ಕೆ.ಆರ್.ಪೇಟೆ,ಅ.21: ತಾಲ್ಲೂಕಿನ ಸಂತೇಬಾಚಹಳ್ಳಿ ಹಾಗೂ ಬೂಕನಕೆರೆ ಹೋಬಳಿ ಕೇಂದ್ರಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. 2026-27ನೇ ಸಾಲಿಗೆ ಎರಡೂ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿ ಕೇಂದ್ರದಲ್ಲಿ ನಿವೃತ್ತ ಬಿಬಿಎಂಪಿ ಇಂಜಿನಿಯರ್ ಬಿ.ಶಿವಪ್ಪ ಅವರ ನೇತೃತ್ವದಲ್ಲಿ ಕಳೆದ 67ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಂತೇಬಾಚಹಳ್ಳಿ ಗೆಳೆಯರ ಬಳಗ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 67ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿ.ಶಿವಪ್ಪ ಅವರು 20ವರ್ಷದವರಾಗಿದ್ದ ವೇಳೆ ಆರಂಭಿಸಿದ ಗೆಳೆಯರ ಬಳಗವು 67ವರ್ಷಗಳಿಂದ ಯಶಸ್ವಿಯಾಗಿ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ತಾಲ್ಲೂಕಿಗೆ ಹೆಮ್ಮೆ ತರುವ ವಿಚಾರವಾಗಿದೆ. ಇದು ರಾಜ್ಯದಲ್ಲಿಯೇ ಅತ್ಯಂತ ಯಶಸ್ವಿ ಗೆಳೆಯರ ಬಳಗ ಎಂದರೆ ತಪ್ಪಾಗಲಾರದು. ಈ ಸಂಘಕ್ಕೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ, ಜಿಲ್ಲಾ ರಾಜ್ಯೋತ್ಸವ ನೀಡಲು ಸರ್ಕಾರವು ಮುಂದಾಗಬೇಕು. ಈ ಗೆಳೆಯರ ಬಳಗದ ಯಶಸ್ಸಿನ ಹಿಂದೆ 87ವರ್ಷ ವಯಸ್ಸಿನ ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಿವಪ್ಪ ಅವರ ಪರಿಶ್ರಮ ಸಾಕಷ್ಟಿದೆ. ಬಿ.ಶಿವಪ್ಪ ಅವರ ಆದರ್ಶ ಗುಣಗಳು, ಸೇವಾ ಭಾವನೆ, ನಿಸ್ವಾರ್ಥ ಮನಸ್ಸು ಗೆಳೆಯರ ಬಳಗದ ಅಭಿವೃದ್ದಿಗೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನಮ್ಮ ಸರ್ಕಾರ ಇಲ್ಲದೇ ಇದ್ದರೂ ವಿರೋಧ ಪಕ್ಷದ ಶಾಸಕನಾಗಿ ನನ್ನ ಶಕ್ತಿ ಮೀರಿ ತಾಲ್ಲೂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ಸಂತೇಬಾಚಹಳ್ಳೀ ಹೋಬಳಿಯ ಜನತೆಯ ಬಹು ವರ್ಷಗಳ ಆಸೆಯಾಗಿರುವ ಗೂಡೇಹೊಸಹಳ್ಳಿ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಈ ಸಂಬಂಧ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಏತನೀರಾವರಿ ಯೋಜನೆ ಪೂರ್ಣಗೊಳಿಸಿ ಸಂತೇಬಾಚಹಳ್ಳಿ ಹೋಬಳಿಗೆ ಹೇಮಾವತಿ ನೀರು ಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಧ್ಯಕ್ಷ ಡಾ.