ಬೇಲೂರು- ತಾಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಿಜಕ್ಕೂ ಹೃದಯ ಕಲುಕುವ ದೃಶ್ಯವೊಂದು ಕಂಡುಬಂತು. ದೈತ್ಯ ಕಾಡಾನೆಗಳಾದ ಭೀಮ ಮತ್ತು ಕ್ಯಾಪ್ಟನ್ ಪರಸ್ಪರ ಎದುರಾಗಿದ್ದು, ಅಕ್ಷರಶಃ ರಣಾಂಗಣದಂತ ಕಾಳಗ ನಡೆಯಿತು.
ಮದವೇರಿದ ಈ ಆನೆಗಳು ಊರಿನೊಳಗೆ ನುಗ್ಗಿ ಮುಖ್ಯರಸ್ತೆಯಲ್ಲೇ ಪರಸ್ಪರ ಬಡಿದಾಡುತ್ತಾ ಜನರೊಳಗೆ ಭೀತಿಯನ್ನು ಉಂಟುಮಾಡಿದವು. ಅಕಸ್ಮಾತ್ ಆನೆಗಳ ದಾಳಿ ಕಂಡ ಗ್ರಾಮಸ್ಥರು ತಮ್ಮ ಪ್ರಾಣ ಉಳಿಸಿಕೊಳ್ಳಲು ಸಿಕ್ಕೆಡೆಗೆ ಓಡಿದರು.
ಆನೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಹಿಂಬಾಲಿಸಿದರೂ, ಎರಡೂ ಮದವೇರಿದ ಆನೆಗಳ ರೌದ್ರಾವತಾರ ಎದುರು ಕ್ಷಣಕಾಲ ಅಸಹಾಯಕರಾದರು.
ಘಟನೆಯ ವೇಳೆ ಕ್ಯಾಪ್ಟನ್ ಎಂಬ ಆನೆ ಒಂದು ಮನೆಯ ಆವರಣಕ್ಕೆ ನುಗ್ಗಿ, ಅಲ್ಲಿ ಇದ್ದ ಭೀಮನೊಂದಿಗೆ ಕಾಳಗ ಮುಂದುವರಿಸಿತು. ಇದರಿಂದ ಮನೆಯವರು ಆತಂಕಗೊಂಡು ದೇವರ ಹೆಸರನ್ನು ಜಪಿಸುತ್ತಾ ‘ಅಪ್ಪಾ ನನ್ನ ದೇವರೆ’ ಎಂದು ಪ್ರಾರ್ಥನೆಗೆ ತೊಡಗಿದರು.
ಇದನ್ನು ಓದಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸ ಪದಾಧಿಕಾರಿಗಳ ಅವಿರೋಧ ಆಯ್ಕೆ
ಭೀಮ ಹಿಂದಕ್ಕೆ ಸರಿದು ಮನೆ ಎದುರಿನ ಬೇಲಿಯತ್ತ ನುಗ್ಗಿದಾಗ ಅಲ್ಲಿ ಗೊಂತಿಗೆ ಕಟ್ಟಿದ್ದ ಹಸುಗಳು ಪ್ರಾಣಾಪಾಯಕ್ಕೆ ಸಿಲುಕಿದವು. ಕೆಲ ಹಸುಗಳು ಹಗ್ಗ ಕಿತ್ತು ಓಡಿ ಪ್ರಾಣ ಉಳಿಸಿಕೊಂಡವು.
ಕ್ಯಾಪ್ಟನ್ ಆಕ್ರೋಶದಿಂದ ಮನೆ ಮುಂದೆ ಇರಿಸಿದ್ದ ನೀರು ತುಂಬಿದ್ದ ಸಿಂಟೆಕ್ಸ್ ಟ್ಯಾಂಕ್ನ್ನು ತನ್ನ ದಂತಗಳಿಂದ ಒಡೆದು ಛಿದ್ರಗೊಳಿಸಿದ್ದು, ಬಳಿಕ ಪಕ್ಕದಲ್ಲಿದ್ದ ಎತ್ತಿನ ಗಾಡಿಯನ್ನು ಸೊಂಡಿನಿಂದ ಎತ್ತಿ ನೆಲಕ್ಕುರುಳಿಸಿತು.
ಭೀಕರ ಘರ್ಷಣೆಯಲ್ಲಿ ಭೀಮನ ಒಂದು ದಂತ ಮುರಿದು ಬಿದ್ದಿದ್ದು, ಈಗ ಅದು ಒಂಟಿಕೊಂಬನಾಗಿ ಮಾರ್ಪಟ್ಟಿದೆ. ಕ್ಯಾಪ್ಟನ್ ಕೂಡ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಸ್ಥಿತಿಯಲ್ಲಿ ಕಾಡಿನತ್ತ ಹಿಂತಿರುಗಿದರೆಂದು ವರದಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆ ಕ್ಷಿಪ್ರ ಕಾರ್ಯಪಡೆ ಸತತ ಪ್ರಯತ್ನದ ನಂತರ ಎರಡೂ ಆನೆಗಳನ್ನು ಪ್ರತ್ಯೇಕಿಸಿ ಕಾಡಿನತ್ತ ಅಟ್ಟುವಲ್ಲಿ ಯಶಸ್ವಿಯಾದರು. ಆದರೆ ಈ ಯುದ್ಧದಿಂದ ಗ್ರಾಮದಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಯಿತು.


[…] ಇದನ್ನು ಓದು: ಬೇಲೂರು- ಜಗಬೋರನಹಳ್ಳಿಯಲ್ಲಿ ದೈತ್ಯ ಆನೆಗಳ… […]