ಹಾಸನ– ನಗರದಲ್ಲಿ ಬುಧವಾರ ಬೆಳಿಗ್ಗೆ ಮಹಾನಗರ ಪಾಲಿಕೆಯ ತುರ್ತು ತೆರವು ಕಾರ್ಯಾಚರಣೆ ದೊಡ್ಡ ಚರ್ಚೆಗೆ ಗ್ರಾಸವಾಯಿತು. ಪಾಲಿಕೆ ಕಮಿಷನರ್ ಕೃಷ್ಣಮೂರ್ತಿ ಹಾಗೂ ಎಇಇ ಕವಿತಾ ಅವರ ನೇತೃತ್ವದಲ್ಲಿ ಡೈರಿ ವೃತ್ತದಿಂದ ಕಾಟಿಹಳ್ಳಿ ಸರ್ಕಲ್ವರೆಗೆ ಫುಟ್ಪಾತ್ ಆಕ್ರಮಣ ತೆರವು ನಡೆಸಲಾಯಿತು. ಜೆಸಿಬಿ ಯಂತ್ರದ ಮೂಲಕ ಅಕ್ರಮ ಕಟ್ಟಡಗಳು, ಶೆಡ್ಗಳು, ಮತ್ತು ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು.
👉 ಅಧಿಕಾರಿಗಳ ನಿಲುವು:
ಜಿಲ್ಲಾಧಿಕಾರಿ ಆದೇಶದ ಮೇರೆಗೆ ತೆರವು ಕಾರ್ಯಚರಣೆ ಕೈಗೊಂಡಿದ್ದು, ಪಾದಚಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಗಳು ಕಿರಿದಾಗಿದ್ದು, ಫುಟ್ಪಾತ್ಗಳಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ದೈನಂದಿನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು ಎಂದು ಅವರು ಸ್ಪಷ್ಟಪಡಿಸಿದರು.
👉 ವ್ಯಾಪಾರಿಗಳ ಆಕ್ರೋಶ:
ಆದರೆ ಫುಟ್ಪಾತ್ ವ್ಯಾಪಾರಿಗಳು ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “. ನಾವು ದಿನನಿತ್ಯದ ಬದುಕಿಗಾಗಿ ಈ ಅಂಗಡಿಯ ಮೇಲೆ ಅವಲಂಬಿತರಾಗಿದ್ದೇವೆ. ಪರ್ಯಾಯ ವ್ಯವಸ್ಥೆಯಾದರೂ ಮಾಡಬೇಕಿತ್ತು” ಎಂದು ವ್ಯಾಪಾರಿಗಳು ಗಲಿಬಿಲಿಯಾಗಿದ್ದರು.
👉 ನಗರದಲ್ಲಿ ಚರ್ಚೆಯ ವಿಷಯ:
ಹಠಾತ್ ನಡೆಸಿದ ಈ ಬೃಹತ್ ತೆರವು ಕಾರ್ಯಾಚರಣೆ ಇಂದು ಹಾಸನ ನಗರದ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಜನಸಾಮಾನ್ಯರಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಗರದ ಸಂಚಾರ ಸುಗಮವಾಗುವುದಾ? ಅಥವಾ ವ್ಯಾಪಾರಿಗಳ ಜೀವನೋಪಾಯಕ್ಕೆ ಹೊಡೆತವೋ? ಮುಂದಿನ ಕ್ರಮಗಳತ್ತ ಹಾಸನದ ಜನತೆ ಕಣ್ಣು ಹಾಯಿಸಿದ್ದಾರೆ.
