ಕೆ.ಆರ್.ಪೇಟೆ,ಅ.27: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಲಾರಪಟ್ಟಣ ಲೋಕೇಶ್(44) ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತವು ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಅವರ ಸ್ವಗೃಹದಲ್ಲಿ ವೀರಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಯಿತು.
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ನಾಗಮಂಗಲ ತಾಲೂಕಿನ ಮೈಲಾರಪಟ್ಟಣದ ಲೋಕೇಶ್ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದ ಪಠಾಣ್ ಕೋಟ್’ನಿಂದ ವಿಶೇಷ ವಿಮಾನದಲ್ಲಿ ಏರ್ ಲಿಪ್ಟ್ ಮೂಲಕ ಬೆಂಗಳೂರಿಗೆ ತಂದು, ಅನಂತರ ಸೇನಾ ವಿಶೇಷ ವಾಹನದಲ್ಲಿ ಬೆಂಗಳೂರಿನಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರವನ್ನು ಗಡಿ ಭದ್ರತಾ ಪಡೆಯ ವಾಹನದಲ್ಲಿ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ವಾಸವಾಗಿದ್ದ ಮನೆಯ ಬಳಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ದೇಶಭಕ್ತರು ಸರತಿಯ ಸಾಲಿನಿಂದ ಮೃತ ಯೋಧನಿಗೆ ಆಶ್ರುತರ್ಪಣದೊಂದಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮೈಲಾರಪಟ್ಟಣಕ್ಕೆ ಕೊಂಡೊಯ್ಯಲಾಯಿತು.

ಕೃಷಿ ಸಚಿವ ಎನ್.ಚೆಲಯವರಾಯಸ್ವಾಮಿ, ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು, ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ತಹಶೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಡಾ.ಎಸ್.ಯು.ಅಶೋಕ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ. ಹರೀಶ್, ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸದಸ್ಯರಾದ ಡಿ.ಪ್ರೇಮಕುಮಾರ್, ಹೆಚ್.ಆರ್.ಲೋಕೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಆನಂದ್ ಕುಮಾರ್, ಸೇರಿದಂತೆ ನೂರಾರು ಗಣ್ಯರು, ಸಾವಿರಾರು ದೇಶಭಕ್ತರು ಲೋಕೇಶ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಕಳೆದ 25 ವರ್ಷಗಳಿಂದ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಲಾರಪಟ್ಟಣದ ಲೋಕೇಶ್ ಅವರು ಕೆ.ಆರ್.ಪೇಟೆ ಪಟ್ಟಣದ ಜಯನಾವೆಲ್ಟೀಸ್ ಪ್ಯಾನ್ಸಿ ಸ್ಟೋರ್ ಮಾಲೀಕರಾದ ಜಯಮ್ಮರಾಮೇಗೌಡ ದಂಪತಿಗಳ ಪುತ್ರಿ ಆಶಾ ಅವರನ್ನು ವಿವಾಹವಾಗಿದ್ದು, ಪತ್ನಿ ಹಾಗೂ ಹರ್ಷಿಣಿ(12), ಹರಿಣಿ(7) ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖೀ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು. ನೆನ್ನೆ ತಡರಾತ್ರಿ ಪಂಜಾಬ್ ಜಿಲ್ಲೆಯ ಪಟಾಣ್ ಕೊಠ’ನ ಗಡಿಯ ರೇಖೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತೀವ್ರ ಹೃದಯಘಾತಕ್ಕೆ ಒಳಗಾಗಿ ಸಾವಿಗೆ ಶರಣಾದರು.

ಇಂದು ಮುಂಜಾನೆ ಭಾರತೀಯ ಸೇನೆಯ ವಿಶೇಷ ವಿಮಾನದಲ್ಲಿ ಲೋಕೇಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಅಲ್ಲಿಂದ ನೇರವಾಗಿ ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ವಾಸವಾಗಿದ್ದ ಹೇಮಾವತಿ ಬಡಾವಣೆಯಲ್ಲಿನ ಅವರ ಸ್ವಗೃಹದ ಬಳಿ ಪಾರ್ಥಿವ ಶರೀರವನ್ನು ಇಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಮಂಜು ಅವರು ಸಭೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿ , ವೀರ ಯೋಧ ಲೋಕೇಶ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚ ಇಟ್ಟು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಸಾರ್ವಜನಿಕರ ದರ್ಶನದ ನಂತರ ಲೋಕೇಶ್ ಅವರ ಪಾರ್ಥಿವ ಶರೀರವನ್ನು ಗಡಿ ಭದ್ರತಾ ಪಡೆಯ ವಿಶೇಷ ವಾಹನದಲ್ಲಿಟ್ಟು ಅವರ ಹುಟ್ಟೂರು ನಾಗಮಂಗಲ ತಾಲೂಕಿನ ಮೈಲಾರ ಪಟ್ಟಣ ಗ್ರಾಮಕ್ಕೆ ಕೊಂಡೊಯ್ದು ನಾಗಮಂಗಲ ತಹಸೀಲ್ದಾರ್ ಆದರ್ಶ ಅವರ ನೇತೃತ್ವದಲ್ಲಿ ಸೇನಾ ಪಡೆಯ ಯೋಧರು, ಮೂರು ಸುತ್ತು ಗಾಳಿಯಲ್ಲಿ ಕುಶಾಲ ತೋಪು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಯೋಧನ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಜಿಲ್ಲಾಡಳಿತದ ಹಾಗೂ ಸೇನಾ ಅಧಿಕಾರಿಗಳು ಕುಟುಂಬದವರಿಗೆ ಹಸ್ತಾಂತರ ಮಾಡಿದರು.
– ಶ್ರೀನಿವಾಸ್ ಆರ್.
