ಕೊರಟಗೆರೆ : ತಾಲೂಕಿನ ಇರಕಸಂದ್ರ ಕಾಲೋನಿ ಮತ್ತು ನೀಲಗೊಂಡನಹಳ್ಳಿ ಸಂಯುಕ್ತವಾಗಿ ಆಯೋಜಿಸಿದ್ದ ದೀಪೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು. ನಮ್ಮ ಸಂಸ್ಕೃತಿಯ ಅವಿಭಾಜ್ಯ ಭಾಗವಾದ ದೀಪೋತ್ಸವವು ಅದ್ದೂರಿ ಹೂವಿನ ಅಲಂಕಾರ, ಭಕ್ತಿ, ಸಂಸ್ಕೃತಿ ಮತ್ತು ಶ್ರದ್ಧೆಯೊಂದಿಗೆ ಕಂಗೊಳಿಸಿತು.
ಈ ಸಂದರ್ಭದಲ್ಲಿ ಎಲೆ ರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು ಶ್ರೀ. ಶ್ರೀ. ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, “ದೀಪವು ಕೇವಲ ಬೆಳಕಿನ ಸಂಕೇತವಲ್ಲ; ಅದು ಜ್ಞಾನ, ನೈತಿಕತೆ ಮತ್ತು ಆತ್ಮಚೈತನ್ಯದ ಪ್ರತೀಕ. ವರ್ಷದಿಂದ ವರ್ಷಕ್ಕೆ ಈ ಕ್ಷೇತ್ರದ ಪವಿತ್ರತೆ, ಶ್ರದ್ಧೆ ಮತ್ತು ಭಕ್ತರ ನಂಬಿಕೆ ಹೆಚ್ಚುತ್ತಿದೆ” ಎಂದು ಹೇಳಿದರು.

ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಹನುಮಂತ್ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಏಳನೇ ವರ್ಷದ ದೀಪೋತ್ಸವವನ್ನು ಕಾರ್ತಿಕ ಮಾಸದ ಕೊನೆ ದಿನದ ಅಂಗವಾಗಿ ಆಯೋಜಿಸಲಾಗಿತ್ತು. ಬೆಳಗಿನ ಪೂಜಾ-ಕ್ರಿಯೆಗಳು, ವಿಶೇಷ ಅಲಂಕಾರ, ಸಂಜೆ ದೀಪೋತ್ಸವ, ರಾತ್ರಿ ಉತ್ಸವ ಹಾಗೂ ಗ್ರಾಮಸ್ಥರು ಸೇರಿ ಮಾಡಿದ ಮಹಾ ಆರತಿ ಎಲ್ಲರ ಮನಸೆಳೆಯಿತು. ಭಕ್ತರಿಗೆ ದೇವಾಲಯ ಟ್ರಸ್ಟ್ನ ವತಿಯಿಂದ ಶಿಸ್ತಿನ ಪ್ರಸಾದ ವ್ಯವಸ್ಥೆ ಲ್ಲಿತ್ತು.

ಕಾರ್ಯಕ್ರಮದಲ್ಲಿ ಶ್ರೀ. ಶ್ರೀ. ಡಾ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು (ಶ್ರೀ ಕ್ಷೇತ್ರ ಸಿದ್ದರಬೆಟ್ಟ), ಶ್ರೀ. ಶ್ರೀ. ಡಾ. ಬಸವ ಮಹಾಲಿಂಗ ಮಹಾಸ್ವಾಮಿಗಳು (ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಠ, ತಂಗನಹಳ್ಳಿ) ಸೇರಿದಂತೆ ದೇವಾಲಯ ಟ್ರಸ್ಟ್ನ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಇರಕಸಂದ್ರ ಕಾಲೋನಿ ಹಾಗೂ ನೀಲಗೊಂಡನಹಳ್ಳಿ ಗ್ರಾಮಸ್ಥರು, ಗ್ರಾಮ ಪಂಚಾಯತಿ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಹಾಗೂ ಅಕ್ಕಪಕ್ಕ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ನರಸಿಂಹಯ್ಯ, ಹೊಸಕೋಟೆ
