
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಸ್ತ್ರೀ ಬಹುರೂಪಿ…!!
ದೇವರು ಅಂದರೆ ಯಾರು?
ನನ್ನ ಅನಿಸಿಕೆಯಲ್ಲಿ ಸರಳವಾಗಿ ಹೇಳುವುದಾದರೆ, ‘ದಯೆಯಿಂದ ವರದ ರೂಪದಲ್ಲಿ ಅತ್ಯವಶ್ಯಕವಿರುವುದನ್ನು ಸಂದರ್ಭಾನುಸಾರ ನೀಡಿ ರುಜುವಾತುಪಡಿಸುವವನೇ ದೇವರು’. ಈ ವಾಕ್ಯವನ್ನು ಬಿಡಿಸಿ ಹೇಳುವುದಾದರೆ ರುಜುವಾತಿಸಿದ ಪ್ರತಿ ವ್ಯಕ್ತಿಯೂ, ಪ್ರತಿ ಸಂಸ್ಥೆಯೂ ದೇವರೇ. ಸೂರು ಇಲ್ಲದವರಿಗೆ ನಿವೇಶನ ನೀಡಿ ಮನೆಯನ್ನು ಕಟ್ಟಿಕೊಟ್ಟು ಅವರ ಹೆಸರಿಗೆ ರುಜುವಾತಿಸಿದರೆ ಸರ್ಕಾರವೇ ಅವರ ಪಾಲಿನ ದೇವರು ಆಗುತ್ತದೆ.
ಇಂತಹ ಕಾರಣಗಳಿಂದಲೇ ಇಂದು ಜನಪ್ರತಿನಿಧಿಗಳು ಇಂತಹ ಸಿದ್ಧಾಂತವನ್ನು ಮನನ ಮಾಡಿಕೊಂಡು ರಾತ್ರೋರಾತ್ರಿ ದೇವರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಇಂತಹವು ಅಪರೂಪದ್ದಾಗಿದ್ದರೆ ಪರವಾಗಿರಲಿಲ್ಲ. ಆದರೆ ಕೆಲವರ ವೃತ್ತಿಯಾಗಿರುವುದು ಆತಂಕದ ವಿಷಯ ಮತ್ತು ಇಂಥ ನೀಚ ವೃತ್ತಿಯಿಂದ ಎಷ್ಟೋ ಮಂದಿ ಕೃಷ್ಣನ ಜನ್ಮಸ್ಥಳದಲ್ಲಿ ಕಾಲ ದೂಡುತ್ತಿದ್ದಾರೆ.
ಅಂದು ಗಾಂಧೀಜಿ, ನೆಹರು, ಸುಭಾಷ್ಚಂದ್ರ ಬೋಸ್, ವಿವೇಕಾನಂದ ಮುಂತಾದ ಮಹನೀಯರು ಬ್ರಿಟಿಷರ ಕಪಿಮುಷ್ಠಿಯಿಂದ ನಮ್ಮ ದೇಶವನ್ನು ನಮಗೆ ರುಜುವಾತಿಸಿದರು. ಈ ಫಲವಾಗಿ ಅವರ ವಿಗ್ರಹಗಳು ಸ್ಥಾಪಿಸಲ್ಪಟ್ಟವು. ಕಾಲಾ ನಂತರ ಅವರ ಆದರ್ಶಗಳು ಮಾದರಿಯಾದ್ದರಿಂದ ಅವರ ಪ್ರತಿಮೆಗಳು ಪೂಜಿಸಲ್ಪಡುತ್ತಿವೆ.
ಇಂದು ಕೆಲವರು ತಮ್ಮ ಅಧಿಕಾರದ ಚುಕ್ಕಾಣಿಯನ್ನು ದುರ್ಬಳಕೆ ಮಾಡಿಕೊಂಡು ದೇಶವನ್ನು ಕೊಳ್ಳೆ ಹೊಡೆದು, ಭಂಡಕೋರರಾಗಿ, ಸ್ವಾರ್ಥಕ್ಕಾಗಿ ಜನರನ್ನು ವಿಂಗಡಿಸಿ, ದ್ವೇಷವನ್ನು ಬಿತ್ತುವ ಧನಪಿಶಾಚಿಗಳೂ ಆಗಿರುವ ಇವರು ಜೀವಂತವಾಗಿರುವಾಗಲೇ ತಮ್ಮ ಚೇಲಾಗಳಿಂದ ತಮ್ಮ ಪ್ರತಿಮೆಗಳನ್ನು ತಾವೇ ಸ್ಥಾಪಿಸಿಕೊಳ್ಳುತ್ತಿದ್ದಾರೆ. ಇದು ಅಸಭ್ಯ ವರ್ತನೆಯಾದರೂ ಇದನ್ನು ತಡೆಯಬೇಕಾದವರೇ ಇಂಬು ಕೊಟ್ಟರೆ ಜನಸಾಮಾನ್ಯರಾದ ನಾವು ಏನು ತಾನೇ ಮಾಡಲು ಸಾಧ್ಯ?
