ಅರಕಲಗೂಡು:ಪ್ರವಾಸಕ್ಕಾಗಿ ಕೇರಳದಿಂದ ಬಂದಿದ್ದ ಖಾಸಗಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ಅರಕಲಗೂಡು ತಾಲ್ಲೂಕಿನ ಬರಗೂರು ಮುರಾರ್ಜಿ ಶಾಲೆ ಬಳಿಯಲ್ಲಿ ಸಂಭವಿಸಿದೆ.
ಮಾಹಿತಿ ಪ್ರಕಾರ, ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ತೀವ್ರ ವೇಗದಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದಿದೆ. ಅಪಘಾತದ ಪರಿಣಾಮ ಬಸ್ ಗಂಭೀರವಾಗಿ ಹಾನಿಗೊಳಗಾಗಿ ಸುಮಾರು ೧೫ ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಆದರೆ, ಗಂಭೀರ ಅನಾಹುತ ತಪ್ಪಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ನಂತರ ಸ್ಥಳೀಯರು ಮತ್ತು ಶಿಕ್ಷಕರು ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನವರಿಗೆ ಸಣ್ಣಪುಟ್ಟ ಗ್ಯಾಯಾಗಿದ್ದು, ಅಪಾಯದ ಲಕ್ಷಣಗಳಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಅಪಘಾತ ಸ್ಥಳಕ್ಕೆ ಅರಕಲಗೂಡು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಶಾಲಾ ಪ್ರವಾಸದ ವಾಹನಗಳ ಸುರಕ್ಷತಾ ಕ್ರಮಗಳ ಕುರಿತಾಗಿ ಚಿಂತನೆ ಮೂಡಿಸಿದೆ.

