ಆತ್ಮ ಯಾವತ್ತೂ ಪರಿಶುದ್ಧವಾದದ್ದು. ಪ್ರಸ್ತುತ ಪ್ರಪಂಚದ ಎಲ್ಲೆಡೆ ಧರ್ಮ, ಜಾತಿ ಮತ್ತು ಪಂಗಡಗಳಿಂದ ಆತ್ಮ ಕಲುಷಿತವಾಗಿದೆ. ಬಿರುಕು ಬಿಟ್ಟಿರುವ ಮಾನವೀಯತಾ ಧರ್ಮ, ದ್ವೇಷ ಇಲ್ಲದ ಹಾಗು ಪ್ರತೀಕಾರ ಇಲ್ಲದ ಆತ್ಮಗಳನ್ನು ಎದುರು ನೋಡುತ್ತಿದೆ. ಎಡ ಮತ್ತು ಬಲಪಂಥೀಯ ವಿಷಯುಕ್ತ ಆತ್ಮಗಳು ಪ್ರಜಾಪ್ರಭುತ್ವದ ಸಂಯುಕ್ತ ವ್ಯವಸ್ಥೆಯನ್ನು ಹಾಳುಗೆಡುವಿದ್ದಾವೆ. ಆದಿ ಕಾಲದಿಂದಲೂ ಬಂದ ಅತಿರೇಕ ಮನಸ್ಸುಗಳು ಮಾನವರ ನಡುವೆ ಸಂಘರ್ಷ ಹುಟ್ಟುಹಾಕಿವೆ.
ಸಮಾಜದಲ್ಲಿ ಸೃಷ್ಟಿಸಿದ ಅಥವ ಒಡಕು ಹುಟ್ಟುಹಾಕಿರುವ ಸಂಕುಚಿತ ಆತ್ಮಗಳಿಗೆ ತುರ್ತಾಗಿ ಬೇಕಾಗಿರುವುದು ಬೆಸೆಯುವ ಮುಲಾಮು. ಈ ವಿಕಲ್ಪ ಅತ್ಮಗಳು ತ್ವರಿತವಾಗಿ ಪರಿವರ್ತನೆ ಹೊಂದಬೇಕಾಗಿದೆ. ಇಲ್ಲವಾದರೆ ಸಮಾಜ ಹಾಳಾಗುವುದನ್ನು ಮುಂದಿನ ದಿನಗಳಲ್ಲಿ ನಮ್ಮ ಮೊಮ್ಮಕ್ಕಳು ನೋಡಬಹುದು. ಈ ಪ್ರಕ್ರಿಯೆ ಮುಂದುವರಿದರೆ ಸಮಾಜ (Gen Z revolution) ಬುಡಮೇಲು ಆಗುವುದರಲ್ಲಿ ಸಂಶಯ ಇಲ್ಲ. ಆಗ ಸಮಾಜ ವಿನಾಶ ಪಥ ಹಿಡಿಯಬಹುದು. ಇದು ಪ್ರಗತಿಪರ ಆತ್ಮಗಳಿಗೆ ಆಘಾತಕಾರಿ ವಿಷಯ. ಆದುದರಿಂದ ಅವಸರದ ಅಥವ ಬಹು ಬೇಗ ಒಬ್ಬ ವಿನ್ಯಾಸಕಾರ ಈ ಸಮಾಜಕ್ಕೆ ಬೇಕಾಗಿದ್ದಾನೆ.