ಇರಲಿ, ನಾನು ಈ ಮೇಲಿನ ವಿಷಯವನ್ನು ಪ್ರಸ್ತಾಪಿಸಲು ಕಾರಣ ‘ವಿಗ್ರಹ’ದ ಸೃಷ್ಟಿಗೆ ಕಾರಣವೇನು ಎಂಬುದು. ಮಹಾತಾಯಿ ‘ಕಾಳಿ’ಯ ವಿಗ್ರಹ ನನ್ನ ಮನದಲ್ಲಿ ಮಿಂದಾಗ, ಆಕೆಯ ವಿಗ್ರಹದ ಸ್ವರೂಪ, ನಮ್ಮ ನಂಬಿಕೆ, ಅವರವರ ವಿಚಾರ, ಜನಗಳ ಭಯ, ಕುತೂಹಲ ಮೂಡಿಸುವಂತಹದ್ದು. ಈ ಕಾಳಿಯ ರೂಪಕ್ಕೆ ಮಾರುಹೋದ ನಾನು ಆಕೆಯ ಬಣ್ಣ, ಹದಿನಾರು ಕೈಗಳು, ಪ್ರತಿ ಕೈಯಲ್ಲೂ ಅಸ್ತçಗಳು, ರುಂಡಗಳು, ಚಾಚಿದ ಉದ್ದನೆಯ ನಾಲಗೆ, ಹೊರ ಬಂದ ದಪ್ಪ ಕಣ್ಣುಗಳು, ಅದರ ಸುತ್ತಮುತ್ತಲಿನ ಭಯಭೀತ ಜನರ ಕೆತ್ತನೆಗಳು, ಇಂತಹ ಭಯಂಕರ ರೂಪದ ವಿಗ್ರಹಗಳನ್ನು ನೋಡಿದ ಮಕ್ಕಳಿಗೆ ಮತ್ತು ಹೆದರುವ ಸ್ವಭಾವವುಳ್ಳವರಿಗೆ ರಾತ್ರಿ ಬೆಚ್ಚಿ ಬೀಳುವಂತೆ ಕಾಣಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಮತ್ತು ಇಂತಹ ವಿಗ್ರಹಗಳನ್ನು ಕಂಡು ಎಷ್ಟೋ ಜನ ಮನೋಭ್ರಾಂತಿ ಮತ್ತು ಮನೋ ನ್ಯೂನತೆಗೆ ಒಳಗಾಗಿರುವರು.
ಇಂತಹ ಸ್ಥಳಗಳಲ್ಲಿ ನಾನು ಗಮನಿಸಿದ ಪ್ರಾಣಿ ವಧೆ ಮತ್ತು ಅವುಗಳ ಆಕ್ರಂದನ, ಬಲಿ ಕೊಡುವಾಗ ಆ ಪ್ರಾಣಿಗಳ ನೋಟ ನನ್ನ ಎದೆಯನ್ನು ಅಲ್ಲಾಡಿಸಿಬಿಟ್ಟಿದೆ. ಯಾವ ಸರ್ಕಾರ, ವಿಜ್ಞಾನ, ಕಾನೂನು ಇಂತಹ ಮೂಢನಂಬಿಕೆಗೆ ಕಡಿವಾಣ ಹಾಕೀತು? ಇತ್ತೀಚೆಗಂತೂ ‘ಬೇಲಿಯೇ ಎದ್ದು ಹೊಲ ಮೇಯುತ್ತಿದೆ’. ಪರಿಣಾಮ ಈ ಸಮಾಜ ಎತ್ತ ಸಾಗುವುದೊ, ನಾವು ಕೈಕಟ್ಟಿ ನೋಡುವುದಷ್ಟೇ ನಮ್ಮ ಕೆಲಸವಾಗಿದೆ. ಈ ಕ್ಷಣದಲ್ಲಿ ನನಗೆ ಜ್ಞಾಪಕಕ್ಕೆ ಬರುವುದು ಶ್ರೀಮಾನ್ ಬುದ್ಧ. ಒಮ್ಮೆ ಬುದ್ಧ ವಿಹರಿಸುತ್ತಿದ್ದಾಗ ಮೇಕೆಯನ್ನು ಕಡಿಯುತ್ತಿದ್ದ ಕಟುಕನನ್ನು ತಡೆದು, ‘ಎಲೈ ಕಟುಕನೇ, ಮೇಕೆ ಮರಿಯನ್ನು ಏಕೆ ಕಡಿಯುವೆ? ಅದನ್ನು ಕಡಿಯುವುದೇ ಆದರೆ ಮೊದಲು ನನ್ನ ರುಂಡವನ್ನು ಕಡಿ’ ಎಂದರಂತೆ.
