ ಗಾಡ್ಸೆಗೆ ನೇರ ಸಂಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಹೇಳಿದರು.

[…] […]