ಬೆಂಗಳೂರು, ಅ.21: ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆಎಂಎಫ್) ಮತ್ತು ಸದಸ್ಯ ಹಾಲು ಒಕ್ಕೂಟಗಳು ಈ ದೀಪಾವಳಿ ಹಬ್ಬದ ಅವಧಿಯಲ್ಲಿ ಒಟ್ಟು 1100 ಮೆಟ್ರಿಕ್ ಟನ್ “ನಂದಿನಿ” ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ 46.00 ಕೋಟಿ ರೂ. ವಹಿವಾಟು ದಾಖಲಿಸಿ ಸಂಸ್ಥೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಕಳೆದ ವರ್ಷದ ಹಬ್ಬದ ಅವಧಿಯಲ್ಲಿ 725 ಮೆಟ್ರಿಕ್ ಟನ್ ಉತ್ಪನ್ನ ಮಾರಾಟದಿಂದ 33.48 ಕೋಟಿ ರೂ. ವಹಿವಾಟು ದಾಖಲಾಗಿತ್ತು. ಈ ಬಾರಿ ಸುಮಾರು 38% ಪ್ರಮಾಣದಲ್ಲಿ ಬೆಳವಣಿಗೆ ಕಂಡು, ಕೆಎಂಎಫ್ ಸಾಹಿತ್ಯದಲ್ಲಿ ಸರ್ವಕಾಲಿಕ ದಾಖಲೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಬ್ಬದ ಮಾರಾಟಕ್ಕೆ ಮುಂಚಿತವಾಗಿ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿಕೊಂಡು 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಯಿತು. ಕೆಎಂಎಫ್ ಸಂಸ್ಥೆ ರಾಜ್ಯದ ಹೈನುಗಾರ ರೈತರಿಂದ ಪ್ರತಿದಿನ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್ಟಿ ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಿಗೆ ತಲುಪಿಸಲಾಗುತ್ತಿದೆ.
“ನಂದಿನಿ” ಬ್ರಾಂಡ್ನಡಿಯಲ್ಲಿ ಹಾಲಿನೊಂದಿಗೆ ತುಪ್ಪ, ಬೆಣ್ಣೆ, ಪನೀರ್, ಸಿಹಿತಿನಿಸುಗಳು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 175ಕ್ಕೂ ಅಧಿಕ ಬಗೆಯ ಉತ್ಪನ್ನಗಳನ್ನು ರಾಜ್ಯ, ನೆರೆರಾಜ್ಯಗಳು ಹಾಗೂ ಕೆಲವು ಹೊರದೇಶ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗಿದೆ.
ಕೆಎಂಎಫ್ ತಿಳಿಸಿದಂತೆ, ನಂದಿನಿ ಬ್ರಾಂಡ್ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸ ಈ ಹೊಸ ದಾಖಲೆಗಾಗಿ ಪ್ರಮುಖ ಕಾರಣಗಳಾಗಿವೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿತಿನಿಸುಗಳ ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ಈ ಮಾರಾಟ ಸಾಧನೆ ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಯನ್ನು ಪ್ರತಿಫಲಿಸುತ್ತದೆ.
