ಟಿ. ನರಸೀಪುರ, ಅ.30: “ಒಪ್ಪಂದದ ಮಾತಿನಂತೆ ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯತ್ನ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗಲಿದೆ. ಹೀಗಾಗಿ ಹೈಕಮಾಂಡ್ ಸ್ಪಷ್ಟವಾಗಿ ಘೋಷಣೆ ಮಾಡಿ, ಮುಂದಿನ ಐದು ವರ್ಷಗಳಿಗೂ ಸಿದ್ದರಾಮಯ್ಯರವರೇ ಮುಖ್ಯಮಂತ್ರಿ ಎಂದು ಘೋಷಿಸಬೇಕು,” ಎಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ. ಬಿ. ಮರಯ್ಯ ಆಗ್ರಹಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯರವರು ಇನ್ನೂ ಚಿರಯೌವನದ ನಾಯಕರು. ವಯಸ್ಸಾಗಿದೆ ಎಂದು ಯಾರಾದರೂ ಹೇಳುವುದು ನಗುವು ಹುಟ್ಟಿಸುವ ಮಾತು. ಅವರ ಸೇವೆ ಜನತೆಗೆ ಇನ್ನೂ ಹತ್ತು ವರ್ಷಗಳಿಗೂ ಅಗತ್ಯವಿದೆ. ಅವರು ಜನರ ಕಷ್ಟ–ಸುಖಗಳಲ್ಲಿ ಪಾಲ್ಗೊಂಡು ನಿಜವಾದ ಜನನಾಯಕತ್ವವನ್ನು ಪ್ರದರ್ಶಿಸುತ್ತಿದ್ದಾರೆ,” ಎಂದರು.
“ರಾಜ್ಯದಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಿ, ಸಿದ್ದರಾಮಯ್ಯರವರು ಮತ್ತೆ ವರುಣಾ ಕ್ಷೇತ್ರದಿಂದಲೇ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಮನವಿ ಮಾಡುತ್ತೇವೆ. ಯತೀಂದ್ರರು ಎಂಎಲ್ಸಿಯಾಗಿ ಇರಲಿ, ಆದರೆ ಯಜಮಾನರಾಗಿ ಸಿದ್ದರಾಮಯ್ಯರವರೇ ಚುನಾವಣಾ ರಣರಂಗಕ್ಕೆ ಇಳಿಯಬೇಕು,” ಎಂದು ಹೇಳಿದರು.
ಅವರು ಮುಂದುವರಿದು, “ಜನರ ಇಚ್ಚೆ, ಅಭಿಪ್ರಾಯ, ಪ್ರೀತಿ – ಇವುಗಳೆಲ್ಲಕ್ಕೆ ಸಿದ್ದರಾಮಯ್ಯರವರು ತಲೆಬಾಗಬೇಕು. ಜನರು ಬಯಸಿದರೆ ಜನನಾಯಕನಾಗಿ ಜನರ ಇಚ್ಛೆಯನ್ನು ಪೂರ್ಣಗೊಳಿಸುವುದು ಅವರ ಕರ್ತವ್ಯ,” ಎಂದು ಅಭಿಪ್ರಾಯಪಟ್ಟರು.

‘ಐದು ಗ್ಯಾರೆಂಟಿಗಳು ಜನರ ನೆಮ್ಮದಿಗೆ ದಾರಿ’ — ಡಾ. ಬಿ. ಮರಯ್ಯ
ರಾಜ್ಯ ಸರ್ಕಾರ ಜಾರಿಗೆ ತಂದ ಐದು ಗ್ಯಾರೆಂಟಿ ಯೋಜನೆಗಳಿಂದ ಜನತೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. “ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮಾತು ನಗುವು ಹುಟ್ಟಿಸುವಂತದ್ದು. ಅವರು ಪೂರ್ಣ ಐದು ವರ್ಷಗಳಿಗೂ ಮುಖ್ಯಮಂತ್ರಿ ಆಗಿಯೇ ಉಳಿಯುತ್ತಾರೆ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ; ಆಗಲೂ ಸಿದ್ದರಾಮಯ್ಯರವರೇ ಮುಖ್ಯಮಂತ್ರಿ ಆಗಿರುತ್ತಾರೆ,” ಎಂದರು.
– ನಾಗೇಂದ್ರ ಕುಮಾರ್ ಎಂ.
