ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸುತ್ತಮುತ್ತಲ 14 ಗ್ರಾಮ ಪಂಚಾಯ್ತಿಗಳ 54 ಹಳ್ಳಿಗಳ ಸೇರ್ಪಡೆ ಪ್ರಸ್ತಾವನೆಯನ್ನುತೀವ್ರವಾಗಿ ವಿರೋಧಿಸಿದ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಮುಖಂಡರು ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿದರು.
ನಗರದಲ್ಲಿ ನಡೆದ ಮಹಾನಗರಪಾಲಿಕೆ ವಿಸ್ತರಣಾ ವಿರೋಧಿ ಸಭೆಯಲ್ಲಿ ಮಾತನಾಡಿದರಾಜ್ಯಗ್ರಾಮ ಪಂಚಾಯಿತಿ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಹಳ್ಳಿಗಳನ್ನು ನಗರೀಕರಣ ಮಾಡಲು ಹೊರಟಿರುವುದು ದೊಡ್ಡಸಾಮಾಜಿಕ ಅನ್ಯಾಯ.ಪ್ರಸ್ತಾಪಿತ ವಿಚಾರದ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ, ಗ್ರಾಮ ಪಂಚಾಯ್ತಿಗಳು ಸಭೆ ನಡೆಸಿ ವಿರೋಧಿ ನಿರ್ಣಯ ಕೈಗೊಳ್ಳಬೇಕು.
ಹಳ್ಳಿಗಳ ಬದುಕು ನಾಶ ಮಾಡುತ್ತಿರುವ ಈ ಪ್ರಯತ್ನದ ವಿರುದ್ಧ ರಾಜಕೀಯ ಪಕ್ಷಗಳ ಉದ್ದೇಶಿತ 54 ಹಳ್ಳಿಗಳು ಒಳಗೊಂಡ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 290 ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ.ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರಾಗುವ ಅವಕಾಶವಿದೆ. ಆದರೆ ನಗರಪಾಲಿಕೆಗೆ ಸೇರ್ಪಡೆಯಾದರೆ 7-8 ಮಂದಿ ಸದಸ್ಯರಾಗಬಹುದಷ್ಟೇ.ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳಲ್ಲಿ ಶೇಕಡ 50ರಷ್ಟು ಹೆಣ್ಣುಮಕ್ಕಳು, ಎಲ್ಲಾ ವರ್ಗದವರು ರಾಜಕೀಯ ಅಧಿಕಾರ ಹೊಂದುವ ಅವಕಾಶವಿದೆ.ಆದರೆ ನಗರಪಾಲಿಕೆಗೆ ಸೇರ್ಪಡೆಯಾದರೆ ಇಷ್ಟು ಜನರ ರಾಜಕೀಯ ಪ್ರಾತಿನಿಧ್ಯವನ್ನು ವಂಚಿಸಿದಂತಾಗುತ್ತದೆ.
ಇದಲ್ಲದೆ, ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಸ್ಥಳೀಯ ಪ್ರತಿನಿಧಿಗಳಿರುತ್ತಾರೆ.ಇವರೂ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ದೊಡ್ಡೇರಿವಿಜಯಪ್ರಕಾಶ್ ಮಾತನಾಡಿ, ಹಳ್ಳಿಗಳನ್ನು ನಗರಪಾಲಿಕೆಗೆ ಸೇರ್ಪಡೆ ಮಾಡಿ ತೆರಿಗೆ, ಕಂದಾಯದ ಹೊರೆ ಹೊರಿಸಲಾಗುತ್ತದೆ ಹೊರತು ಅವರಿಗೆ ಯಾವುದೇ ಅನುಕೂಲ ಆಗಲಾರದು.ಹಳ್ಳಿಗಳಲ್ಲಿ 500 ರೂ. ಇರುವ ಕಂದಾಯ ತುಮಕೂರು ನಗರಕ್ಕೆ ಸೇರ್ಪಡೆಯಾದರೆ ಸಾವಿರಗಟ್ಟಲೆಯಾಗುತ್ತದೆ.ನಿವೇಶನ ಖರೀದಿಸಲು, ಮನೆ ಕಟ್ಟಲು ತೆರಿಗೆ, ಪರವಾನಗಿಗೇ ಸಾವಿರಾರು ರೂಪಾಯಿ ತೆರಬೇಕಾಗುತ್ತದೆ.