ನಾನು ಮುಖ್ಯವಾಗಿ ಹೇಳ ಹೊರಟಿರುವುದು ಈ ‘ಕಾಳಿ’ ಅಥವಾ ‘ರುದ್ರಿ’ ಅವತಾರದ ಮಹಿಮೆ ಏನು ಎಂಬುದನ್ನು. ಪುರಾಣದ ಕಾಲದಿಂದಲೂ ‘ಸ್ತ್ರೀ ’ಗೆ ವಿಶೇಷ ಸ್ಥಾನಮಾನ ಕೊಟ್ಟು, ದೇವತಾ ಸ್ವರೂಪಿ ಎಂದೇ ನಂಬಿ, ಆಕೆಯನ್ನು ಗೌರವದ ಸ್ಥಾನದಲ್ಲಿ ಇಟ್ಟಿರುವ ದೇಶಗಳೆಂದರೆ, ಭಾರತ ಮತ್ತು ಗ್ರೀಸ್. ಹೆಣ್ಣಿಗಿರುವ ವಿಶೇಷ ಸವಲತ್ತುಗಳು, ಸೌಕರ್ಯಗಳೆಲ್ಲವೂ ಇಂದು ಬರೀ ಪುಸ್ತಕಕ್ಕೆ ಮತ್ತು ಭಾಷಣಗಳಿಗೆ ಸೀಮಿತಗೊಂಡಿವೆ. ಇತ್ತೀಚೆಗೆ ವಾಸ್ತವದಲ್ಲಿ ನಾರಿಯರ ಸ್ಥಾನಮಾನವೇ ಬೇರೆ. ಗಂಡಸಿಗೆ ಹೋಲಿಸಿದರೆ ಶಕ್ತಿ ಸಾಮರ್ಥ್ಯದಲ್ಲಿ ಅಬಲೆ ಮತ್ತು ರೂಪ, ಲಾವಣ್ಯದಲ್ಲಿ ಆಕರ್ಷಣೀಯಳು. ಈ ಎರಡು ಕಾರಣಗಳಿಂದ ಗಂಡು ಅಧಿಕಾರದಿಂದ ಹೆಣ್ಣನ್ನು ಗುಲಾಮಳನ್ನಾಗಿಸಿಕೊಂಡಿದ್ದಾನೆ. ನಮ್ಮ ಆದಿ ಪರಂಪರೆಯ ಕಾಲದಿಂದಲೂ ತಾಯಿಯಾದವಳು ಮಗಳಿಗೆ ಸಹಿಷ್ಣುತೆಯ ಪಾಠವನ್ನು ಹೇಳುತ್ತಲೇ ಬಂದಿದ್ದಾಳೆ.
ನಮ್ಮ ಮಹಿಳೆ ಧೀರೆ, ಕಷ್ಟಜೀವಿ, ಬುದ್ಧಿವಂತಳು, ಕೆಲಸದಲ್ಲಿ ನಿಪುಣಳು, ಮೆದು ಹೃದಯಿಯೂ ಆಗಿದ್ದಾಳೆ. ಇವುಗಳನ್ನೆಲ್ಲಾ ಮನಗಂಡು ಪುರುಷರು ತಮ್ಮ ತೆಕ್ಕೆಯಲ್ಲಿ ಸೆರೆ ಹಿಡಿದು ಚಾಕರಿಯನ್ನು ಮಾಡಿಸಿಕೊಳ್ಳುವುದರಲ್ಲಿ ನಿಸ್ಸೀಮರು.
