“ಜೀವನವು 40 ವರ್ಷದಿಂದ ಪ್ರಾರಂಭವಾಗುತ್ತದೆ” ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಅದು ನಿಜವಾಗಲು, ದೈಹಿಕ–ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಕೆಲವು ಚಟುವಟಿಕೆಗಳನ್ನು ತಕ್ಷಣವೇ ಬಿಟ್ಟುಬಿಡಬೇಕು ಎಂದು ಅಮೆರಿಕದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಇವಾನ್ ಲೆವಿನ್ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮೂಲಕ ಮಾತನಾಡಿದ ಅವರು, 40ರ ದಾಟುವವರು ಆರೋಗ್ಯಕರ, ದೀರ್ಘ ಮತ್ತು ಸಂತೋಷಪೂರ್ಣ ಜೀವನ ಬಯಸಿದರೆ ಐದು ಪ್ರಮುಖ ಅಭ್ಯಾಸಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
1) ಧೂಮಪಾನ ತ್ಯಜಿಸಿ
ಧೂಮಪಾನದಿಂದ ಆಗುವ ಗಂಭೀರ ಪರಿಣಾಮಗಳು ಚೆನ್ನಾಗಿ ತಿಳಿದಿದ್ದರೂ, 40ರ ನಂತರ ಅದು ದೇಹಕ್ಕೆ ಮೂಡುವ ಹಾನಿ ಅತಿಯಾದದ್ದು ಎಂದು ಡಾ. ಲೆವಿನ್ ಎಚ್ಚರಿಕೆ ನೀಡಿದರು.
“ಧೂಮಪಾನದ ಪರಿಣಾಮಗಳು ಪ್ರೌಢಾವಸ್ಥೆಯಲ್ಲಿ ಹೆಚ್ಚು ಹೊಡೆತ ನೀಡುತ್ತವೆ. 60ರ ತನಕ ಕಾಯಬೇಡಿ, ಈಗಲೇ ನಿಲ್ಲಿಸಿ,” ಎಂದು ಅವರು ಸಲಹೆ ನೀಡಿದರು.
2) ಮದ್ಯಪಾನ ಕಡಿತ ಅಥವಾ ನಿಲುಗಡೆ
“ನೀವು ಇನ್ನು ಮುಂದೆ ಮಗುವಲ್ಲ,” ಎಂದು ಸ್ಪಷ್ಟವಾಗಿ ಹೇಳಿದ ಡಾ. ಲೆವಿನ್, ಮದ್ಯಪಾನದ ಅಲ್ಪ ವ್ಯಸನದೂ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು, ಹೃತ್ಕರ್ಣದ ಕಂಪನ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಪ್ರತಿ ದಿನ ಒಂದಕ್ಕಿಂತ ಹೆಚ್ಚು ಪಾನೀಯ ಸೇವನೆ “ದೇಹಕ್ಕೆ ಅಪಾಯಕಾರಿ ಪ್ರಮಾಣ” ಎಂದರು.
3) ಮಾದಕದ್ರವ್ಯ ಸೇವನೆ (ಗಾಂಜಾ ಸೇರಿ) ನಿಲ್ಲಿಸಿ
“ಗಾಂಜಾವನ್ನು ಸುರಕ್ಷಿತ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ಅರಿವಿನ ಕುಸಿತ, ಮತ್ತು ಮುಂದಿನ ದಿನಗಳಲ್ಲಿ ಬುದ್ಧಿಮಾಂದ್ಯತೆ ಅಪಾಯವನ್ನೂ ಹೆಚ್ಚಿಸುತ್ತದೆ,” ಎಂದು ಸ್ಪಷ್ಟಪಡಿಸಿದರು.
4) ದೀರ್ಘ ಓಟ–ಹೆಚ್ಚು ತೀವ್ರ ವ್ಯಾಯಾಮಕ್ಕೆ ಎಚ್ಚರಿಕೆ
ಕ್ಷಮತೆಯನ್ನು ಹೆಚ್ಚಿಸುತ್ತದೆ ಎನ್ನುವ ಭಾವನೆ ಇದ್ದರೂ, 40ರ ನಂತರ ದೀರ್ಘ ಓಟ ಮತ್ತು ಹೆಚ್ಚು ತೀವ್ರ ವ್ಯಾಯಾಮಗಳು
ಮೊಣಕಾಲು, ಸೊಂಟ, ಪಾದಗಳ ಕೀಲುಗಳಿಗೆ ಹಾನಿಕಾರಕ ಎಂದು ವೈದ್ಯರು ಹೇಳಿದರು.
“ಈ ತರದ ವ್ಯಾಯಾಮಗಳು ವಯಸ್ಸಾದಂತೆ ಹೃತ್ಕರ್ಣದ ಕಂಪನದ ಅಪಾಯ ಹೆಚ್ಚಿಸುತ್ತವೆ.
ಯೋಗ, ಸ್ಟ್ರೆಚಿಂಗ್, ಸಮತೋಲನ–ಶಕ್ತಿ ವ್ಯಾಯಾಮಗಳಿಗೆ ಆದ್ಯತೆ ನೀಡಿ,” ಎಂದು ಸಲಹೆ ನೀಡಿದರು.
5) ಜಂಕ್ ಮತ್ತು ಫಾಸ್ಟ್ ಫುಡ್ಗೆ ‘ಗೇಟ್ ಔಟ್’
“40ರ ನಂತರ ‘ಏನು ಬೇಕಾದರೂ ತಿನ್ನುವ ಕಾಲ’ ಮುಗಿದಿದೆ,” ಎಂದು ಡಾ. ಲೆವಿನ್ ಎಚ್ಚರಿಸಿದರು.
ಫಾಸ್ಟ್–ಜಂಕ್–ಸಕ್ಕರೆ ಆಹಾರಗಳು ದೀರ್ಘ ಕಾಯಿಲೆ, ಮಧುಮೇಹ, ರಕ್ತದೊತ್ತಡ, ಹೃದ್ರೋಗದ ಅಪಾಯವನ್ನು ಗಂಭೀರವಾಗಿ ಹೆಚ್ಚಿಸುತ್ತವೆ.
“ಸರಳ ಆಹಾರ ನಿಯಮಗಳನ್ನು ಕಟ್ಟುನಿಟ್ಟುಾಗಿ ಪಾಲಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ,” ಎಂದು ಹೇಳಿದರು.
ತಜ್ಞರ ಎಚ್ಚರಿಕೆಯ ಪ್ರಕಾರ, ಜೀವನಶೈಲಿಯಲ್ಲಿ ಈ 5 ಬದಲಾವಣೆಗಳನ್ನು ತಕ್ಷಣ ಅಳವಡಿಸಿಕೊಂಡರೆ 40ರ ನಂತರದ ಜೀವನವು ನಿಜವಾಗಿಯೂ ಹೊಸ ಆರಂಭವಾಗಬಹುದು, ಎನ್ನುವುದರಲ್ಲಿ ಸಂಶಯವಿಲ್ಲ.
