ತುಮಕೂರು:ಸುಮಾರು 2500 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ಭಾರತದಲ್ಲಿದೆ ಕಂಚಿ, ನಳಂದ, ತಕ್ಷಶಿಲೆಯಂತಹ ವಿಶ್ವವಿದ್ಯಾನಿಲಯಗಳಿಗೆ ವಿದೇಶದ ವಿದ್ಯಾರ್ಥಿಗಳು ಆಗಮಿಸಿ ಜ್ಞಾನವನ್ನು ಪಡೆಯುತ್ತಿದ್ದರು. ಇಂದು ಆ ಭಾರತೀಯ ಜ್ಞಾನ ಪರಂಪರೆ ಅತ್ಯಂತ ಹೆಚ್ಚು ಅವಾಜ್ಞೆಗೆ ಒಳಗಾಗಿದೆ ಮತ್ತು ಅದು ನಮ್ಮವರಿಂದಲೇ ನಿರಾಕರಿಸಲ್ಪಟ್ಟಿದೆ, ಅಧರ್ಮವನ್ನು ಧರ್ಮ ಎಂದು ಬಿಂಬಿಸುವ ಕೆಲಸಗಳು ನಡೆಯುತ್ತಿದೆ. ಈ ಪ್ರಾಚೀನ ಜ್ಞಾನ ಪರಂಪರೆಯನ್ನು ಆಧುನಿಕ ಒಳನೋಟಗಳೊಂದಿಗೆ ಸಂಯೋಜಿಸಿ ಪಠ್ಯಕ್ರಮದಲ್ಲಿ ಅಳವಡಿಸಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟರು.
ಅವರು ತುಮಕೂರು ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಭಾರತೀಯ ಜ್ಞಾನ ಪರಂಪರೆ ಮತ್ತು ಅವಲೋಕನ” ಎಂಬ ಒಂದು ವಾರದ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪರಾತತ್ವ ವಿಭಾಗದ ಪ್ರಾಧ್ಯಾಪಕಿ ಡಾ.ಪ್ರಿಯಾ ಠಾಕೂರ್ ರವರು ಪುರಾತನ ಭಾರತದ ನಗರ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿ ಸಿಂಧೂ ನದಿ ನಾಗರೀಕತೆಯ ಕಾಲದಲ್ಲೇ ಹರಪ್ಪ ಮೊಹೆಂಜೊದಾರೋ, ಲೋಧಾಲ್ ನಂತಹ ನಗರಗಳಿದ್ದು, ಅವುಗಳೆಲ್ಲಾ ಉತ್ತಮ ಯೋಜನೆಗಳಿಂದ ನಿರ್ಮಿಸಲ್ಪಟ್ಟಿದ್ದು ಬೀದಿ ದೀಪದ ಅಳವಡಿಕೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಯೋಜನೆಯನ್ನು ಒಳಗೊಂಡಿದ್ದ ಮಹಾನಗರಗಳಾಗಿದ್ದವು. ಅಂತಹ ನಗರಗಳ ಮೂಲ ತತ್ವದಿಂದಲೇ ನಾವು ಈಗ ನಗರ ಯೋಜನೆ ಇಲಾಖೆಯನ್ನು ಹೊಂದಿದ್ದೇವೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪರವರು ಮಾತನಾಡಿ ನಮ್ಮ ಪರಂಪರೆ, ಸಂಪ್ರದಾಯಗಳನ್ನು ಇಂದು ಮೂಢನಂಬಿಕೆಗಳೆಂದು ಭಾವಿಸುವುದು ತಪ್ಪು. ಅವುಗಳ ಆಚರಣೆಗೆ ನಮ್ಮ ಪೂರ್ವಜರು ವೈಜ್ಞಾನಿಕ ಕಾರಣಗಳಿಂದಲೇ ಆಚರಿಸುತ್ತಿದ್ದರು. ಅಂತಹ ವಿಷಯಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಬೇಕಾಗಿದೆ ಎಂದರು.
ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಎಂ.ದಕ್ಷಿಣಾಮೂರ್ತಿ ರವರು ವೇದಿಕೆಯಲ್ಲಿ ಹಾಜರಿದ್ದರು. ಈ ಶೈಕ್ಷಣಿಕ ಕಾರ್ಯಾಗಾರದ ಸಂಚಾಲಕರಾದ ಡಾ.ಬಿ.ಆರ್.ಚಂದ್ರಶೇಖರಯ್ಯ ಸ್ವಾಗತಿಸಿದರು, ಐ.ಕ್ಯೂ.ಎ.ಸಿ. ಸಂಚಾಲಕರಾದ ಪ್ರೊ.ಹೆಚ್.ಜಿ.ಸರ್ವಮಂಗಳರವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕರಾದ ಪ್ರಾಧ್ಯಾಪಕಿ ಮೋಹನಕುಮಾರಿ ರವರು ವಂದಿಸಿದರು, ಪ್ರಾಧ್ಯಾಪಕಿ ಶ್ರೀವಲ್ಲಿ ರವರು ನಿರೂಪಿಸಿದರು.
[…] ಇದನ್ನು ಓದಿ: ತುಮಕೂರು:ಪಠ್ಯಗಳಲ್ಲಿ ಭಾರತೀಯ ಜ್ಞಾನ ಪರಂಪರೆಯ ವಿಷಯಗಳಿಗೆ ಆದ್ಯತೆ ನೀಡಿ – ಡಾ. ಡಿ.ಎನ್.ಯೋಗೀಶ್ವರಪ್ಪ. […]