ಟಿ.ನರಸೀಪುರ: ಜೀವನ್ಮರಣ ಹೋರಾಟದ ನಂತರ ಮತ್ತೆ ರೈತ ಪರ ಹೋರಾಟಕ್ಕೆ ಸಜ್ಜಾಗಿರುವ “ರೈತ ರತ್ನ” ಕುರುಬೂರು ಶಾಂತಕುಮಾರ್ ರವರಿಗೆ ಸ್ವಾಗತ ನೀಡುವ ಉದ್ದೇಶದಿಂದ ರೈತೋತ್ಸವ ಕಾರ್ಯಕ್ರಮ ವನ್ನು ಪಟ್ಟಣದ ಗುರುಭವನದಲ್ಲಿ ಅಕ್ಟೋಬರ್ 25, ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಕಿರಗಸೂರು ಶಂಕರ್ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ರೈತ ಹೋರಾಟದ ಪ್ರಯಾಣದ ವೇಳೆ ಪಂಜಾಬ್ನಲ್ಲಿ ಕಾರು ಅಪಘಾತಕ್ಕೊಳಗಾದ ಶಾಂತಕುಮಾರ್ ಅವರು ಶಸ್ತ್ರಚಿಕಿತ್ಸೆ ಹಾಗೂ ದೀರ್ಘ ಚಿಕಿತ್ಸೆಯ ಬಳಿಕ ಈಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ರೈತರ ಪರ ಹೋರಾಟಕ್ಕೆ ನಿಂತಿರುವ ಅವರನ್ನು ಸ್ವಾಗತಿಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಈ ರೈತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಹಾಗೂ ಮಾಜಿ ಶಾಸಕ ಬಿಸ್ಲಳ್ಳಿ , ಸಾಹಿತಿ ಹಾಗೂ ವಿಜಯವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ವೀರಭದ್ರಪ್ಪ ಭಾಗವಹಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಚಿ ಎಂ.ಬಿ. ಚೇತನ್ ವಹಿಸಲಿದ್ದಾರೆಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮಾತನಾಡಿ ಪತ್ರಕರ್ತರ ಸಂಘ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ತಾಲ್ಲೂಕಿನ ಸಾರ್ವಜನಿಕರು ಹಾಗೂ ಸಂಘ,ಸಂಸ್ಥೆಗಳು ಹಾಗೂ ಅಧಿಕಾರಿ ವರ್ಗ ಸಂಘದ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರ ಬೇಡಿಕೆಗಳಾದ ಹಲವಾರು ವಿಷಯಗಳು ಚರ್ಚೆಯಾಗಲಿದ್ದು,ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ರೈತರ ಸಮಾವೇಶವನ್ನು ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ರೈತರು ಹಾಗೂ ಕುರುಬೂರು ಶಾಂತಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಪೂರ್ಣಕುಂಭ ಸ್ವಾಗತ
ತಾಲ್ಲೂಕು ಅದ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ ಅಂದು ಬೆಳಗ್ಗೆ 9 ಗಂಟೆಗೆ ಶ್ರೀ ಗುಂಜಾನರಸಿಂಹ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಬೈಕ್ ರ್ಯಾಲಿಯ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುರುಭವನಕ್ಕೆ ಶಾಂತಕುಮಾರ್ ರವರನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಗುವುದು.ತಾಲ್ಲೂಕಿನ ಎಲ್ಲಾ ಗ್ರಾಮದ ರೈತರು ತಮ್ಮ ತನು,ಮನ,ಧನವನ್ನು ಅರ್ಪಿಸಿ ಕಾರ್ಯಕ್ರಮದ ಆಯೋಜನೆಗೆ ಸಹಕರಿಸುತ್ತಿದ್ದಾರೆ.ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ರೈತೋತ್ಸವ ಕಾರ್ಯಕ್ರಮಕ್ಕೆ ಬನ್ನಿ ಎಂಬ ಕರಪತ್ರ ತೋರಿಸುವ ಮೂಲಕ ಸಮಸ್ತ ತಾಲ್ಲೂಕಿನ ಜನತೆಯನ್ನು ಆಹ್ವಾನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್ ನಾಯಕ್, ಟೌನ್ ಅಧ್ಯಕ್ಷ ಅಪ್ಪಣ್ಣ, ಹಾಗೂ ಮುಖಂಡರಾದ ಗೌರಿಶಂಕರ್, ಕೆ.ಜಿ. ಗುರುಸ್ವಾಮಿ, ಪ್ರದೀಪ್, ಕರೋಹಟ್ಟಿ ಉಮೇಶ್, ವೀರೇಶ್ ನಾಗರಾಜ್, ರಾಜೇಶ್, ಎಲ್ಐಸಿ ವೀರೇಶ್ ಹಾಜರಿದ್ದರು.
ಎಂ.ನಾಗೇಂದ್ರಕುಮಾರ್
