ಟಿ.ನರಸೀಪುರ:-ನವಂಬರ್ 26 ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನದ ಮೌಲ್ಯಗಳ ರಕ್ಷಣೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನ ರಕ್ಷಣೆಗೆ ಜಾಗೃತಿ ಸಮಾವೇಶವನ್ನು ಮೈಸೂರಿನ ಮಾನಸಗಂಗೋತ್ರಿಯ ಲಲಿತಕಲೆಗಳ ನಾಟಕ ಸಭಾಂಗಣದಲ್ಲಿ ನ 26 ಬುಧವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ತಾಲ್ಲೂಕು ಸಂಚಾಲಕ ನರಗ್ಯಾತನಹಳ್ಳಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “1949ರ ನವೆಂಬರ್ 26 ರಂದು ಭಾರತದ ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದಿವೆ. ಅನೇಕ ಸವಾಲುಗಳನ್ನು ಎದುರಿಸುತ್ತಾ ದೇಶದ ಶ್ರೇಯಸ್ಸು ಕಾಪಾಡಿಕೊಂಡು ಬಂದಿದೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ”.
“ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಮತ್ತು ನಂಬಿಕೆ ಸ್ವಾತಂತ್ರ್ಯಗಳ ರಕ್ಷಣೆಗೆ ಸಂವಿಧಾನವೇ ಮೂಲಸ್ತಂಭ. ಸಂವಿಧಾನದ ಆಶಯಗಳು ಯಾವತ್ತೂ ಬದಲಾಗದೇ ಉಳಿಯುವಂತೆ ಎಲ್ಲರೂ ಕಾಪಾಡಬೇಕಿದೆ ಎಂದರು.
ಜಿಲ್ಲಾ ಸಂಚಾಲಕ ಕೆಂಪಯ್ಯನ ಹುಂಡಿ ರಾಜು ಮಾತನಾಡಿ, “ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ದೇಶಕ್ಕಿಂತ ಜಾತಿ-ಮತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಸ್ವಾತಂತ್ರ್ಯ ಅಪಾಯದಲ್ಲಿರುತ್ತದೆ. ಈ ಮನಸ್ಥಿತಿಗೆ ವಿರುದ್ಧವಾಗಿ ಸಂವಿಧಾನ ಮೌಲ್ಯಗಳನ್ನು ಉಳಿಸುವ ಹೋರಾಟ ಅಗತ್ಯವಾಗಿದೆ ಎಂದರು.
ಸಮಿತಿ ಸದಸ್ಯ ಕನ್ನಾಯಕನಹಳ್ಳಿ ಮರಿಸ್ವಾಮಿ ಮಾತನಾಡಿ, ಇಂದು ಸಂವಿಧಾನದ ವಿರುದ್ಧ ಆತಂಕ ಹುಟ್ಟಿಸುವ ವಾತಾವರಣ ಕಂಡು ಬರುತ್ತಿದೆ.ಆಡಳಿತ ಮತ್ತು ವಿರೋಧ ಪಕ್ಷಗಳನ್ನು ಅಳೆಯುವ ಮಾನದಂಡ ಸಂವಿಧಾನವಾಗಬೇಕು. ವ್ಯಕ್ತಿಪೂಜೆ ಮತ್ತು ಹುಸಿ ಭರವಸೆಗಳ ರಾಜಕೀಯ ಹೆಚ್ಚುತ್ತಿರುವುದು ಚಿಂತಾಜನಕ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಸಂವಿಧಾನ ರಕ್ಷಣೆಗೆ ಸಮಸ್ತ ಸಮಾಜದ ಪ್ರತಿಯೊಬ್ಬರೂ ಮುಂದಾಗಬೇಕು. ಎಲ್ಲಾ ಸಮಾಜದ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಳತ್ತೂರು ಪ್ರಭಾಕರ್,ತಾಲ್ಲೂಕು ಸಂಚಾಲಕ,ಸೋಮನಾಥಪುರ ಗೋವಿಂದರಾಜ್ ಉಪಸ್ಥಿತರಿದ್ದರು.
– ಎಂ.ನಾಗೇಂದ್ರ ಕುಮಾರ್

[…] […]