ಕೆ.ಆರ್.ಪೇಟೆ,ನ.14: ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ವಾರವಿಡೀ ಪುಸ್ತಕ ಪ್ರದರ್ಶನ, ದಿನಪತ್ರಿಕೆಗಳು, ವಾರಪತ್ರಿಕೆಗಳ ಪ್ರದರ್ಶನ, ಗ್ರಂಥಾಲಯ ಕುರಿತು ಉಪನ್ಯಾಸಗಳು ಮತ್ತು ಸ್ಪರ್ಧೆಗಳಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಆರ್.ಶ್ರೀನಿವಾಸ್ ಹೇಳಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಪ್ರತಿ ವರ್ಷ ನವೆಂಬರ್ 14 ರಿಂದ 20 ರವರೆಗೆ ಆಚರಿಸಲಾಗುತ್ತದೆ. ಇದನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ. ಈ ಸಪ್ತಾಹವನ್ನು ಓದುವ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಗ್ರಂಥಾಲಯಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವುದು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು. ಗ್ರಂಥಾಲಯ ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ಓದುಗರು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಿತ್ಯ ಕನಿಷ್ಠ 1ಗಂಟೆ ಗ್ರಂಥಾಲಯದಲ್ಲಿ ಓದುವ ಅಭ್ಯಾಸ ಮಾಡಿಕೊಂಡರೆ ಉತ್ತಮ ಜ್ಞಾನಾರ್ಜನೆ ಪಡೆದುಕೊಳ್ಳಬಹುದು.

ನಿರುದ್ಯೋಗಿಗಳು ದುಶ್ಚಟಗಳಿಂದ ದೂರವಿದ್ದು ನಿತ್ಯ ದಿನ ಪತ್ರಿಕೆ ಓದುವ ಹವ್ಯಾಸ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಯಶಸ್ಸು ಗಳಿಸಬಹುದು. ಗ್ರಂಥಾಲಯಗಳು ಸಮುದಾಯಗಳನ್ನು ಬಲಪಡಿಸುವಲ್ಲಿ ಮತ್ತು ಜೀವನವನ್ನು ಪರಿವರ್ತಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತವೆ. ಗ್ರಂಥಪಾಲಕರು ಓದುಗರಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುವ ಮೂಲಕ ಓದುಗರ ಅಭಿರುಚಿಯನ್ನು ಹೆಚ್ಚಿಸುವ ಜೊತೆಗೆ ಅವರ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬೇಕು ಎಂದು ಶ್ರೀನಿವಾಸ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ರಂಥಾಲಯದ ಗ್ರಂಥಪಾಲಕಿ ಕಲ್ಪನಾ, ಸಹಾಯಕ ಚಂದ್ರು, ಉಪನ್ಯಾಸಕ ಚರಿತ್ರೆ ಕುಮಾರ್, ಗ್ರಾ.ಪಂ.ಸದಸ್ಯ ಹಿರಳಹಳ್ಳಿ ಕುಮಾರಸ್ವಾಮಿ, ಪತ್ರಕರ್ತ ರಂಗನಾಥ್ ಸೇರಿದಂತೆ ಹಲವಾರು ಓದುಗರು ಹಾಜರಿದ್ದರು.
-ಶ್ರೀನಿವಾಸ್ ಆರ್.