ಸ್ವಾರಸ್ಯಕರವಾದ ವಿಷಯವಿರುವುದು ಇಲ್ಲೇ. ಕಾಳಿಗೆ ಇರುವ ಹದಿನಾರು ಕೈಗಳ ಪ್ರತೀಕ ಎಂದರೆ, ಗಂಡನಿಗೆ ಹಾಸಿಗೆ ಸುಖ ನೀಡಬೇಕು, ಮುಂಜಾನೆ ಎದ್ದು ಮನೆ ಸಿಂಗರಿಸಿ, ಮಕ್ಕಳನ್ನು ಶಾಲೆಗೆ ತಯಾರು ಮಾಡಿ, ತಿಂಡಿ-ಊಟ ತಯಾರಿಸಿ, ವೃದ್ಧರು, ಅತಿಥಿಗಳಿದ್ದರೆ ಅವರನ್ನು ಸುಧಾರಿಸಿ, ಗಂಡನಿಗೆ ಬೆಡ್ ಕಾಫಿ ಕೊಟ್ಟು ಅವರನ್ನೆಲ್ಲ ಹೊರಡಿಸಿ ಕಳುಹಿಸಬೇಕು. ರೈತಾಪಿ ಕುಟುಂಬದ ಹೆಣ್ಣಾದರೆ ಇನ್ನು ಕೇಳುವುದೇ ಬೇಡ. ಈ ಮೇಲಿನ ಕೆಲಸಗಳ ಜೊತೆ ಹಟ್ಟಿಗೆ ಹೋಗಿ ಕಸ ಗುಡಿಸಿ, ಮುಸುರೆ ತಿಕ್ಕಿ, ಹಾಲು ಕರೆಯುವುದು, ಹೊಲಕ್ಕೆ ಬುತ್ತಿ ಹೊತ್ತು, ಹಗಲಿಡೀ ಆಳಿನೊಂದಿಗೆ ಬಿಸಿಲು, ಮಳೆಯೆನ್ನದೆ ದುಡಿಯಬೇಕು.
ಇದಕ್ಕೇ ಅಲ್ಲವೇ ಎಷ್ಟು ಕೈಗಳು ಇದ್ದರೂ ಸಾಲದು ಅನ್ನುವುದು. ಪಾಪ, ಹೆಣ್ಣು ಹದಿನಾರು ಕೈಗಳು ಮಾಡುವ ಕೆಲಸವನ್ನು ತನ್ನ ಎರಡೇ ಕೈಗಳಲ್ಲಿ ಮಾಡಿ ತೋರಿಸುವಳು. ಇದನ್ನೇ ‘ರುದ್ರಿ’ ವಿಗ್ರಹದಲ್ಲಿ ಹದಿನಾರು ಕೈಗಳನ್ನು ತೋರಿಸಿರುವರು. ಹೆಣ್ಣು ಮನಸ್ಸು ಮಾಡಿದರೆ ಎಂಥಾ ಕೆಲಸಗಳಿಗೂ ಹಿಂಜರಿಯುವುದಿಲ್ಲ ಎಂಬುದನ್ನು ತೋರಿಸಲು ಕೈಗಳಿಗೆ ಅಸ್ತ್ರಗಳನ್ನೂ ಕೊಟ್ಟಿರುವರು.
ಹೆಣ್ಣನ್ನು ಸಮಾನವಾಗಿ ಕಾಣದಿದ್ದರೆ, ಕರುಣೆ ತೋರದಿದ್ದರೆ, ಹಿಂಸೆಯನ್ನು ಮುಂದುವರಿಸಿದರೆ, ಪ್ರೀತಿ ವಾತ್ಸಲ್ಯ ತೋರದಿದ್ದರೆ ಅನ್ಯಾಯವನ್ನು ಸಹಿಸಲಾಗದೆ ಮುಂದೊಂದು ದಿನ ಹೆಣ್ಣು ಕಾಳಿಯ ಅವತಾರ ಧರಿಸಿಯಾಳು. ಪುರುಷರನ್ನು ಚಂಡಾಡಿಯಾಳು, ಜೋಕೆ!
‘ಅಯ್ಯೋ’ ಅನ್ನುವುದಕ್ಕಿಂತ ಆತ್ಮೀಯತೆಯಿಂದಿರೋಣ ಅಲ್ಲವೆ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