ಹುಬ್ಬಳ್ಳಿ, ನವೆಂಬರ್ 24: ನಗರದ ಹೃದಯಭಾಗದಲ್ಲಿ ಇರುವ ನೀಲಿಜನ್ ರಸ್ತೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ಐವರ ಗ್ಯಾಂಗ್ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯನ್ನು ಬೆದರಿಸಿ 3.2 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಘಟನೆ ನವೆಂಬರ್ 19 ರಂದು ನಡೆದಿದ್ದರೂ, ನವೆಂಬರ್ 22 ರಂದು ದೂರು ದಾಖಲಾಗುವ ಮೂಲಕ ವಿಚಾರ ಹೊರಬಿದ್ದಿದೆ.
ಘಟನೆ ಹೇಗೆ ನಡೆಯಿತು?
ಕೇರಳ ಮೂಲದ ಸುದೀನ್ ಎಂ.ಆರ್, ಆಭರಣ ಪೂರೈಕೆದಾರರಾಗಿದ್ದು, ನವೆಂಬರ್ 15ರಂದು ತಮ್ಮ ಸಹಕರಿ ವಿವೇಕ್ ಜೊತೆ ಮಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ವಿವಿಧ ಮಳಿಗೆಗಳಿಗೆ ಪೂರೈಕೆ ಮಾಡಲು ಸುದೀನ್ ಇವರ ಬಳಿ ಚೈನ್, ಉಂಗುರ, ಕಿವಿಯೋಲೆ, ಲಾಕೆಟ್, ಬಳೆ ಸೇರಿದಂತೆ ಸುಮಾರು 3.2 ಕೋಟಿ ರೂ ಮೌಲ್ಯದ ಚಿನ್ನಾಭರಣವಿತ್ತು.
ಬೆಳಗಾವಿ–ಧಾರವಾಡ–ಹುಬ್ಬಳ್ಳಿ ವ್ಯಾಪ್ತಿಯಲ್ಲಿ ವ್ಯವಹಾರ ಮುಗಿಸಿ, ಹಳೇ ಬಸ್ ನಿಲ್ದಾಣದ ಎದುರಿನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು.
ಧಾರವಾಡಕ್ಕೆ ತೆರಳಿ ಮರಳುತ್ತಿದ್ದ ವೇಳೆ, ನೀಲಿಜನ್ ರಸ್ತೆಯಲ್ಲಿ ಐವರ ಗುಂಪು ಸುದೀನ್ರನ್ನು ತಡೆದು ಹಿಂದಿಯಲ್ಲಿ ಮಾತನಾಡುತ್ತ ತಮ್ಮನ್ನು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಗುರುತಿನ ಚೀಟಿ ತೋರಿಸಿ ವಿಚಾರಣೆಗೆ ಬರುತ್ತೀರಾ ಎಂದು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. “ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದೀರಿ” ಎಂದು ಹೇಳಿ ಸುದೀನ್ರನ್ನು ಬೆದರಿಸಿ, ಅವರ ಮೊಬೈಲ್ ಫೋನ್ ಮತ್ತು ಸಿಮ್ ಕಿತ್ತುಕೊಂಡಿದ್ದಾರೆ.
ನಂತರ ಇಬ್ಬರ ಮೇಲೂ ಹಲ್ಲೆ ನಡೆಸಿ, ಚಿನ್ನಾಭರಣವಿರುವ ಬ್ಯಾಗ್ನ್ನು ಕಿತ್ತುಕೊಂಡು ಪರಾರಿ ಆಗಿದ್ದಾರೆ.
ವಿವೇಕ್ರನ್ನು ಬೆಳಗಾವಿ ಕಿತ್ತೂರು ಬಳಿ ಇಳಿಸಿ, ಸುದೀನ್ರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಯಲ್ಲಿ ಬಿಟ್ಟು, ಗ್ಯಾಂಗ್ ನಗದು ಮತ್ತು ಚಿನ್ನಾಭರಣದೊಂದಿಗೆ ತಲೆಮರೆಸಿಕೊಂಡಿದೆ.
ಇದನ್ನು ಓದಿ: ಗೋವಾದಲ್ಲಿ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಶಿಖರ್ ಧವನ್, ಹರ್ಭಜನ್ ಸಿಂಗ್ ಭಾಗಿ!
ಪೊಲೀಸ್ ಪ್ರತಿಕ್ರಿಯೆ:-
ಹುಬ್ಬಳ್ಳಿ-ಧಾರವಾಡ ನಗರದ ಡಿಸಿಪಿ ಮಹಾನಿಂಗ್ ನಂದಗಾವಿ ಮಾತನಾಡಿ: “ಸುದೀನ್ ನವೆಂಬರ್ 22ರಂದು ದೂರು ನೀಡಿದ್ದಾರೆ. ನವೆಂಬರ್ 19ರಂದು ಈ ಘಟನೆ ನಡೆದಿದೆ. ಇಡಿ ಅಧಿಕಾರಿಗಳ ಸೋಗಿನಲ್ಲಿ ಗ್ಯಾಂಗ್ ಅವರು ವಿಚಾರಣೆ ಹೆಸರಿನಲ್ಲಿ ಕರೆದುಕೊಂಡು ಹೋಗಿ ಲೂಟಿ ಮಾಡಿದ್ದಾರೆ. ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಉಪನಗರ ಠಾಣೆ ಹಾಗೂ ಸಿಸಿಬಿ ತಂಡಗಳು ಸೇರಿ ತನಿಖೆ ಮುಂದುವರೆಸಿವೆ,” ಎಂದು ತಿಳಿಸಿದ್ದಾರೆ.
ಘಟನೆ ಸ್ಥಳದಲ್ಲಿ ಸಿಸಿಟಿವಿ ಪರಿಶೀಲನೆ, ನಕಲಿ ಗುರುತಿನ ಚೀಟಿ ಬಳಕೆ, ವಾಹನಗಳ ಚಲನವಿಲನ ಸೇರಿದಂತೆ ಹಲವು ಅಂಶಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರವಾಸಿಗಳಲ್ಲಿ ಭೀತಿ ಮೂಡಿಸಿರುವ ಈ ಪ್ರಕರಣ ಶೀಘ್ರೇ ಬಿಚ್ಚಿಹಾಕುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

[…] […]
[…] […]