ಕೆ.ಆರ್.ಪೇಟೆ- ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ ಧೀಶಕ್ತಿಯಾಗಿರುವ ಮಹಾತ್ಮ ಗಾಂಧೀಜಿಯವರು, ಅಹಿಂಸಾ ಹೋರಾಟವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ವಿಶ್ವದ ಶಾಂತಿದೂತರಾಗಿ ಹೊರಹೊಮ್ಮಿದ್ದಾರೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯದ ಕರ್ನಾಟಕ ಸಂಘ, ಕೆ. ಆರ್.ಪೇಟೆ ಕೃಷ್ಣ ಪ್ರತಿಷ್ಠಾನ, ತಾಲೂಕು ಸಮಾನ ಮನಸ್ಕರ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಶ್ರೀಮತಿ ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಆಯೋಜಿಸಿರುವ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಸಸಿಗೆ ನೀರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಅಹಿಂಸಾ ಹೋರಾಟದ ಮೂಲಕ ಬ್ರಿಟಿಷರ ವಿರುದ್ಧ ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಜೀವನದ ಸಾಧನೆಗಳು ಇಂದು ಯುವ ಜನರಿಗೆ ಚೆನ್ನಾಗಿ ಅರ್ಥವಾಗಬೇಕಾಗಿದೆ.
ಗಾಂಧೀಜಿಯವರ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿ ಸಂಚು ನಡೆಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗಾಂಧೀಜಿಯವರ ಸಚ್ಚಾರಿತ್ರಕ್ಕೆ ಅಪಚಾರ ತರುವಂತಹ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿ ಗಾಂಧೀಜಿಯವರ ಬಗ್ಗೆ ತಪ್ಪು ಭಾವನೆ ಮೂಡುವಂತೆ ಮಾಡುತ್ತಿವೆ ವಿಶ್ವದ ಶಾಂತಿದೂತರಾಗಿ ಹೊರ ಹೊಮ್ಮಿರುವ ಮಹಾತ್ಮ ಗಾಂಧೀಜಿಯವರ ಜೀವನವೇ ತೆರೆದ ಪುಸ್ತಕದಂತಿದ್ದು ಸ್ವದೇಶಿ ಚಳುವಳಿ ಅಹಿಂಸೆ ತ್ಯಾಗ ಬಲಿದಾನದಂತಹ ಆದರ್ಶ ಗುಣಗಳನ್ನು ನಾಡಿಗೆ ಪರಿಚಯಿಸಿಕೊಟ್ಟ ಮಹಾನ್ ಶಕ್ತಿಯಾಗಿರುವ ಗಾಂಧೀಜಿಯವರು ದ್ವೇಷ ಅಸೂಯೆ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಂದ ಕೂಡಿರುವ ಸಮಾಜವನ್ನು ಆರೋಗ್ಯವಂತ ಸಮಾಜವನ್ನಾಗಿ ಮಾಡಿ ಸರಿದಾರಿಗೆ ತರಲು ಗಾಂಧೀಜಿಯವರ ತತ್ವ ಸಂದೇಶಗಳು ಇಂದು ಹೆಚ್ಚು ಪ್ರಸ್ತುತವಾಗಿವೆ.

ಅನ್ಯಾಯದ ವಿರುದ್ಧ ಹೋರಾಡುವಂತೆ ನಾಡಿನ ಯುವಕರಿಗೆ ಸಂದೇಶ ನೀಡಿರುವ ಗಾಂಧೀಜಿ ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸು ವಂತೆಯೂ ಸೂಚಿಸಿದ್ದಾರೆ. ಹೆಣ್ಣು ಮಕ್ಕಳನ್ನು ಪೂಜಿಸಿ ಗೌರವಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಂತೆ ಕರೆ ನೀಡಿರುವ ಗಾಂಧೀಜಿಯವರ ಆದರ್ಶ ಗುಣಗಳು ಸಾರ್ವಕಾಲಿಕ ಸತ್ಯವಾಗಿದೆ. ನಾನು ನನ್ನದು ಎಂಬ ಸ್ವಾರ್ಥದಿಂದ ಕೂಡಿರುವ ಇಂದಿನ ಸಮಾಜದಲ್ಲಿ ಸಮಾಜಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಂಡು, ವಿದ್ಯಾರ್ಥಿಗಳು ಹಾಗೂ ಯುವ ಜನರು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಚೆನ್ನಾಗಿ ಓದಿ ಮನನ ಮಾಡಿಕೊಳ್ಳುವ ಮೂಲಕ ಜ್ಞಾನವಂತರಾಗಬೇಕು. ಮೊಬೈಲ್ ಹಾಗೂ ಟಿವಿ ವೀಕ್ಷಣೆಯಿಂದ ದೂರವಿದ್ದು ಯುವಜನರ ವ್ಯಕ್ತಿತ್ವದ ಸಮಗ್ರವಾದ ವಿಕಸನಕ್ಕೆ ಬೇಕಾದ ಸಮಗ್ರವಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಶ್ರೀನಿವಾಸ್ ಕರೆ ನೀಡಿದರು.
ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಸಂಘಟಕರು ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ ಮಹಾತ್ಮ ಗಾಂಧೀಜಿಯವರ ಚಿಂತನೆ ಹಾಗೂ ತತ್ವದರ್ಶಕಗಳು ಹಿಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ ಗಾಂಧೀಜಿಯವರ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರಗಳು ನಿರಂತರವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕೆ. ಆರ್.ಪೇಟೆ ಕೃಷ್ಣ ಪ್ರತಿಷ್ಠಾನ ಹಾಗೂ ಸಮಾನ ಮನಸ್ಕರ ವೇದಿಕೆಯ ಸಹಯೋಗದಲ್ಲಿ ಗಾಂಧೀಜಿಯವರ ಬದುಕು ಮತ್ತು ಹೋರಾಟ ಕುರಿತು ಆಯೋಜಿಸಿರುವ ಎರಡು ದಿನಗಳ ವಿಚಾರ ಸಂಕಿರಣವು ಯುವ ಜನರು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ವರದಾನವಾಗಿದೆ ನಾಡಿನ ಖ್ಯಾತ ವಿಚಾರವಾದಿಗಳು ಹಾಗೂ ಚಿಂತಕರು ಗಾಂಧಿ ವಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ ಗೌಡರು ಕೆ ಆರ್ ಪೇಟೆ ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ರಂಗಮಂದಿರವಿಲ್ಲ ತಾಲೂಕು ಹಾಗೂ ಜಿಲ್ಲಾಡಳಿತವು ಕೆ ಆರ್ ಪೇಟೆ ಪಟ್ಟಣದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲು ಅನುಕೂಲವಾಗುವಂತೆ ಒಂದು ರಂಗಮಂದಿರವನ್ನು ನಿರ್ಮಿಸುವ ದಿಕ್ಕಿನಲ್ಲಿ ಮುಂದಾಗಿ ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಜಾಗತಿಕ ಜಗತ್ತಿನ ಹಿಂದಿನ ಸ್ಪರ್ಧಾ ಪ್ರಪಂಚದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಗಾಂಧಿವಾದವು ಯಾರಿಗೂ ಬೇಡದ ವಸ್ತುವಾಗಿದೆ. ಆಧುನಿಕತೆಯ ವ್ಯಾಮೋಹಕ್ಕೆ ತಿಳಿದಿರುವ ಯುವಜನರು ನ್ಯಾಯ,ನೀತಿ, ಧರ್ಮ ಹಾಗೂ ಸತ್ಯದ ದಾರಿಯಲ್ಲಿ ಸಾಗುವುದನ್ನು ಬಿಟ್ಟು ಅಡ್ಡ ದಾರಿಯನ್ನು ಹಿಡಿಯುವ ಮೂಲಕ ಸಮಾಜ ಕಂಠಕರಾಗಿ ರೂಪಗೊಳ್ಳುತ್ತಿದ್ದಾರೆ ಹಾದಿ ತಪ್ಪಿರುವ ಯುವ ಜನಾಂಗವನ್ನು ಸರಿದಾರಿಗೆ ತರಲು ಗಾಂಧಿ ಮಾರ್ಗವೊಂದೇ ನಮಗಿರುವ ಪರಿಹಾರವಾಗಿದೆ ಎಂದು ಚೆಲುವಯ್ಯ ಹೇಳಿದರು. ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಬಿಎಮ್ ಸತೀಶ್ ಪ್ರಾಸ್ತಾವಿಕ ನುಡಿಗಳ ನಾಡಿದರು.
ಮಂಡ್ಯ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚೆಲುವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮ ಶೆಟ್ಟರು, ಹಿರಿಯ ರೈತ ಮುಖಂಡರಾದ ಎಂ.ವಿ. ರಾಜೇಗೌಡ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇ ಹೊಸಳ್ಳಿ ಜವರಾಯಿಗೌಡ, , ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನುರಾಧ, ಮೈಸೂರಿನ ಪ್ರತಿಕ್ಷಣ ವಿದ್ಯಾರ್ಥಿ ಎಸ್.ಎಂ.ರವಿ ಕಾರ್ಯಕ್ರಮದಲ್ಲಿ ಇದ್ದರು.
- ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
