ಕೆ ಆರ್ ಪೇಟೆ: ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಪುರಸಭಾ ಸದಸ್ಯ ಕೆ.ಬಿ ಮಹೇಶ್ ರವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಪಕ್ಷದಿಂದ ಅಮಾನತು ಮಾಡಿಸಿದ್ದಾರೆ ಎಂದು ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆ.ಬಿ ಮಹೇಶ್ ಅಭಿಮಾನಿಗಳು ಗಂಭೀರವಾಗಿ ಆರೋಪಿಸಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಹೋರಾಟದ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲಾ ಕಾಂಗ್ರೆಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ,ಕಾಂಗ್ರೆಸ್ ಮುಖಂಡ ಬಸ್ತಿ ರಂಗಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಹಾಗೂ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಇಂದಿಗೂ ಬಲಿಷ್ಠವಾಗಿ ಉಳಿದಿದೆ ಎಂದರೆ ಅದು ಕೆ ಬಿ ಚಂದ್ರಶೇಖರ್ ಹಾಗೂ ಅವರ ಸಹೋದರರು ಹಾಗೂ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಂದ ಸಾಧ್ಯವಾಗಿದೆ. ಪುರಸಭಾ ಸದಸ್ಯರಾದ ಕೆ ಬಿ ಮಹೇಶ್ ಅವರನ್ನು ಏಕಾಏಕಿ ಅಮಾನತು ಮಾಡುವ ಬದಲು ಪಕ್ಷದ ಶಿಸ್ತು ಸಮಿತಿಯಿಂದ ನೋಟೀಸ್ ವಿತರಣೆ ಮಾಡಿ ಕೆ ಬಿ ಮಹೇಶ್ ಅವರಿಂದ ಲಿಖಿತವಾಗಿ ಹೇಳಿಕೆ ಪಡೆದು ನಂತರ ಸತ್ಯಾಸತ್ಯತೆ ಪರಿಶೀಲನೆ ನಡೆಸಿ ತಪ್ಪು ಕಂಡರೆ ಕ್ರಮ ಕೈಗೊಳ್ಳಬಹುದಿತ್ತು.ತಾಲ್ಲೂಕಿನಲ್ಲಿ ಯಾರಿಗೂ ವಿಷಯ ತಿಳಿಸದೇ ಏಕಾಏಕಿ ಈ ರೀತಿಯ ಶಾಕ್ ಕೊಟ್ಟರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಘಟನೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗಲೂ ಕಾಲ ಮಿಂಚಿಲ್ಲ ಅಮಾನತು ಅದೇಶವನ್ಮು ಪರಿಶೀಲಿಸಿ ನಮ್ಮ ನಾಯಕರಿಗೆ ಗೌರವಯುತವಾಗಿ ನ್ಯಾಯ ಕೊಡಿಸುವಂತೆ ಜಿಲ್ಲಾ ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದರು.
ವಿಠಲಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರೀಶ್ ಮಾತನಾಡಿ ಕಳೆದ 35 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಾ ಕಾಂಗ್ರೆಸ್ ಕಾರ್ಯಕರ್ತರಿಗೆ ತನ್ನ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುತ್ತಾ ತನ್ನದೇ ಅದ ಅಭಿಮಾನಿಗಳ ಬಳಗವನ್ನು ಹೊಂದಿ ಪಕ್ಷಕ್ಕೆ ತನು ಮನ ಧನವನ್ನು ಅರ್ಪಿಸುತ್ತಾ ಜೊತೆಗೆ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಒಟ್ಟಿಗೆ ಸೇರಿ ಕೆ ಆರ್ ಪೇಟೆ ಹಾಗೂ ಹೊಸಹೊಳಲು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮ ಕೆ ಬಿ ಮಹೇಶ್ ವಿರುದ್ಧ ಪಕ್ಷಾಂತರಿಗಳ ಮಾತುಗಳನ್ನು ಕೇಳಿಕೊಂಡು ನಮ್ಮ ನಾಯಕರ ಮೇಲೆ ಅಮಾನತು ಆದೇಶವನ್ನು ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್ ವಿರುದ್ಧ ಗದಾಪ್ರಹಾರ ನಡೆಸಿದರು.ನಮ್ಮ ಕಾಂಗ್ರೆಸ್ ಪಕ್ಷ ತಾಲ್ಲೂಕಿನಲ್ಲಿ ಕಳೆದ ಮೂರು ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದೇವೆ.ಅದನ್ನು ಯಾವುತ್ತೂ ಆತ್ಮವಲೋಕನ ಮಾಡಿಕೊಳ್ಳಲು ಅಥವಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಕೆ ಬಿ ಚಂದ್ರಶೇಖರ್ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ.ಅದರೆ ಕೆಲವರ ಚಾಡಿ ಮಾತಿಗೆ ಮರುಳಾಗಿ ನಮ್ಮ ನಾಯಕರಾದ ಕೆ ಬಿ ಮಹೇಶ್ ಅವರಿಗೆ ಅಮಾನತು ಆದೇಶವನ್ನು ನೀಡಿದ್ದೀರಿ.ಇದು ಯಾವ ನ್ಯಾಯ ಎಂದು ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಅಮಾನತು ಆದೇಶವನ್ನು ಹಿಂಪಡೆಯದಿದ್ದರೆ ಜಿಲ್ಲಾ ಕಾಂಗ್ರೆಸ್ ವರಿಷ್ಠರಿಗೆ ಮುಂದಿನ ದಿನಗಳಲ್ಲಿ ಘೇರಾವ್ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸೋಮೇಗೌಡ, ಗ್ರಾಮ ಪಂಚಾಯತಿ ಸದಸ್ಯ ನಾರಾಯಣ, ಪುರಸಭಾ ಉಪಾಧ್ಯಕ್ಷ ಸೌಭಾಗ್ಯ ಉಮೇಶ್, ಪುರಸಭಾ ಸದಸ್ಯ ಸಲ್ಲು,ಪುರಸಭಾ ಸದಸ್ಯ ಪುಟ್ಟರಾಜು,ಶ್ಯಾಂಪ್ರಸಾದ್, ನವೀದ್,ಕಿರಣ್,ತಾ.ಪಂ.ಮಾಜಿ ಸದಸ್ಯ ಚಲುವಯ್ಯ,ಕಲ್ಪನಾದೇವರಾಜು,ಅನಿಲ್, ಸುನಿಲ್, ಆತ್ಮಾನಂದ,ಸುಮಿತ್,ಪಾಪಣ್ಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕೆ ಬಿ ಮಹೇಶ್ ಅಭಿಮಾನಿಗಳು ಹಾಜರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