ಸಂವಿಧಾನಾತ್ಮಕವಾಗಿ ದೊರೆತಿರುವ ಗ್ರಾಮ ಪಂಚಾಯ್ತಿಯ ರಾಜಕೀಯ ಪ್ರಾತಿನಿಧ್ಯದಿಂದಲೂ ಗ್ರಾಮೀಣ ಜನರು ವಂಚಿತರಾಗುತ್ತಾರೆ.ಯಾವುದೇ ಪ್ರಯೋಜನವಿಲ್ಲದ ನಗರೀಕರಣವನ್ನು ಎಲ್ಲಾ ಗ್ರಾಮದವರೂ ತೀವ್ರವಾಗಿ ವಿರೋಧಿಸಬೇಕು ಎಂದು ಮನವಿ ಮಾಡಿದರು.
ನಗರದ ಸುತ್ತಮುತ್ತತಾವು ಆಸ್ತಿ ಮಾಡಿಕೊಳ್ಳಲು, ತಮ್ಮ ಆಸ್ತಿಯ ಮೌಲ್ಯ ಹೆಚ್ಚಿಸಿಕೊಳ್ಳುವ ಸ್ವಾರ್ಥದಿಂದ 54 ಹಳ್ಳಿಗಳನ್ನು ತುಮಕೂರು ನಗರಪಾಲಿಕೆಗೆ ಸೇರಿಸಲು ಹೊರಟಿರುವುದುದೊಡ್ಡದ್ರೋಹ.ಪ್ರಸ್ತಾವನೆ ವಿರೋಧಿಸಿ ಅಂತಹವರಿಗೆತಕ್ಕ ಪಾಠ ಕಲಿಸಬೇಕು.ಈ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರು ಹಳ್ಳಿಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕುಎಂದರು.
ಮಹಾನಗರಪಾಲಿಕೆ ವಿಸ್ತರಣೆ ವಿರೋಧಿ ಹೋರಾಟ ಸಮಿತಿ ಸಂಚಾಲಕ, ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್ ಮಾತನಾಡಿ, ಇರುವ ತುಮಕೂರು ನಗರವನ್ನೇ ಅಭಿವೃದ್ಧಿ ಮಾಡಿ ನಾಗರೀಕ ಸೌಕರ್ಯಕೊಡಲಾಗದವರು, ಇನ್ನಷ್ಟು ಹಳ್ಳಿಗಳನ್ನು ಸೇರ್ಪಡೆ ಮಾಡಿ ನಗರವನ್ನು ನರಕ ಮಾಡಲು ಹೊರಟಿರುವುದು ನಾಚಿಕೆಗೇಡು.ಕಳೆದ ಬಾರಿ ನಗರಕ್ಕೆ ಸೇರಿಸಿಕೊಂಡ 22 ಹಳ್ಳಿಗಳ ಸ್ಥಿತಿಗತಿ ಬದಲಾಗಿಲ್ಲ. ಆ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು, ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲ. ಮೊದಲು ಈ ಪ್ರದೇಶಗಳನ್ನು ಅಭಿವೃದ್ಧಿ ಮಾಡಿ ತೋರಿಸಿ ಎಂದರು.
ಹಕ್ಕೊತ್ತಾಯ ಬಸವರಾಜು, ಮಂಜುನಾಥ್, ರತ್ನಮ್ಮ, ನಾಗರಾಜು, ಲಿಂಗರಾಜು, ಸುಬ್ರಹ್ಮಣ್ಯ ಶಬ್ಬೀರ್ಅಹ್ಮದ್, ರವೀಶಯ್ಯ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.
ವರದಿ : ಚಂದ್ರಚೂಡ್