ನಿಶ್ಚಲಾನಂದ ಸ್ವಾಮೀಜಿ 2010 ರಲ್ಲಿ ಇದೇ ಗಣೇಶೋತ್ಸವದಲ್ಲಿ ನಾನು ತಾಲ್ಲೂಕಿನ ತಹಶೀಲ್ದಾರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ನನ್ನ ಗುರುಗಳಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳೂ ಭಾಗವಹಿಸಿದ್ದರು. ನಾನು ಪಕ್ಕದಲ್ಲಿ ಕುಳಿತಿದ್ದೆ ಆಗ ಅವರು ನನ್ನ ಮಠಕ್ಕೆ ಒಬ್ಬ ಉತ್ತರಾಧಿಕಾರಿ ಸ್ವಾಮೀಜಿ ಬೇಕು ಎಂದು ಹೇಳಿದರು. ಆಗ ತಕ್ಷಣ ನಾನು ಬರುತ್ತೇನೆ ಎಂದು ಅವರಿಗೆ ಹೇಳಿದೆ ಅದೇ ರೀತಿ ಕಾಕತಾಳಿಯವೇನೋ ಗೊತ್ತಿಲ್ಲ ನಾನು ಇಂದು ದೀಕ್ಷೆ ಪಡೆದು ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಿವಪ್ಪ ಅವರು 67 ವರ್ಷಗಳಿಂದ ಸಂತೇಬಾಚಹಳ್ಳಿ ಹೋಬಳಿಯ ಸಮಸ್ಯೆಗಳನ್ನು ಹೋಗಲಾಡಿಸಲು ತಮ್ಮ ಗೆಳೆಯರ ಬಳಗವು ಆಯೋಜಿಸುವ ಗಣೇಶೋತ್ಸವ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಅದರ ಪ್ರತಿಫಲವಾಗಿ ಮಳೆಯಾಶ್ರಿತ ಹೋಬಳಿಯಾಗಿರುವ ಸಂತೇಬಾಚಹಳ್ಳಿಗೆ ಏತನೀರಾವರಿ ಯೋಜನೆ ಮಂಜೂರಾಗಿರುವುದು ಎಂದು ಹೇಳಿದರು. ಬಿ.ಶಿವಪ್ಪ ಅವರಂತಹ ನಿಸ್ವಾರ್ಥ ಹೋರಾಟಗಾರರನ್ನು ಇಡೀ ಹೋಬಳಿಯ ಜನ ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.

ಶಾಸಕ ಹೆಚ್.ಟಿ.ಮಂಜು ಹಾಗೂ ಬಿಜೆಪಿ ಮುಖಂಡ ಬಿ.ಎನ್.ದಿನೇಶ್ ನಡುವೆ ಮಾತಿನ ಚಕಮಕಿ:
ಗಣೇಶೋತ್ಸವ ಕಾರ್ಯಕ್ರಮದಲ್ಲಿ ತುಂತುರು ಮಳೆ ಬರುತಿದ್ದಾಗ ಸಾರ್ವಜನಿಕರು ಹೈರಾಣಗಿದ್ದರು. ಇನ್ನೇನು ವೇದಿಕೆ ಕಾರ್ಯಕ್ರಮ ಮುಗಿಯಿತು ಅನ್ನುವಷ್ಟರಲ್ಲಿ ರಾಜಕೀಯ ಸಮರ ಆರಂಭವಾಯಿತು. ಸಭೆಯಲ್ಲಿ ಮೈಕ್ ಹಿಡಿದ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಬಿ. ಎನ್. ದಿನೇಶ್, ತಾಲ್ಲೂಕಿನಲ್ಲಿ ರಸ್ತೆಗಳೆಲ್ಲ ಗುಂಡಿಬಿದ್ದು ಭಾರಿ ಸಮಸ್ಯೆಯಾಗಿದೆ. ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು 224ಶಾಸಕರು ವಿಫಲರಾಗಿದ್ದಾರೆ. ಶಾಸಕರ ಒಡೆತನದ ಖಾಸಗಿ ಶಿಕ್ಷಣ ಸಂಸ್ಥೆಗಳೇ ಹೆಚ್ಚು ಇವೆ. ಡೋನೇಷನ್ ಹಾವಳಿ ಜಾಸ್ತಿಯಾಗಿದೆ. 224ಶಾಸಕರು ಸುಮ್ಮನೆ ವಿಧಾನಸಭೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ನೀಡಲು ರಾಜಕಾರಣಿಗಳು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಶಾಸರಕನ್ನು ಟೀಕಿಸಿದರು.
