ತುಮಕೂರು: ಮುಂದಿನ ವರ್ಷ ನಡೆಯಲಿರುವ ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೋರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೇಮಠ್ ಕೆಪಿಸಿಸಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರಾದ ಸೂರ್ಯಮುಕುಂದರಾಜ್, ದಾವಣಗೆರೆಯ ನಿಖಿಲ್ ಕೊಂಡಜ್ಜಿ ಸೇರಿದಂತೆ ವಿವಿಧ ಮುಖಂಡರು, ಕ್ಷೇತ್ರದ ಪದವಿಧರ ಮತದಾರರೊಂದಿಗೆ ತೆರಳಿ ಬೆಂಗಳೂರಿನಲ್ಲಿ ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿರುವ ಶಶಿಹುಲಿಕುಂಟೇಮಠ್ ಅವರು ಪಕ್ಷದ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಯುವಜನರನ್ನು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಲವು ಚುನಾವಣೆ ಗೆಲುವಿಗೆ ಶ್ರಮಿಸಿದ್ದಾರೆ.ಇವರ ಕಾರ್ಯಬದ್ಧತೆ ಕಾಂಗ್ರೆಸ್ ನಾಯಕರಿಗೆ ಅರಿವಿದ್ದು, ಈ ಬಾರಿ ಆಗ್ನೇಯ ಪದವಿಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಒಲವು ತೋರಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಆಗ್ನೇಯ ಪದವಿಧರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶಶಿ ಹುಲಿಕುಂಟೇಮಠ್ ಅವರು, ಕ್ಷೇತ್ರದ ಎಲ್ಲಾ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರೊAದಿಗೆ ಚರ್ಚೆ ಮಾಡಿದ್ದು, ಹಿರಿಯ ನಾಯಕರು ಸ್ಪರ್ಧೆಗೆ ಬೆಂಬಲ ಸೂಚಿಸಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಇತ್ತೀಚಿನ ವಿಧಾನಪರಿಷತ್ ಸ್ಥಾನದ ನೇಮಕದಲ್ಲಿ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಿದ್ದು, ಈ ಬಾರಿ ಪದವಿಧರ ಕ್ಷೇತ್ರದಲ್ಲಿ ಶಶಿ ಹುಲಿಕುಂಟೇಮಠ್ ಅವರು ಸ್ಪರ್ಧಿಸಲು ಪಕ್ಷದ ಹಿರಿಯ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಯಲ್ಲಿ ಶಶಿ ಹುಲಿಕುಂಟೇಮಠ್ ಆವರು ಕ್ಷೇತ್ರ ಪ್ರವಾಸ ಆರಂಭಿಸಿ ಪ್ರಮುಖರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರಕಿದ್ದು, ಈ ಬಾರಿ ಆಗ್ನೇಯ ಪದವಿಧರ ಕ್ಷೇತ್ರದಲ್ಲಿ ತಾವು ಸ್ಪರ್ಧೆ ಮಾಡಿದರೆ ಗೆಲುವು ಸಾಧ್ಯವಾಗುತ್ತದೆ ಎಂದು ಶಶಿ ಹಲಿಕುಂಟೇಮಠ್ ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
