ಉಜಿರೆ, ನವೆಂಬರ್ – 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಕರ್ನಾಟಕದಾದ್ಯಂತ ವೈಭವಯುತ ಕಾರ್ಯಕ್ರಮಗಳು ಜರುಗಲಿದ್ದು, ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ರಾಜ್ಯದ 234 ತಾಲೂಕುಗಳಲ್ಲಿ ವಿಶೇಷ ಅರಿವು ಶಿಬಿರಗಳನ್ನೂ ಹಮ್ಮಿಕೊಳ್ಳಲಾಗಿದೆ.
ಪ್ರಕೃತಿ ಚಿಕಿತ್ಸೆ ಭಾರತದ ಪಾರಂಪರಿಕ ಸಂಸ್ಕೃತಿಯೊಂದಿಗೆ ಜೋಡಿಕೊಂಡಿರುವ, ಔಷಧರಹಿತ ಮತ್ತು ಸಂಪೂರ್ಣ ನೈಸರ್ಗಿಕ ಚಿಕಿತ್ಸಾ ಪದ್ಧತಿ. “Body Heals Itself – Return to Nature” ಎಂಬ ತತ್ವಾಧಾರದಲ್ಲಿ ದೇಹದ ಪಂಚಮಹಾಭೂತಗಳಾದ ವಾಯು, ಅಗ್ನಿ, ಜಲ, ಭೂಮಿ ಮತ್ತು ಆಕಾಶದ ಸಹಾಯದಿಂದ ದೇಹದಲ್ಲಿರುವ ವಿಷಪದಾರ್ಥಗಳನ್ನು ಹೊರಹಾಕಿ, ಸ್ವಾಭಾವಿಕ ಗುಣಮುಖತೆಯನ್ನು ಉತ್ತೇಜಿಸುವುದು ಪ್ರಕೃತಿ ಚಿಕಿತ್ಸೆಯ ವೈಶಿಷ್ಟ್ಯ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದೃಷ್ಟಿ ಮತ್ತು ಪ್ರೇರಣೆಯಿಂದ ಪ್ರಕೃತಿ ಚಿಕಿತ್ಸೆಗೆ ರಾಷ್ಟ್ರಮಟ್ಟದಲ್ಲಿ ಗೌರವ ದೊರಕಿದೆ. 1987ರಲ್ಲಿ ಆರಂಭವಾದ ಶಾಂತಿವನ ಆಸ್ಪತ್ರೆಯು, 1989ರಲ್ಲಿ BNYS ಪದವಿ ಕೋರ್ಸ್ ಆರಂಭಿಸುವ ಮೂಲಕ ಪ್ರಕೃತಿ ಚಿಕಿತ್ಸೆಗೆ ಶೈಕ್ಷಣಿಕ ಮಾನ್ಯತೆ ನೀಡಿತು. ಮುಂದುವರಿದು ದೇಶದ ಮೊದಲ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗಿದ್ದು, ಇಂದಿನ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಕೇಂದ್ರ ಸರ್ಕಾರ ಸಂಸ್ಥೆಗೆ Centre of Excellence in Naturopathy and Yoga ಮಾನ್ಯತೆ ನೀಡಿರುವುದು ಮತ್ತೊಂದು ಗರ್ವದ ಅಂಶ. ಧರ್ಮಸ್ಥಳದ ಶಾಂತಿವನ, ಉಡುಪಿ ಸೌಖ್ಯ ಹಾಗೂ ಬೆಂಗಳೂರಿನ ಕ್ಷೇಮವನ ಆಸ್ಪತ್ರೆಗಳು ಇಂದು ಸಾವಿರಾರು ಆರೋಗ್ಯಾರ್ಥಿಗಳ ನಂಬಿಕೆಯ ಕೇಂದ್ರವಾಗಿವೆ.
ನಗರಮಟ್ಟದಲ್ಲಿ ಪ್ರಕೃತಿ ಚಿಕಿತ್ಸೆಯ ಉಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹಳ್ಳಿಗಳ ರೈತಾಪಿ ವರ್ಗಕ್ಕೂ ಈ ಚಿಕಿತ್ಸೆಯನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ನವೆಂಬರ್ 10ರಿಂದ 17ರವರೆಗೆ ರಾಜ್ಯದ ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಅರಿವು–ಪ್ರಚಾರ ಶಿಬಿರಗಳು ನಡೆಯಲಿವೆ. 500ಕ್ಕೂ ಹೆಚ್ಚು ವೈದ್ಯರು ಮತ್ತು ಪರಿಣಿತರ ತಂಡ ಈ ಕಾರ್ಯದಲ್ಲಿ ತೊಡಗಿಸಲಾಗುತ್ತಿದೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಮನ ಕಿ ಬಾತ್’ ಕಾರ್ಯಕ್ರಮದಲ್ಲಿ ಆರೋಗ್ಯಯುತ ಜೀವನಶೈಲಿ ಮತ್ತು ಬೊಜ್ಜು ನಿವಾರಣೆ ಕುರಿತು ನೀಡಿದ ಸಂದೇಶವನ್ನು ಅನುಸರಿಸಿ, ಶಿಬಿರದಲ್ಲಿ ನೈಸರ್ಗಿಕ ಜೀವನಶೈಲಿ, ಯೋಗಾಭ್ಯಾಸ, ಆಹಾರ–ಪೌಷ್ಟಿಕತೆ, ದಿನಚರ್ಯೆ ಮಾರ್ಗದರ್ಶನ, ಮನೆಯಲ್ಲೇ ಅನುಸರಿಸಬಹುದಾದ ಸರಳ ಚಿಕಿತ್ಸಾ ವಿಧಾನಗಳ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.
ಔಷಧರಹಿತ, ಪಾರ್ಶ್ವ ಪರಿಣಾಮರಹಿತ ಮತ್ತು ನೈಸರ್ಗಿಕ ಆರೋಗ್ಯಪೂರ್ಣ ಬದುಕಿನತ್ತ ದಾರಿ ತೆರೆಸುವ ಈ ರಾಷ್ಟ್ರೀಯ ಕಾರ್ಯಕ್ರಮ ಜನರಲ್ಲಿ ಸ್ವಸ್ಥ–ಸುಖ ಜೀವನದ ಅರಿವು ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಡಾ. ಪ್ರಶಾಂತ್ ಶೆಟ್ಟಿ ಪ್ರಾಂಶುಪಾಲಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜು, ಉಜಿರೆ ಅವರು ತಿಳಿಸಿದ್ದಾರೆ.
