ಕೆ.ಆರ್.ಪೇಟೆ,ನ.22: ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಪಠ್ಯಪುಸ್ತಕ ಶಿಕ್ಷಣದ ಜೊತೆಗೆ ವ್ಯಾಪಾರ-ವ್ಯವಹಾರ ಜ್ಞಾನ ಅವಶ್ಯಕವಾಗಿದೆ. ಶಾಲೆಗಳಲ್ಲಿ ಆಯೋಜಿಸುವ ಮಕ್ಕಳ ಸಂತೆ ಕಾರ್ಯಕ್ರಮಗಳು ಮಕ್ಕಳ ವ್ಯವಹಾರ ಜ್ಞಾನ ವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು ತಿಳಿಸಿದರು.
ತಾಲ್ಲೂಕಿನ ಹೇಮಗಿರಿ ಶ್ರೀ ಕ್ಷೇತ್ರದಲ್ಲಿರುವ ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಮಕ್ಕಳಿಂದ ತರಕಾರಿ-ಹಣ್ಣುಗಳನ್ನು ಖರೀದಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ವ್ಯವಹಾರಿಕ ಕೌಶಲ್ಯವನ್ನು ಬೆಳೆಸುವ ದೃಷ್ಠಿಯಿಂದ ಕಡ್ಡಾಯವಾಗಿ ಪ್ರತಿ ಶಾಲೆಯಲ್ಲಿಯೂ ಮಕ್ಕಳ ಸಂತೆ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಆದೇಶ ನೀಡಿದೆ. ಸರ್ಕಾರ ಈ ಆದೇಶದ ಮೇರೆಗೆ ನಮ್ಮ ಹೇಮಗಿರಿ ಶಾಖಾ ಮಠದ ವ್ಯಾಪ್ತಿಯ ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದಲೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಓದಿದವರಿಗೆಲ್ಲಾ ಸರ್ಕಾರಿ ಕೆಲಸ ಸಿಗುವುದಿಲ್ಲ ಹಾಗಾಗಿ ವ್ಯವಹಾರ ಜ್ಞಾನ ತಿಳಿದಿದ್ದರೆ ಸ್ವಯಂ ಉದ್ಯೋಗ ವ್ಯಾಪಾರ ವ್ಯವಹಾರ ಮಾಡಲು ಈ ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗುತ್ತದೆ.

ಈ ಸಂತೆಯಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರೂ ಭಾಗವಹಿಸುತ್ತಾರೆ. ತಮ್ಮ ತಂದೆ ತಾಯಿಗಳು ಮನೆಯಲ್ಲಿ ತಯಾರಿಸಿಕೊಟ್ಟ ತಿಂಡಿಗಳು, ರೈತ ಪೋಷಕರು ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿಗಳು ಹಾಗೂ ಹಣ್ಣುಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಸಂತೆಯಲ್ಲಿ ವ್ಯಾಪಾರಿಗಳು ಕೂಗುವಂತೆ ತಾಜಾ ತರಕಾರಿ ಬನ್ನಿ ಅಣ್ಣ, ಇಲ್ಲಿ ಕಡಿಮೆ ಬೆಲೆ ನೋಡಿ ಅಕ್ಕ ಎಂದು ಕೂಗುವ ಮೂಲಕ ಭರ್ಜರಿಯಾಗಿ ವ್ಯಾಪಾರಿ ಮಾಡುತ್ತಿದ್ದಾರೆ.
ಪೋಷಕರು ತಮ್ಮ ಶಕ್ತಾನುಸಾರ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಸಂತೆಯಲ್ಲಿಯೇ ಖರೀದಿ ಮಾಡುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಜೊತೆಗೆ ಸಂತೆ, ಆಹಾರ ಮೇಳೆ, ಕಡಿಲೆ ಕಾಯಿ ಪರಿಸೆ, ಅವರೆಕಾಯಿ ಪರಿಸಿ ಮಾಡಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ನಿರೀಕ್ಷೆಗೂ ಮೀರಿ ಯಶಸ್ವಿ ಮಾಡಿಕೊಂಡು ಬರಲಾಗುತ್ತಿದೆ ಇದಕ್ಕೆ ಮಕ್ಕಳ ಪೋಷಕರ ಸಹಕಾರವೂ ಹೆಚ್ಚಿನದಾಗಿದೆ ಎಂದು ಡಾ.ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದರು.

ಮಕ್ಕಳ ಸಂತೆಯಲ್ಲಿ ಬಗೆ ಬಗೆಯ ತರಕಾರಿಗಳು, ಹಣ್ಣುಗಳು, ತೆಂಗಿನಕಾಯಿ, ಎಳೆನೀರು, ಮಜ್ಜಿಗೆ ಪಾನಕ, ರೊಟ್ಟಿ ಉಚ್ಚೆಳ್ಳುಪುಡಿ ಚಟ್ನಿ, ಸಾವಯವ ಬೆಲ್ಲ, ಸಾವಯವ ಪದಾರ್ಥಗಳನ್ನು ವಿದ್ಯಾರ್ಥಿಗಳು ತಂದು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನ ಪಡೆದುಕೊಂಡರು. ಪೋಷಕರು ಹಾಗೂ ಸಾರ್ವಜನಿಕರು ತರಕಾರಿ, ಹಣ್ಣುಗಳು ಹಾಗೂ ತಿಂಡಿ ತಿನಿಸುಗಳನ್ನು ಕೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಕಾಯಿ ಮಂಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಗ್ರಹಾರಬಾಚಹಳ್ಳಿ ದೀಪಶ್ರೀಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್, ಯುವ ಮುಖಂಡ ಬಂಡಿಹೊಳೆ ರಂಗನಾಥ್, ಯುವ ಪತ್ರಕರ್ತ ಮಾಕವಳ್ಳಿ ರಂಗನಾಥ್ ಹಾಗೂ ಬಿಜಿಎಸ್ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದದವರು, ಪೋಷಕರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.

[…] […]
[…] […]