ಒಬ್ಬನಿಂದ ಸಾಧ್ಯವೇ? ಇಲ್ಲ. ಜಗದಲ್ಲಿ ಎಲ್ಲಾ ಆತ್ಮಗಳು ಉಪಯುಕ್ತ ವಿನ್ಯಾಸಕ್ಕೆ ಒಳಗಾಗಬೇಕು. ಈ ವ್ಯವಸ್ಥೆ ಸಕ್ರೀಯವಾಗಬೇಕು ಎನ್ನುವುದಾದರೆ, ದೂರ ಸರಿಯುತ್ತಿರುವ ಆತ್ಮಗಳು ಹತ್ತಿರ ಬರಬೇಕು. ಆದಾಗ ಸಹಭಾಗಿತ್ವ, ಸಹಭಾವತ್ವ ಮತ್ತು ಸಹಕಾರ್ಯಗಳಿಂದ ಒಗ್ಗೂಡಿ ಹೊಸ ಸಮಾಜ ಕಟ್ಟಬೇಕು. ಶಾಂತಿ ಮತ್ತು ಪ್ರೀತಿಗಳಿಂದ ಸೌಹಾರ್ದತೆಯ ಸಮಾಜ ಕಟ್ಟಬೇಕಾಗಿದೆ. ಆ ವಿನ್ಯಾಸ ಅಥವ ಪರಿವರ್ತಕ ಸಾಧನ “ವಿಶ್ವ ಪ್ರೇಮ”. ವಿಶ್ವ ಪ್ರೇಮದಿಂದ ಪ್ರಪಂಚಾದ್ಯಂತ ಗಡಿಗಳು ತನ್ನಷ್ಟಕ್ಕೆ ತಾನೆ ಮಾಯವಾಗೊ ಸಾಧ್ಯತೆ ಬರಬಹುದು. ಆದಾಗ ಎಲ್ಲವೂ ನೇರ ಮತ್ತು ಮುಕ್ತ. ಇದೇ “ತಂತ್ರ” ದ ಸಾರ.
ನಾನು ಇಲ್ಲಿ ವಿವರಿಸುವ ವಿಷಯ ಗಂಭೀರ ಮತ್ತು ಸೂಕ್ಷ್ಮ. ಈ ಸೂಕ್ಷ್ಮತೆಯನ್ನು ತಿಳಿಯಲು ಓದುಗರು ಅವರ ಅವರ ಧ್ಯಾನಾವಸ್ತೆಯನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದೊಂದು ಕಲ್ಪಿತ ಅವಲೋಕನ. ಈ ವೃತ್ತಾಂತ “ಗಾಡ್” ಮತ್ತೆ “ಡಾಗ್” ಮಧ್ಯೆ. ನನ್ನ ಈ ನಿರೂಪಣೆ ಅರಗಿಸಿಕೊಳ್ಳಬೇಕಾದರೆ ನನ್ನ ಈ ದೃಷ್ಟಾಂತವನ್ನು ಆಧ್ಯಾತ್ಮಿಕ ದೃಷ್ಟಿ ಕೋನತೆಯಿಂದ ನೋಡಬೇಕಾಗುತ್ತದೆ. ಇಲ್ಲಿ ಯಾವ ಅರಿವು ಅಥವ ಮನಸ್ಸು ಯಾರ ಜೊತೆ ಒಂದಾಗುತ್ತವೆ ಎನ್ನುವುದು ಬಹು ಮುಖ್ಯ.
ನನ್ನ ಯೋಚನಾ (out of the box thinking) ಲಹರಿಯಲ್ಲಿ ಹೊಳೆದ ವಿಚಾರ, ನಮ್ಮ ಅರಿವು ಜೀವ ಇಲ್ಲದಂತಾ (God) ಅರಿವಿಗೆ “ಮಿಕ್ಸ” ಮಾಡುವ ವಿಷಯ. ಈ ಅವಸ್ಥೆಯನ್ನು ಅಧ್ಯಾತ್ಮಿಕನುಸಾರ “ಯೋಗ” ಎಂದು ಕರೆಯುವರು. ಸರಳವಾಗಿ ನಮ್ಮ ಚೇತನವನ್ನು ವಿಶ್ವ ಚೇತನದ ಒಳಗೆ ಸೇರಿಸುವುದು. ಅಥವ ನಮ್ಮ ಮೈಕ್ರೋ ಆತ್ಮವನ್ನು ಮಾಕ್ರೋ ಪರಮಾತ್ಮನ ಆತ್ಮದೊಳಗೆ ಬೆರೆಸುವುದು.