ಬಿ.ಎನ್.ದಿನೇಶ್ ಟೀಕೆಯನ್ನು ಸಮಧಾನದಿಂದಲೇ ಆಲಿಸಿದ ಶಾಸಕರು ಟೀಕೆಗೆ ಪ್ರತ್ಯುತ್ತರ ನೀಡಿ ಶಾಸಕ ಎಚ್.ಟಿ.ಮಂಜು ನಾನು ಸದನದಲ್ಲಿ ತಾಲ್ಲೂಕಿನ ಸಮಸ್ಯೆಗಳ ಬ್ಗೆ ಏನೇನು ಚರ್ಚೆದ್ದೇನೆ ಎಂಬುದನ್ನು ವಿಧಾನಸಭೆಯ ಕಲಾಪದ ಕಡತದಲ್ಲಿ ಸಿಗುತ್ತದೆ ಪಡೆದುಕೊಳ್ಳಬಹುದು. ಆಕಾಶಕ್ಕೆ ಉಗಿದರೆ, ಅದು ನಮ್ಮ ಮುಖಕ್ಕೆ ಬೀಳುತ್ತದೆ ಎಂಬ ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. ನಾನು ಹಣ ಮಾಡಲು ಬಂದಿಲ್ಲ. ನಾನು ಜನರ ಸೇವೆ ಮಾಡುತ್ತಿದ್ದೇನೆ. ಸಂತೇಬಾಚಹಳ್ಳಿ ಆಸ್ಪತ್ರೆಯನ್ನು ಮೇಲ್ದರ್ಜೆಗೇಸಲಾಗಿದೆ. ಇಲ್ಲಿಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಕ್ಕೆ ಅನುಮೋದನೆ ಸಿಕ್ಕಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹಣ ನೀಡಿ ಕೆಲಸ ಮಾಡುತ್ತಿದ್ದೇನೆ. ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಆದರೂ ಟೀಕೆಗಾಗಿ ಟೀಕಿಸುವುದು ಶೋಭೆ ತರುವುದಿಲ್ಲ ಎಂದು ದಿನೇಶ್ಗೆ ತಿರುಗೇಟು ನೀಡಿದರು. ಆಗ ಮಧ್ಯ ಪ್ರವೇಶ ಮಾಡಿದ ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಪೀಠಧ್ಯಕ್ಷರಾದ ನಿಶ್ಚಲಾನಂದಸ್ವಾಮೀಜಿ ಹಾಗೂ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಇಬ್ಬರನ್ನೂ ಸಮಧಾನ ಪಡಿಸಿದರು. ಆದರೆ ಜಟಾಪಟಿ ಮುಂದುವರೆದಾಗ ಪೊಲೀದರು ಪರಿಸ್ಥಿತಿ ತಿಳಿಗೊಳಿಸಿದರು.

ಕಾರ್ಯಕ್ರಮದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಧ್ಯಕ್ಷರಾದ ಡಾ.ನಿಶ್ಚಲಾನಂದಸ್ವಾಮೀಜಿ ಮತ್ತು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಬೆಂಗಳೂರು ದಕ್ಷಿಣ ಉಪ ವಿಭಾಗಧಿಕಾರಿ ವಿಶ್ವನಾಥ್, ಗ್ರಾ. ಪಂ.ಅಧ್ಯಕ್ಷೆ ಅನುರಾಧ, ಸಂತೇಬಾಚಗಳ್ಳಿ ಸೊಸೈಟಿ ಅಧ್ಯಕ್ಷ ಮೋಹನ್, ಮುಖಂಡರಾದ ಜಾನಕೀರಾಮು, ಬಿ.ಎಂ.ಕಿರಣ್, ಎ.ವೈ.ವಿಜಯ್ಕುಮಾರ್, ಬಿ. ಎನ್.ದಿನೇಶ್, ಪುನೀತ್, ಗಣೇಶ್, ಭಾರತೀಪುರ ಪುಟ್ಟಣ್ಣ, ಅಘಲಯ ಶ್ರೀಧರ್, ಅಗ್ರಹಾರಬಾಚಹಳ್ಳಿ ಗ್ರಾ.ಪಂ.ಅಧ್ಯಕ್ಷ ಎ.ಸಿ.ದಿವಿಕುಮಾರ್, ಆದಿಹಳ್ಳಿ ನಾಗೇಶ್, ನಿವೃತ್ತ ಸಿಡಿಪಿಓ ಹುಬ್ಬನಹಳ್ಳಿ ಬಲರಾಂ, ಗೆಳೆಯರ ಬಳಗದ ಅಧ್ಯಕ್ಷ ಗೌಡಜಯಕುಮಾರ್, ಕಾರ್ಯದರ್ಶಿ ಕೃಷ್ಣ, ಲೋಕೇಶ್ ಉಮೇಶ್ ರಾಜು, ಸೋಮಶೇಖರ್, ನಾಗೇಶ್, ಸುರೇಶ್, ಚೇತನ್, ವೆಂಕಟೇಶ್, ಪದಾಧಿಕಾರಿಗಳು ಸೇರಿ ನೂರಾರು ಗಣ್ಯರು ಹಾಗೂ ಸಾವಿರಾರು ಮಂದಿ ಭಕ್ತಾಧಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್
