Bhagavad Gita
ಶ್ಲೋಕ – 15
ಯುಂಜನ್ನೇವಂ ಸದಾSSತ್ಮಾನಂ ಯೋಗೀ ನಿಯತಮಾನಸಃ ।
ಶಾಂತಿಂ ನಿರ್ಬಾಣ ಪರಮಾಂ ಮತ್ ಸಂಸ್ಥಾಮಧಿಗಚ್ಛತಿ ॥೧೫॥
ಹೀಗೆ ಭಗವಂತನನ್ನು ಸದಾ ಧ್ಯಾನಿಸುತ್ತ, ಬಗೆಯನ್ನು ಬಿಗಿ ಹಿಡಿದ ಸಾಧಕನು ದೇಹ ತೊರೆದ ಮೇಲೆ ನನ್ನಲ್ಲೇ ನೆಲೆಸುವಂಥ ಸುಖವನ್ನು ಅನುಭವಿಸುತ್ತಾನೆ.
ಈ ಅಧ್ಯಾಯದಲ್ಲಿ ಈವರೆಗೆ ಕೃಷ್ಣ ವಿವರಿಸಿದ್ದು ಮನಸ್ಸಿನಿಂದ ಮಾಡುವ ಧ್ಯಾನ. ಬಾಹ್ಯ ಇಂದ್ರಿಯವನ್ನು ಸ್ಥಬ್ಧಗೊಳಿಸಿ, ಚಿತ್ತ ಮತ್ತು ಮನಸ್ಸನ್ನು ನಿಯಂತ್ರಿಸಿ ಮಾಡುವುದು ಧ್ಯಾನ. ಇದರಿಂದಾಚೆಗಿರುವುದು ‘ತುರಿಯಾವಸ್ಥೆ’. ನಮ್ಮ ಮನಸ್ಸನ್ನು ಸಂಪೂರ್ಣ ಸ್ಥಬ್ಧಗೊಳಿಸಿ ಆತ್ಮಸ್ವರೂಪಭೂತವಾದ ಜೀವ ನೇರವಾಗಿ ಭಗವಂತನನ್ನು ನೋಡುವ ಸ್ಥಿತಿ ತುರಿಯಾವಸ್ಥೆ. ಈ ಶ್ಲೋಕದಲ್ಲಿ ಕೃಷ್ಣ ತುರಿಯಾವಸ್ಥೆಯ ಸುಳಿವು ಕೊಡುತ್ತಾನೆ. ಈ ವಿಚಾರ ಇಲ್ಲಿ ನಿಗೂಢವಾಗಿ ಅಡಗಿದೆ.
ಧ್ಯಾನದಲ್ಲಿ ನಾವು ಕಾಣುವುದು ನೇರ ಭಗವಂತನನ್ನಲ್ಲ ಬದಲಿಗೆ ಭಗವಂತನ ಪ್ರತೀಕವನ್ನು. ಏಕೆಂದರೆ ಮನಸ್ಸು ನೇರವಾಗಿ ಜ್ಞಾನಾನಂ ದಸ್ವರೂಪಭೂತನಾದ ಭಗವಂತನನ್ನು ಗ್ರಹಿಸಲಾರದು. ಭಗವಂತನ ನೇರ ದರ್ಶನವಾಗಬೇಕಾದರೆ, ಧ್ಯಾನದಿಂದಾಚೆಗಿನ ತುರಿಯಾವಸ್ಥೆಗೆ ಹೋಗಬೇಕು.
ಜೀವ ಸ್ವರೂಪದ ಕಣ್ಣಿನಿಂದ ಭಗವಂತನನ್ನು ಕಾಣಬೇಕು.
ಮನಸ್ಸನ್ನು ನಿರಂತರವಾಗಿ ಭಗವಂತನಲ್ಲಿ ನೆಲೆಗೊಳಿಸಿ; ಮನಸ್ಸಿನ ಮೂಲಕ ಧ್ಯಾನದಲ್ಲಿ ಭಗವಂತನ ಮಾನಸ ರೂಪ ಗೋಚರವಾದ ಮೇಲೆ ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಆಗ ತುರಿಯಾವಸ್ಥೆ ಜಾಗೃತವಾಗುತ್ತದೆ. ಈ ಹಂತದಲ್ಲಿ ಆತ್ಮ ಸ್ವರೂಪಕ್ಕೆ ಭಗವಂತನ ಸಂಯೋಗವಾಗುತ್ತದೆ ಹಾಗು ಆಗ ಅದು ನೇರವಾಗಿ ಭಗವಂತನನ್ನು ಕಾಣಬಲ್ಲದು. ಈ ಸ್ಥಿತಿಯನ್ನು ತಲುಪಿದ ಧ್ಯಾನಯೋಗಿ ನಿಜವಾದ ಯೋಗಿ ಎನಿಸುತ್ತಾನೆ.
ಭಗವಂತನ ಸಾಕ್ಷಾತ್ಕಾರ ಒಂದು ಜೀವ ತನ್ನ ಸಾಧನೆಯ ಹಾದಿಯಲ್ಲಿ ಪಡೆಯಬಹುದಾದ ಅತ್ಯಂತ ಮಹತ್ತರವಾದ ಆನಂದದ ಪರಾಕಾಷ್ಠೆ. ಇದಕ್ಕಿಂತ ಮಿಗಿಲಾದ ಅರಿವು, ಆನಂದದ ದರ್ಶನ ಇನ್ನೊಂದಿಲ್ಲ. ಈ ರೀತಿ ಭಗವಂತನ ಸಾಕ್ಷಾತ್ಕಾರವಾದವನು ಮುಂದೆಂದೂ ಈ ಸಂಸಾರ ಬಂಧದಲ್ಲಿ ಸಿಲುಕುವುದಿಲ್ಲ, ಆತ ಭಗವಂತನಲ್ಲೇ ನೆಲೆಸಿ ಮೋಕ್ಷವನ್ನು ಪಡೆಯುತ್ತಾನೆ.

[…] ಭಗವದ್ಗೀತೆ ಅಧ್ಯಾಯ-6- ಶ್ಲೋಕ- 15- ತುರಿಯಾವಸ್… […]