ಒಮ್ಮೆ ಯೋಚಿಸಿದರೆ ನಾವು ಸತ್ತಾಗ ಪರಮಾತ್ಮ ಅಳುವನೆ? ಪರಮಾತ್ಮನಿಗೆ ಸಾವೇ ಇಲ್ಲ. ಮಾನವನಿಗೆ ಪರಮಾತ್ಮ ಇಲ್ಲದೆ ಇರುವುದು ಆತನಿಗೆ ಕಷ್ಟಗಳು ಬಂದಾಗ ಮಾತ್ರ. ಆಗ ಕಷ್ಟಕ್ಕೆ ಒಳಗಾದವರು ಅಳುವರು. ಅವನು ಮತ್ತು ಆತನನ್ನು ನಂಬಿದವರ ಆತ್ಮಗಳು ಸಹ ಅಳುತ್ತವೆ. ನಾನು ಭೋಧಿಸುವ ಯೋಗ “ಕಣ್ಣು ತೆರೆದು ಧ್ಯಾನಿಸು” ಎಂಬ ಯೋಗ.

ಜೀವನದಲ್ಲಿ ಸಮಸ್ಯೆ ಎದುರಾಗುವ ಕೇಂದ್ರ ಬಿಂದು “ಸಂಸಾರ“. ವ್ಯಕ್ತಿಯ ಅರಿವಿನ ಮಾಧ್ಯಮ (consciousness) ಸಂಸಾರದ ಒಳಗೆ ಮತ್ತು ಹೊರಗಿನವರ ಆತ್ಮಗಳ ಜೊತೆ ಸೇರಬೇಕು. ಸೇರುವಂತಹ ಅರಿವಿನ ಹರಿವು ಸಮಸ್ಯೆಗಳನ್ನು ಗ್ರಹಿಸಿ, ಅರ್ಥೈಸಿ, ವಿವೇಕಿಸಿ ಕಲಿತ ಜ್ಞಾನರ್ಜನೆಯಿಂದ ತರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಂತಹ ಪ್ರಕ್ರಿಯೆಗಳ ಗುಚ್ಛವನ್ನು “ಯೋಗ” ಎನ್ನಬಹುದು. ಇದು ನನ್ನ ಅನುಭವದ ನಿರೂಪಣೆ.
ಇದನ್ನು ಓದು: “ಚಿಹ್ನೆ – ಲಿಪಿ ಅನಾವರಣ – ಭಿತ್ತಿಚಿತ್ರ – ಅದಮ್ಯ ಚೇತನ”
ಹೀಗೆ ಯೋಚನೆ ಮಾಡೋಣ. ಈಗ ಎರಡು ಮನಸ್ಸುಗಳು ಸೇರಿದ್ದಾವೆ ಎಂದುಕೊಂಡಾಗ ಸೇರಿದ್ದ ಒಂದು ಮನಸ್ಸು ಬಾರದೆ ಇರುವ ಲೋಕಕ್ಕೆ ಸಾಗಿದೆ ಎಂದಾಗ ಇಲ್ಲೆ ಇರುವ ಬೇರ್ಪಟ್ಟ ಮನಸ್ಸಿಗೆ ಆಗುವ ಬಾಧೆಯನ್ನು ಊಹಿಸೋಣ. ಬಾಧೆಯ ಪ್ರಮಾಣ ಎರಡು ಮನಸ್ಸುಗಳ ನಡುವೆ ಇದ್ದ ಬಾಂಧವ್ಯದ ತೀವ್ರತೆಯ ಮೇಲೆ ಅಳತೆ ಮಾಡಬಹುದಾಗಿದೆ. ಸಂಸಾರದ ವ್ಯವಸ್ಥೆ ಸಾಮಿಪ್ಯದ ನಂಟಿನ ಮೇಲೆ ಇರುವುದರಿಂದ “ದುಃಖ“ದ ಪ್ರಮಾಣ ಅಗಲಿದಾಗ ಮಾತ್ರ ಅಳೆಯಬಹುದು.

