ಚನ್ನರಾಯಪಟ್ಟಣ,— ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ಮೌಲ್ಯದ ಶ್ರೀಗಂಧ ಕಳ್ಳಸಾಗಣೆ ಯತ್ನವನ್ನು ಭಗ್ನಗೊಳಿಸಿದ್ದಾರೆ.
ಅರಣ್ಯ ಇಲಾಖೆಯ ಎಸಿಎಫ್ ಖಲಂದರ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಸುಮಾರು 2.30ರ ಸುಮಾರಿಗೆ ನಡೆದ ದಾಳಿಯಲ್ಲಿ, ಬೆಳಸಿಂದ ಶ್ರೀ ವನ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಗಳಾದ ಮೂರ್ತಿ, ನಾಗೇಶ್ ಮತ್ತು ನಂಜುಂಡಪ್ಪರನ್ನು ಸಿಬ್ಬಂದಿ ಸೆರೆಹಿಡಿದರು.

ದಾಳಿಯಲ್ಲಿ 548 ಕೆಜಿ ತೂಕದ, 20 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರದ ತುಂಡುಗಳು ಹಾಗೂ ಚಕ್ಕೆಗಳು ವಶಪಡಿಸಿಕೊಳ್ಳಲಾಯಿತು. ಜೊತೆಗೆ ಆರೋಪಿಗಳಿಂದ ಎರಡು ದ್ವಿಚಕ್ರ ವಾಹನಗಳು, ಹಲವಾರು ಮಾರಕಾಸ್ತ್ರಗಳು ಮತ್ತು 4 ಮೊಬೈಲ್ ಫೋನ್ಗಳು ಜಪ್ತಿಗೊಂಡಿವೆ.
ಖಲಂದರ್ ನೇತೃತ್ವದ ಸಿಬ್ಬಂದಿ ನಡೆಸಿದ ಶೀಘ್ರ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ಸ್ಥಳೀಯ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಅರಣ್ಯ ಸಂಪತ್ತಿನ ಕಳ್ಳಸಾಗಣೆಯನ್ನು ತಡೆಗಟ್ಟುವಲ್ಲಿ ಇಲಾಖೆ ತೋರಿದ ಜಾಗ್ರತೆ ಹಾಗೂ ದೃಢನಿಶ್ಚಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
– ಮಂಜುನಾಥ್ ಐ.ಕೆ
