ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅರಣ್ಯ ಇಲಾಖೆ ಭರ್ಜರಿ ದಾಳಿ ನಡೆಸಿ ಕಾಡುಕೋಣವನ್ನು ಕಳ್ಳಬೇಟೆಯಾಡಿದ ಆರೋಪಿ ಆರು ಮಂದಿಯನ್ನು ಬಂಧಿಸಿದೆ.
ಭಾರತೀಬೈಲ್ ವ್ಯಾಪ್ತಿಯ ಬಾಳೂರು ಗ್ರಾಮದ ಮಂಜಯ್ಯನ ಮನೆಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಕಾಡುಪ್ರಾಣಿಯ ಮಾಂಸವನ್ನು ಬೇಯಿಸಲು ಪ್ರಯತ್ನಿಸುತ್ತಿದ್ದ ವೇಳೆ ಸುಮಾರು 1 ಕೆ.ಜಿ. ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಕನೆ ಎಸ್ಟೇಟ್ನಲ್ಲಿ ಕಾಡುಕೋಣವನ್ನು ಗುಂಡಿಕ್ಕಿ ಕೊಂದಿರುವುದಾಗಿ ಅರಣ್ಯ ಇಲಾಖೆ ಪತ್ತೆಹಚ್ಚಿದೆ. ಈ ಬೇಟೆಯಲ್ಲಿ ಕಲ್ಮನೆ ಎಸ್ಟೇಟ್ನ ಜೀವನ್, ಫೀಲ್ಡ್ ಆಫೀಸರ್ ಬಪ್ಪುಂಜಿಯ ರವೀಶ್, ರೈಟರ್ ಪ್ರದೀಪ್, ಮೇಸ್ತ್ರಿ ದೇಜಪ್ಪ, ಸೀನ ಕೂಲಿ ಸುಂದರೇಶ್, ಹಾಗೂ ಎಸ್ಟೇಟ್ ಮಾಲೀಕ ಧೀರಜ್ ಪ್ರಭು ಭಾಗವಹಿಸಿದ್ದರೆಂದು ತಿಳಿದುಬಂದಿದೆ.
ಮರ್ಕಲ್ ಕೆರೆಯ ಸುತ್ತಮುತ್ತ ಪರಿಶೀಲಿಸಿದಾಗ ನೀರಿನಲ್ಲಿ ಕಾಡುಕೋಣದ ತಲೆಬುರುಡೆ ತೇಲುತ್ತಿರುವುದು ಪತ್ತೆಯಾಗಿದೆ.
ಮಂಜಯ್ಯನ ಮನೆಯಿಂದ ಅರೆಬೇಯಿಸಿದ ಕಾಡುಕೋಣದ ಮಾಂಸ ಹಾಗೂ ಕಳ್ಳಬೇಟೆಗೆ ಬಳಸಿದ ಡಿ.ಬಿ.ಬಿ.ಎಲ್ ಬಂದೂಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಕಳ್ಳಬೇಟೆ ಆರೋಪದಡಿ ರವೀಶ್, ಪ್ರದೀಪ್, ದೇಜಪ್ಪ, ಸೀನ, ಮಂಜಯ್ಯ ಹಾಗೂ ಸುಂದರೇಶ್ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಜೀವನ್, ದಿಲೀಪ್ ಹಾಗೂ ಎಸ್ಟೇಟ್ ಮಾಲೀಕ ಧೀರಜ್ ಪ್ರಭು ತಲೆಮರೆಸಿಕೊಂಡಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ ಟಿ.ಎಂ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಜಿ. ಮಂಜುನಾಥ್ ನೇತೃತ್ವದಲ್ಲಿ DRFO ಸುಹಾಸ್, ಲಕ್ಷ್ಮಣ್, ಉಮೇಶ್, ಅಶ್ವತ್, ಸುಧೀರ್, ಕೃಷ್ಣಮೂರ್ತಿ, ಗಿರೀಶ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

[…] ಇದನ್ನು ಓದಿ: ಮೂಡಿಗೆರೆ: ಕಾಡುಕೋಣ ಬೇಟೆ ಪ್ರಕರಣ – ಆರು ಮಂ… […]