ಆಧುನಿಕ ತಾಂತ್ರಿಕ ಯುಗದಲ್ಲಿ ಹಲವಾರು ಕಾರಣಗಳಿಂದ ಸಂಸಾರದ ಯುನಿಟ್ಗಳು ಕಮ್ಮಿ ಆಗುತ್ತಿದ್ದಾವೆ. ಸಂಸಾರ ತೂಗಬೇಕಾದ ಸಮಯದಲ್ಲಿ ಆತ್ಮಗಳಿಗೆ ಹೊಣೆ ಮತ್ತೂ ಹೊರೆ ಹೆಚ್ಚು. ಆದುದರಿಂದ ನಗರೋತ್ತರ ಮತ್ತು ಸ್ವಚ್ಚಾಕಾರ ಬಯಸುವ ಅತ್ಮಗಳು ಒಂಟಿತನವನ್ನು ಸ್ವೀಕರಿಸುತ್ತಿದ್ದಾವೆ. ವಿಪರ್ಯಾಸ ಎಂದರೆ ಇವರು ತಮ್ಮ ತಮ್ಮ ಬೇಸರ ಅಥವ ಜಿಜ್ಞಾಸೆಗಳಿಂದ ಮುಕ್ತಿ ಹೊಂದಲು ಅಂತರಜಾಲಗಳ ಮೊರೆ ಹೋಗುತ್ತಿದ್ದಾರೆ. ಕೃತಕ ಬುದ್ದಿಮತೆ ಬಂದಮೇಲೆ ಸೆಕ್ಸ್ಬಾಟ್, ಛಾಟ್ಬಾಟ್ ಮತ್ತು ಸೆಕ್ಸ ಡಾಲ್ಸ್ ಜೀವ ಇಲ್ಲದ ಮಿಂಬಲೆಗಳ ಜೂತೆ ಬಾಂಧವ್ಯಗಳನ್ನು ಬೆಸೆಯುತ್ತಿದ್ದಾರೆ.
watch this: https://youtu.be/qzMAWtWMI0Q
ಮಾನವರ ಆತ್ಮಗಳ ನಡುವೆ ಸಂಬಂಧಗಳು ಕ್ಷೀಣಿಸುತ್ತಿರುವಾಗ ಇಂದಿನ ಆಧುನಿಕ ಯುಗದಲ್ಲಿ ಇಂದಿನ ಆತ್ಮಗಳು “ಡಾಗ್ (Dog)” ಆತ್ಮ ಚೇತನಗಳ ಒಳಗೆ ಮಿಕ್ಸ ಆಗುವುದನ್ನು ನೋಡುತ್ತಿದ್ದೇವೆ. ಈ ಆತ್ಮಗಳ ನಂಟು ಅಭಿನವ ಮತ್ತು ಅಸಮಾನ್ಯ. ಹೀಗಿರುವ ಸಂಬಂಧಗಳಲ್ಲಿ “ಡಾಗ್ (Dog)” ಗೆ “ಗಾಡ್ (God)” ಸಾಕಿದವನಾತ. ಆ ಸಮಯದಲ್ಲಿ ನಾಯಿಗೆ ಸರ್ವಸ್ವವೂ ಸಾಕಿದವನು (ಗಾಡ್) ಮತ್ತು ಸಾಕಿದವನಿಗೆ ಸರ್ವಸ್ವವೂ ಆ ಡಾಗ್. ನಾಯಿಗೆ ಪರಮಾತ್ಮ ಸಾಕಿದವನು ಮತ್ತು ಸಾಕಿದವನ ಪರಮಾತ್ಮ ನಾಯಿ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ “ಪರಮಾತ್ಮ” ಯಾರು?

