ಕೆ.ಆರ್.ಪೇಟೆ:ಹವಾಮಾನ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು, ನಿಯಂತ್ರಿಸಲು ಹಾಗೂ ಭವಿಷ್ಯದ ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆ ಮಾಡಲು ಇರುವ ಮೂಲಭೂತ ಜ್ಞಾನ ಹಾಗೂ ಮಾರ್ಪಾಡು ಪದ್ಧತಿಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಹವಾಮಾನ ಕ್ರಿಯಾ ಅಭಿಯಾನದ ರಾಜ್ಯ ಸಂಪನ್ಮೂಲ ವ್ಯಕ್ತಿ ಹುಣಸೂರು ರಾಜು ತಿಳಿಸಿದರು.
ಪಟ್ಟಣದ ತಾ.ಪಂ ಆವರಣದಲ್ಲಿರುವ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಗ್ರಾಮ ವಿಕಾಸ ಸಂಸ್ಥೆ ಮತ್ತು ಆಸರ್ ಸಂಸ್ಥೆ ಸಂಯುಕ್ತ ರಾಷ್ಟ್ರೀಯದಲ್ಲಿ ಹಾಗೂ ತಾ.ಪಂ ಮತ್ತು ಗ್ರಾ.ಪಂ ಮಾರ್ಗದರ್ಶನದಲ್ಲಿ ಏರ್ಪಡಿಸಿದ ಹವಾಮಾನ ಕ್ರಿಯಾ ಅಭಿಯಾನ ಕಾರ್ಯಕರ್ತರ ಜೊತೆ ಒಂದು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ನಮ್ಮ ಪ್ರಕೃತಿ ಹಾಗೂ ಪೂರ್ವಿಕರು ಬಳುವಳಿಯಾಗಿ ಕಲ್ಪಿಸಿರುವ ನೀರು, ಮಣ್ಣು, ಅರಣ್ಯ, ಜಾನುವಾರು ಸಂಪತ್ತು ಹಾಗೂ ಜೀವನೋಪಾಯ ಚಟುವಟಿಕೆಗಳ ಮೇಲೆ ಹವಾಮಾನ ಬದಲಾವಣೆಯಿಂದ ಗಂಭೀರ ಪರಿಣಾಮ ಬೀರುತ್ತಿದೆ. ಮಾನವನ ಅತಿಯಾದ ದುರಾಸೆಯಿಂದಾಗಿ ಇತರ ಜೀವರಾಶಿ ಕೂಡ ಅಪಾಯದ ಅಂಚಿಗೆ ಸಿಲುಕಿದೆ. ಪ್ರಕೃತಿದತ್ತವಾದ ಅರಣ್ಯ, ನೀರು ಜೀವವೈವಿಧ್ಯತೆ ನಾಶವಾಗುತ್ತಿವೆ. ಇದರ ವಿರುದ್ಧ ಸ್ಥಳೀಯ ಮಟ್ಟದಲ್ಲಿಪರಿಹಾರ ಕಂಡುಕೊಳ್ಳಲು ನರೇಗಾ ಸೇರಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಮೂಲಕ ಜಾರಿಯಾಗುತ್ತಿರುವ ಕಾರ್ಯಕ್ರಮಗಳ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಮಾಡಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಹವಾಮಾನ ಕ್ರಿಯೆಯ ತಾಲ್ಲೂಕು ಸಂಪನ್ಮೂಲ ವ್ಯಕ್ತಿ ಬಳ್ಳೆಕೆರೆ ಪ್ರದೀಪ್ ಹವಾಮಾನ ಬದಲಾವಣೆ ಜಗತ್ತಿನ ಎಲ್ಲೆಡೆ ಭೂಕಂಪ, ಸುನಾಮಿ, ಪ್ರವಾಹ, ಮೇಘಸ್ಫೋಟ ಸೃಷ್ಟಿಸುತ್ತಿದೆ ಹವಾಮಾನವೇ ಬದಲಾಗಿ ಮಳೆಗಾಲ, ಬೇಸಿಗೆ, ಚಳಿಗಾಲವೇ ಬದಲಾಗುತ್ತಿದೆ. ಬಿಸಿಗಾಳಿ ಹಾಗೂ ಶೀತಗಾಳಿಗಳ ಕಾರಣದಿಂದಾಗಿ ಮಾನವ-ವನ್ಯಜೀವಿ ಸೇರಿದಂತೆ ಸಕಲ ರಾಶಿಗಳಿಗೂ ಅಪಾಯ ತಂದೊಡ್ಡುತ್ತಿದೆ ಎಂದ ಅವರು ಇದರ ವಿರುದ್ಧ ಗ್ರಾಮಾಂತರ ಪ್ರದೇಶದಲ್ಲಿರುವ ಯುವಪಡೆ, ಕೃಷಿಕರು ಮಹಿಳೆಯರು ಮತ್ತು ಮಕ್ಕಳಲ್ಲಿಜಾಗೃತಿ ಮೂಡಿಸುವ ಮೂಲಕ ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಗಟ್ಟಲು ಹವಾಮಾನ ಕ್ರಿಯಾ ಸಮಿತಿಗಳನ್ನು ರಚಿಸಲಾಗುವುದು.ಸಮಿತಿ ಸದಸ್ಯರ ಮೂಲಕ ಕ್ರಿಯಾಯೋಜನೆ ತಯಾರಿಸಿ ಪರಿಸರ ಸಂರಕ್ಷಣೆ, ಜಲಸಂರಕ್ಷಣೆ, ಜೀವವಿಧ್ಯತೆ ರಕ್ಷಿಸುವ ಸಾಮರ್ಥ್ಯ, ಅಭಿವೃದ್ಧಿ ಕಾರ್ಯಾಗಾರಗಳನ್ನು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುಂದಿನ ಭೂ ಮಂಡಲ ಭವಿಷ್ಯಕ್ಕಾಗಿ ಹಳ್ಳಿಗಳನ್ನು ಉಳಿಸೋಣ ಎಂಬ ಘೋಷಣೆ ಅಡಿ ಬೂಕನಕೆರೆ ಹೋಬಳಿಯ ವ್ಯಾಪ್ತಿಯ 5 ಗ್ರಾ.ಪಂ ಕ್ರಿಯಾ ಶೀಲ ಕಾರ್ಯಕರ್ತರಿಗೆ ಹವಾಮಾನ ಬದಲಾವಣೆ ಸಂಬಂಧಿತ ವಿಡಿಯೋಗಳ ಮೂಲಕ ಹರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಪನ್ಮೂಲ ವ್ಯಕ್ತಿ ಬಳ್ಳೆಕೆರೆ ಪ್ರದೀಪ್,ಬೂಕನಕೆರೆ ಹೋಬಳಿಯ ಬಳ್ಳೆಕೆರೆ,ಗಂಜೀಗೆರೆ, ವಿಠಲಪುರ, ಮಡುವಿನಕೋಡಿ, ಬೂಕನಕೆರೆ ಗ್ರಾ.ಪಂ ಗಳ ವ್ಯಾಪ್ತಿಯ ಕ್ರಿಯಾಶೀಲ ಹವಾಮಾನ ಕ್ರಿಯಾ ಕಾರ್ಯಕರ್ತರು ಭಾಗವಹಿಸಿದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
