: ಬಿಹಾರ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ರಾಜಕೀಯ ವಲಯದಲ್ಲಿ ಚರ್ಚೆಗಳು ಗರಿಷ್ಠ ಮಟ್ಟ ತಲುಪಿವೆ. ಎನ್ಡಿಎ ಮೈತ್ರಿಕೂಟವು ಐತಿಹಾಸಿಕ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮತ್ತು ಮಹಾಘಟಬಂಧನ ಪಕ್ಷಗಳು ಭಾರೀ ಹೊಡೆತಕ್ಕೆ ಒಳಗಾಗಿವೆ. ಹಾಸನದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ–ಜೆಡಿಎಸ್ ಮುಖಂಡರು ಮಾತನಾಡಿ ಈ ಗೆಲುವಿನ ಮಹತ್ವವನ್ನು ಒತ್ತಿ ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡಿ, ದೇಶಾದ್ಯಂತ ಕಾಂಗ್ರೆಸ್ “ಮತಗಲ್ಲತನ” ಆರೋಪದ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದರೂ, ಮತದಾರರು ಅದನ್ನು ಪರಿಗಣಿಸದೇ ಎನ್ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. “ಈ ಫಲಿತಾಂಶ ಕಾಂಗ್ರೆಸ್ಗೆ ಸಾರ್ವಜನಿಕವಾಗಿ ಮುಖಭಂಗ ತಂದಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜು ಮಾತನಾಡಿ, ಬಿಹಾರವನ್ನು ‘ಜಂಗಲ್ರಾಜ್ಯ’ ಎಂಬ ಹೆಸರಿನಿಂದ ಹೊರತಂದು ಉತ್ತಮ ಆಡಳಿತ ಒದಗಿಸಿದ ನಿತೀಶ್ ಕುಮಾರ್ ಅವರ ನಾಯಕತ್ವವನ್ನೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮನ್ವಯವನ್ನೂ ಜನತೆ ಮೆಚ್ಚಿದ್ದಾರೆ ಎಂದು ಹೇಳಿದರು. “ಮನೆಗೊಂದು ಕೆಲಸ ಎಂದು ಅಸಾಧ್ಯವಾದ ಭರವಸೆ ನೀಡಿದ್ದ ಮಹಾಘಟಬಂಧನ ಸುಳ್ಳು ಹೇಳಿದೆ ಎಂಬುದನ್ನು ಮತದಾರರು ಮನಗಂಡಿದ್ದಾರೆ,” ಎಂದರು.
ಕರ್ನಾಟಕ ಸಂಬಂಧಿಸಿದಂತೆ, ಕಬ್ಬಿನ ಟನ್ ಬೆಲೆ 100 ರೂ ಹೆಚ್ಚಿಸುವಂತೆ ರೈತರು ನಡೆಸಿದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದೇ, ರೈತರಲ್ಲಿ ಅಸಮಾಧಾನ ಹೆಚ್ಚಾದುದನ್ನೂ ಅವರು ಉಲ್ಲೇಖಿಸಿದರು. “ಇನ್ನಾದರೂ ಸರ್ಕಾರ ಅಭಿವೃದ್ಧಿಯ ಕಡೆ ಗಮನ ಕೊಡಬೇಕು. ಮುಂದಿನ ಪಂ.ಪಂ ಮತ್ತು ಜಿ.ಪಂ ಚುನಾವಣೆಯಲ್ಲೂ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಬಿಹಾರದಲ್ಲಿ ಬಿಜೆಪಿ ಎಬ್ಬಿಸಿದ “ಬಿರುಗಾಳಿ”ಗೆ ಮಹಾಘಟಬಂಧನ ಪಕ್ಷಗಳು ತಲೆಗೆಳಾಗಿವೆ ಎಂದರು. “ವಿಪಕ್ಷಗಳು ಮತಚೋರಿ ಎಂದು ಪ್ರಚಾರ ಮಾಡಿದರೂ, ಮತದಾರರು ಯಾವ ಗೊಂದಲಕ್ಕೂ ಒಳಗಾಗದೇ ಎನ್ಡಿಎಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ಈಗ ದೇಶದಲ್ಲಿ ಅಸ್ತಿತ್ವ ಉಳಿಸಲು ಹೋರಾಡುವ ಪರಿಸ್ಥಿತಿಗೆ ಬಂದಿದೆ,” ಎಂದು ತೀಕ್ಷ್ಣವಾಗಿ ಟೀಕಿಸಿದರು.
ಕಾರ್ಯಕ್ರಮದಲ್ಲಿ ಪ.ಪಂ ಸದಸ್ಯ ಪ್ರದೀಪ್, ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಂದ್ರಬಾಬು, ಉಪಾಧ್ಯಕ್ಷ ಗೋವಿಂದರೆಡ್ಡಿ, ಮುಖಂಡರಾದ ಪ್ರವೀಣ್, ಅರುಣ್, ಚೇತನ್ ಕ್ಯಾಶವಾರ, ರವಿನಂದನ್, ಶಿವಕುಮಾರ್ ಅಳಾಲಸಂದ್ರ, ನಂಜುಂಡಪ್ಪ ಪಾತಗನಹಳ್ಳಿ, ಕುರುಡಗಾನಹಳ್ಳಿ ರಂಗಣ್ಣ, ಕೆರೆಯಾಗಳಹಳ್ಳಿ ಲಕ್ಷ್ಮಣ್, ರಮೇಶ್ ಗುಂಡಿನಪಾಳ್ಯ, ಸಾಕಣ್ಣ ಗೊಲ್ಲಹಳ್ಳಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
– ಶ್ರೀನಿವಾಸ್, ಕೊರಟಗೆರೆ.