“ಫಾರ್ ಡಾಗ್ ದ ಗಾಡ್ ಈಸಿ ಹಿಸ್ ಮಾಸ್ಟರ್, ಫಾರ್ ದ ಮಾಸ್ಟರ್ ಗಾಡ್ ಈಸ್ ಹಿಸ್ ಡಾಗ್”
ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಸ್ತುತತದಲ್ಲಿ ಯಾವುದೇ ಅತೀಂದ್ರಿಯ ಪ್ರಯೋಗಾಲಯಗಳು ಇಲ್ಲ. ಇಲ್ಲಿ ಯಾವುದೇ ಲಾಗಿರತಮ್ ಪ್ರಯೋಜನಕ್ಕೆ ಬರುವುದಿಲ್ಲ. ಅಂಕ ಸಂಖ್ಯೆಗಳು ನಿರುಪಯುಕ್ತ. ನಾನು ತಿಳಿಸಿರುವ ಎಲ್ಲಾ “ತಂತ್ರ” ಆಧರಿತ ರೂಪ ರೇಖೆಗಳು, ನಿರೂಪಣೆಗಳು, ವಿರೋಧಾಭಾಸಗಳು, ಸಂದಿಗ್ಧ ಸ್ಥಿತಿಗಳು, ವಿಚಾರ ವಿಷಯಗಳು, ಇವೆಲ್ಲವನ್ನೂ ಅಧ್ಯಾತ್ಮಿಕನುಸಾರ ಅಥವ ದೈವ ಭಾವಾನುಸಾರ ತರ್ಕಿಸಿ ಅವರವರ ಮನಸ್ಸಿಗೆ ತೆಗೆದುಕೊಳ್ಳಬೇಕು. ಇಲ್ಲಿ ನನಗೆ ಯಾವ ಗೌರವ ಅಥವ ಮನ್ನಣೆ ಬೇಡ, ಬೇಕಾಗಿರುವುದು ಮಾನವನ ವಿಕಸತೆ ಮತ್ತು ಮಾನವಿಯತೆ.
ಆದುದರಿಂದ ನಾನು ಮುಕ್ತಾಯ ಮಾಡುವ ಮುನ್ನ ಪುರುಷ ಮತ್ತು ಪುರುಷೋತ್ತಮರ ನಡುವೆ ದ್ವಂದ್ವ ನೀತಿ ಎಲ್ಲಿಯವರಿಗೂ ಇರುತ್ತದೆಯೋ ಅಲ್ಲಿಯವರಿಗೂ “ನಾನು” ಅಥವ “ಐ” ತನ್ನ ಸಾರ್ವಭೌಮತ್ವವನ್ನು “ನಾವು” ಅಥವ “ವಿ” ಮೇಲೆ ಸವಾರಿ ಮಾಡುತ್ತಿರುತ್ತದೆ. ಆದಿ ಶಂಕರಾಚಾರ್ಯರ ಯುಕ್ತಿಯಂತೆ “ಅದ್ವೈತ” ಸಾರವನ್ನು ನಮ್ಮದಾಗಿಸಿದರೇ “ಮುಕ್ತಿ” ಪಡೆಯುವುದರಲ್ಲಿ ನಾವು ಯಶಸ್ವಿ ಆಗುತ್ತೇವೆ ಎನ್ನುವುದು ನನ್ನ ನಂಬಿಕೆ.
ಇಂದಿನ ಸಂಬಂಧಗಳು ಗಾಳಿಯಲ್ಲಿ ತೂರಿ ಹೋಗುವಂತಹ ಸಂದರ್ಭದಲ್ಲಿ ಮತ್ತು ಪ್ರಪಂಚ ಪ್ರಕ್ಷುಬ್ದತೆಯ ಪರಿಸರದಲ್ಲಿ ದೈವತ್ವ ಪಡೆಯುವ ವಿಚಾರದಲ್ಲಿ ನನ್ನ “ಡಾಗ್” ಮತ್ತು “ಗಾಡ್” ಸಂದಿಗ್ಧತೆಯನ್ನು ಅವಲೋಕಿಸೋಣ. ಮತ್ತೊಮ್ಮೆ ಯಾವುದೇ ಅಪಾರ್ಥ ಬೇಡ. ಕೊನೆಯದಾಗಿ ಕ್ಷುಬ್ಧ ಅತ್ಮಗಳು ನವೀಕರಣಕೊಂಡು ಹೊಸದಾದ ನಗು ಬೀರುವ ಆತ್ಮಗಳು ಆಗಲಿ ಮತ್ತು ದ್ವೇಷವನ್ನು ಇಂತಹ ಆತ್ಮಗಳು ಮರೆಯಲಿ ಎಂಬುದೇ ನನ್ನ ಕಳಕಳಿಯ ಪ್ರಾರ್ಥನೆ…
ಮುಗಿಯಿತು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

