ಲಂಡನ್: ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (ಐಎಂಒ) ಮಂಡಳಿಗೆ ಭಾರತವು ಮತ್ತೊಮ್ಮೆ ಮರು ಆಯ್ಕೆಯಾಗಿದ್ದು, 2025–26ರ ದ್ವೈವಾರ್ಷಿಕ ಅವಧಿಯಲ್ಲಿ ದೇಶವು ಜಾಗತಿಕ ಸಮುದ್ರ ಆಡಳಿತದಲ್ಲಿ ತನ್ನ ಪ್ರಭಾವವನ್ನು ಮುಂದುವರಿಸಲಿದೆ. ಲಂಡನ್ನಲ್ಲಿ ನಡೆದ ಐಎಂಒ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಭಾರತವು ವರ್ಗ ‘ಬಿ’ ಅಡಿಯಲ್ಲಿ ಸ್ಪರ್ಧಿಸಿ ಸ್ಥಾನ ಕಾಯ್ದುಕೊಂಡಿದೆ.
ಐಎಂಒ ಮಂಡಳಿಯ ವರ್ಗ ‘ಬಿ’ಯಲ್ಲಿ ಅಂತರಾಷ್ಟ್ರೀಯ ಸಮುದ್ರ ವ್ಯಾಪಾರದಲ್ಲಿ ಪ್ರಮುಖ ಆಸಕ್ತಿ ಹೊಂದಿರುವ ರಾಷ್ಟ್ರಗಳು ಸೇರಿದ್ದು, ಈ ವರ್ಗದಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್, ಸ್ಪೇನ್, ಸ್ವೀಡನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಭಾರತವೂ ಸ್ಥಾನ ಪಡೆದಿದೆ.
ಇದನ್ನು ಓದಿ: ದೇಶದಲ್ಲಿ ಹೊಸ ಆತಂಕ: H5 ಪಕ್ಷಿ ಜ್ವರ ಪ್ರಕರಣಗಳ ಪತ್ತೆ
ಜಾಗತಿಕ ಕಡಲ ವಲಯಕ್ಕೆ ನೀತಿನಿರ್ಧಾರ ಮಾಡುವ ಉನ್ನತ ಮಟ್ಟದ ಆಡಳಿತ ಮಂಡಳಿಯಾದ ಐಎಂಒ, ಸಮುದ್ರ ಸುರಕ್ಷತೆ, ಸಾಗರ ಪರಿಸರ ಸಂರಕ್ಷಣೆ ಹಾಗೂ ಅಂತರಾಷ್ಟ್ರೀಯ ಸಾಗರ ವ್ಯಾಪಾರದ ನಿಯಂತ್ರಣ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಭಾರತದ ಮರು ಆಯ್ಕೆ, ದೇಶದ ಸಮುದ್ರ ಸಾರಿಗೆ ಶಕ್ತಿ, ವಲಯದ ಅಭಿವೃದ್ಧಿ ಮತ್ತು ಜಾಗತಿಕ ಸಮುದ್ರ ಸುರಕ್ಷತಾ ಚಟುವಟಿಕೆಗಳಲ್ಲಿ ಹೆಚ್ಚಿದ ಹಸ್ತಕ್ಷೇಪಕ್ಕೆ ಮತ್ತೊಂದು ಒತ್ತು ನೀಡಿದಂತಾಗಿದೆ.
