ತುಮಕೂರು:ವಿಜ್ಞಾನ, ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಅಂತರಜಾಲದಲ್ಲಿ ದೊರೆಯುವ ಮಾಹಿತಿಯನ್ನು ಜ್ಞಾನವಾಗಿ ಪರಿವರ್ತಿಸುವ ಗುರುತರ ಜವಾಬ್ದಾರಿ ಮತ್ತು ಸವಾಲು ಪ್ರತಿಯೊಬ್ಬರ ಶಿಕ್ಷಕರ ಮೇಲಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ 2025-26ನೇ ಸಾಲಿನ ಎನ್.ಸಿ.ಸಿ., ಎನ್.ಎಸ್.ಎಸ್,ಕ್ರೀಡೆ,ಸಾಂಸ್ಕೃತಿಕ ಮತ್ತು ರೆಡ್ಕ್ರಾಸ್ ಚಟುವಟಿಕೆಗಳ “ಅಭಿವ್ಯಕ್ತಿ” 2025ಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ವಿದ್ಯಾರ್ಥಿಗಳು ಸಹ ಅಂತರಜಾಲದ ಮಾಹಿತಿಯನ್ನು ತಮ್ಮ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಸಿದ್ದಗಂಗಾ ಕಾಲೇಜು ಬಡ ಮಕ್ಕಳಿಗೆ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದ ಏಕೈಕ ಸಂಸ್ಥೆಯಾಗಿದೆ.ಲಿಂಗೈಕ್ಯ ಶ್ರೀಶಿವಕುಮಾರಸ್ವಾಮೀಜಿಗಳ ದೂರದೃಷ್ಟಿಯ ಫಲವಾಗಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳು ಬೆಳೆದು ಇಂದು ಎಲ್.ಕೆ.ಜಿ.ಯಿಂದ ವೈದ್ಯಕೀಯ ಶಿಕ್ಷಣದವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ ಕೆಲವೇ ವಿದ್ಯಾಸಂಸ್ಥೆಗಳಲ್ಲಿ ಶ್ರೀಸಿದ್ದಗಂಗಾ ಸಂಸ್ಥೆಯೂ ಒಂದಾಗಿದೆ.ಮಕ್ಕಳಿಗೆ ಅನ್ನ, ಅಕ್ಷರದ ಜೊತೆಗೆ ಸಂಸ್ಕಾರವನ್ನು ನೀಡಿ, ನಿಜ ಅರ್ಥದಲ್ಲಿ ತ್ರಿವಿಧದಾಸೋಹ ಕೇಂದ್ರಗಳಾಗಿವೆ. ಬಡವಿದ್ಯಾರ್ಥಿಗಳ ಕನಸು ನನಸಾಗಿದ್ದು ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆ. ಸಂಗೀತ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.
ಅಭಿವ್ಯಕ್ತಿ ಸಾಂಸ್ಕೃತಿಕ ಸ್ಪರ್ಧೆಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ,ಇಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಸೇರಿದಂತೆ ಅನೇಕ ರೀತಿಯ ಒತ್ತಡದಲ್ಲಿ ಭಾವನೆಗಳನ್ನು ವ್ಯಕ್ತಿಪಡಿಸಲು ಸಮಯವೇ ಇಲ್ಲದಂತಾಗಿದೆ.ಸಂಬಂಧಗಳೇ ಬೇಡದ ಭಾವನರಹಿತ ಜೀವನ ಇಂದಿನ ಯುವ ಸಮೂಹದಲ್ಲಿ ಕಂಡು ಬರುತ್ತಿದೆ.ದಯೆ, ಕರುಣೆ, ಪ್ರೀತಿ,ಮಾನವೀಯತೆ ಮರೆಯಾಗುತ್ತಿದ್ದು,ಇದು ನಿಜವಾದ ಜೀವನವಲ್ಲ.ನಾವು,ನಮ್ಮವರು ಎಂಬ ಭಾವನೆ ಒಡಮೂಡಿದಾಗ ಮಾತ್ರ ಮನುಷ್ಯ ಪರಿಪೂರ್ಣನಾಗಲು ಸಾಧ್ಯ.ನಾನು ಕೂಡ ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ.ನಾವೆಲ್ಲರೂ ಶ್ರೀಸಿದ್ದಗಂಗಾ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದೇ ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಜಲಿಂಗಪ್ಪ ಮಾತನಾಡಿ,ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನಮ್ಮ ಕಾಲೇಜಿನಲ್ಲಿ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿಯೂ ಹೆಸರು ಮಾಡಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠದಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರಸ್ವಾಮೀಜಿಗಳು, ನಮ್ಮ ದೇಶದಲ್ಲಿ ಉಪನ್ಯಾಸ ನೀಡುವವರು ಸಾಕಷ್ಟು ಜನರಿದ್ದಾರೆ.ಆದರೆ ಅವುಗಳನ್ನು ಆಚರಣೆಗೆ ತರುವವರು ಬಹಳ ಕಡಿಮೆ. ಇಂದಿನ ಮಕ್ಕಳು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.ಅತ್ತಾಗ ಅಳದೆ,ನಕ್ಕಾಗ ನಗದೆ ಭಾವನರಹಿತ ಜೀವಿಗಳಾಗುತ್ತಿದ್ದಾರೆ.ಗ್ರಾಮೀಣ ಮಕ್ಕಳ ಬದುಕು ಹಸನಾಗಬೇಕು.ಅವರು ಸಹ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬುದು ಹಿರಿಯ ಶ್ರೀಗಳ ಕನಸಾಗಿತ್ತು. ವ್ಯಕ್ತಿ ಬುದ್ದಿ ಮತ್ತು ಭಾವನೆಗಳ ವಿಕಾಸವೇ ನಿಜವಾದ ಶಿಕ್ಷಣ.ಒಳ್ಳೆಯ ಚಾರಿತ್ರ ನಿರ್ಮಾಣವೇ ಶಿಕ್ಷಣದ ಗುರಿಎಂದು ಸ್ವಾಮೀಜಿ ನುಡಿದರು.
ಕಾರ್ಯಕ್ರಮದಲ್ಲಿ ಡಾ.ಡಿ.ಎನ್.ಯೋಗೀಶ್ವರಪ್ಪ, ವಿಜಯ್, ಶ್ರೀಮತಿ ರತ್ನಮ್ಮ, ಶ್ರೀಮತಿ ಶ್ರಿವಲ್ಲಿ, ರಾಮಲಿಂಗಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
