ಕೆ.ಆರ್.ಪೇಟೆ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವ್ಯವಹಾರ ಜ್ಞಾನ ಅವಶ್ಯಕವಾಗಿದ್ದು,ಮಕ್ಕಳ ಸಂತೆ ಅಂತಹ ಕಾರ್ಯಕ್ರಮಗಳು ಮಕ್ಕಳ ವ್ಯವಹಾರ ಜ್ಞಾನಕ್ಕೆ ಸಹಕಾರಿ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದಲ್ಲಿರುವ ಬಿ.ಜಿ.ಎಸ್ ಶಾಲೆ ವತಿಯಿಂದ ಶಾಲಾ ಆವರಣದಲ್ಲಿ ಹೇಮಗಿರಿ ಬಿಜಿಎಸ್ ಸಾಕಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ: ಜೆ.ಎನ್ ರಾಮಕೃಷ್ಣೇಗೌಡ ರವರ ಮಾರ್ಗದರ್ಶನ ಮೇರೆಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ಎಂದರೆ ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನ ವೃದ್ಧಿಸುವ ಕೇಂದ್ರ ಸ್ಥಳವಾಗಿದೆ ಶಾಲೆಗಳಲ್ಲಿ ಮಕ್ಕಳ ಸಂತೆ,ಆಹಾರ ಮೇಳ, ಮಾಡುವುದರಿಂದ ವಿದ್ಯಾರ್ಥಿಗಳಿಗೆ ವ್ಯವಹಾರದ ಜ್ಞಾನ ವೃದ್ಧಿಯಾಗುತ್ತದೆ.ವಿದ್ಯಾರ್ಥಿಗಳಲ್ಲಿರುವ ಕೌಶಲವನ್ನು ವಿದ್ಯಾರ್ಥಿ ಜೀವನದಿಂದಲೇ ಯಾವ ರೀತಿ ಬಳಸಿಕೊಳ್ಳಬೇಕು.

ಯಾವ ರೀತಿ ಹಣ ಹೂಡಿಕೆ ಮಾಡಬೇಕು ಎಂಬುದು ತಿಳಿಯುತ್ತದೆ. ಅಲ್ಲದೆ ಲಾಭ– ನಷ್ಟಗಳ ಅರಿವು ಮೂಡುವುದರೊಂದಿಗೆ,ಮುಂದಿನ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ತಿಳಿವಳಿಕೆ ಮೂಡುತ್ತದೆ ಎಂದ ಅವರು ಪ್ರತಿ ದಿನ ತರಗತಿಯಲ್ಲಿ ಕುಳಿತು ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿದ್ದ ಮಕ್ಕಳು, ತಾವು ತಯಾರಿಸಿದ ಆಹಾರ ಖಾದ್ಯಗಳನ್ನು ಆಹಾರ ಮೇಳಕ್ಕೆ ಬಂದ ಗ್ರಾಹಕರ ಮನವೊಲಿಸಿ ಮಾರಾಟ ಮಾಡುವ ಚಾಕಚಕ್ಯತೆ ಮೆಚ್ಚುವಂಥದ್ದು. ಮಕ್ಕಳಲ್ಲಿ ವ್ಯವಹಾರ ಜ್ಞಾನಕ್ಕೆ ಸಹಕಾರಿಯಾಗುತ್ತದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಡಾ: ಜೆ.ಎನ್ ರಾಮಕೃಷ್ಣೇಗೌಡ
ಶಿಕ್ಷಣ ಕೇವಲ ತರಗತಿಯಲ್ಲಿ ಮಾತ್ರ ಬಳಕೆಗೆ ಸೀಮಿತವಾ ಗಿರದೆ, ಎಲ್ಲ ಕ್ಷೇತ್ರದಲ್ಲೂ ಪಡೆಯುವಂತಾಗಿದೆ. ಅಲ್ಲದೆ, ಇಂತಹ ಆಹಾರ ಮೇಳ, ಸಂತೆಯಲ್ಲಿ ಮಕ್ಕಳು ಭಾಗವಹಿಸಿದ ಸಂದರ್ಭ ಅವರನ್ನು ಗಮನಿಸಿದರೆ ಅವರ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಆಶಾಭಾವನೆ ಕಾಣುತ್ತಿದ್ದೇವೆ. ಇಲ್ಲಿ ಮಕ್ಕಳು ತಮಗೆ ಬೇಕಾದ ಇಷ್ಟವಾದ ಆಹಾರ ಪದಾರ್ಥಗಳನ್ನು ಇಟ್ಟು ದರ ನಿಗದಿ ಪಡಿಸಿ ವ್ಯಾಪಾರಕ್ಕೆ ಇಳಿದಿದ್ದಾರೆ.
ಇದು ಮಕ್ಕಳಲ್ಲಿ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನ ಹೆಚ್ಚಿಸಲು ಸಹಕಾರಿಯಾಗಿದೆ. ಇವರಿಗೆ ಪೋಷಕರು, ಶಿಕ್ಷಕ ವೃಂದ ಹೆಚ್ಚಿನದಾಗಿ ಪ್ರೋತ್ಸಾಹಿಸ ಬೇಕಿದೆ. ಅಲ್ಲದೆ, ನಮ್ಮ ಶಾಲಾ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದಕ್ಕಾಗಿ ಪ್ರತಿಭಾ ಕಾರಂಜಿ, ಕಲೋತ್ಸವ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವ್ಯಕ್ತಿತ್ವ ರೂಪಿಸಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ.

ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿ ಜ್ಞಾನ ಸಂಪಾದನೆಯೊಂದಿಗೆ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು. ವ್ಯಾಪಾರ ಕೌಶಲವನ್ನು ಕಲಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತಿದ್ದೇವೆ ಎಂದು ವಿವರಿಸಿದರು.
ಮಕ್ಕಳ ಸಂತೆಯಲ್ಲಿ ತರಕಾರಿ ಪಾನಿಪುರಿ, ಸೇವ್ ಪುರಿ, ಗೋಬಿ ಮಂಚೂರಿ, ಪವ ಭಾಜಿ, ಉದ್ದಿನ ವಡೆ, ಮಸಾಲೆ ಅವಲಕ್ಕಿ, ಚುರುಮುರಿ, ಸಮೋಸ, ಜಾಮೂನು, ತರಕಾರಿ ಸಲಾಡ್, ಕೋಸಂಬರಿ, ಪಾನಕ ಇತರ ತಿಂಡಿ ತಿನಿಸುಗಳನ್ನು ತಯಾರು ಮಾಡಿ, ಉತ್ಸಾಹದಿಂದ ಮಾರಾಟ ಮಾಡಿದರು. ಪೋಷಕರು ಹಾಗೂ ಸಾರ್ವಜನಿಕರು ತಿನಿಸುಗಳನ್ನು ಕೊಂಡು ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಉದೇಶ್, ಶೀಳನೆರೆ ಸಿದ್ದೇಶ್,ಕಸಾಪ ಮಾಜಿ ಅಧ್ಯಕ್ಷ ಹರಿಚರಣ ತಿಲಕ್, ಬಿಜಿಎಸ್ ಶಾಲೆಯ ಶಿಕ್ಷಕ ವೃಂದ ಪೋಷಕರು ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
