
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಕುಡಿದ ಅಮಲಿನಲ್ಲಿ ಕೋತಿಗಳಾಗುವುದರಲ್ಲಿ ತಪ್ಪೇನಿದೆ?
ಇನ್ನೇನು ಊಟಕ್ಕೆ ಹೋಗೋಣವೆಂದು ಹೊರಡುತ್ತಿದ್ದೆ. ಅಷ್ಟರಲ್ಲಿ ದಂಪತಿಗಳು ನನ್ನ ಹಳೆಯ ಸಲಹಾ ಚೀಟಿಯನ್ನು ಹಿಡಿದುಕೊಂಡು ಬಂದರು. ‘ನಾವು ನಿಮಗೆ ಕೊಟ್ಟಿದ್ದ ಮೂರು ಸಾವಿರ ರೂಪಾಯಿಗಳನ್ನು ವಾಪಸ್ ಕೊಡಿ ಡಾಕ್ಟ್ರೇ ’ ಎಂದರು. ಅವನಿಂದ ಸೂಸುತ್ತಿದ್ದ ಮದ್ಯದ ತಾಜಾ ವಾಸನೆ ಹಾಗೂ ಅಸಹಾಯಕಳಾಗಿ ನಿಂತಿದ್ದ ಆತನ ಹೆಂಡತಿಯನ್ನು ಕೂಲಂಕುಷವಾಗಿ ವಿಚಾರಿಸಿದಾಗ, ‘ನೀವು ಕುಡಿತ ಬಿಡಿಸಲು ಹಣ ಪಡೆದಿರಿ, ಅವರು ಮತ್ತೆ ಕುಡಿಯಲು ಪ್ರಾರಂಭಿಸಿದ್ದಾರೆ. ನಮ್ಮ ಹಣ ಹಿಂದಿರುಗಿಸಿ’ ಎಂದು ಕೇಳುವುದರ ಮೂಲಕ ಗಂಡನನ್ನು ಸಮರ್ಥಿಸಿಕೊಂಡಳು.
ಮೊದಲೇ ದಣಿದಿದ್ದ ನನಗೆ ಅವರ ವರ್ತನೆ ಕೋಪವನ್ನು ದ್ವಿಗುಣಗೊಳಿಸಿತು. ಏರು ಧ್ವನಿಯಲ್ಲಿ ‘ನಿಮಗೆ ಬರಲು ಹೇಳಿದ್ದು ಯಾವಾಗ?’ ಎಂದೆ. ಆವಾಗ ತಿಳಿಯಿತು. ಹೇಳಿದ ಸಮಯಕ್ಕೂ ಬಂದಿರಲಿಲ್ಲ. ನೀಡಿದ ಸಲಹೆಯನ್ನೂ ಪಾಲಿಸಿರಲಿಲ್ಲ. ಕೇಳಿದ್ದಕ್ಕೆಲ್ಲ ಉದ್ಧಟತನದ ಉತ್ತರ ಮತ್ತು ಅಹಂಕಾರದ ನಡೆ ನುಡಿಗಳು ಅವನ ಕಪಾಳಕ್ಕೆ ಎರಡು ಹೊಡೆಯುವಂತೆ ಮಾಡಿತು. ಜಗಳ ಮಾಡಲೆಂದೇ ಬಂದ ಅವರನ್ನು ನಮ್ಮ ಸಿಬ್ಬಂದಿ ಹೊರ ಕಳುಹಿಸಿದರು.
ಮನೆಯಲ್ಲಿ ಟಿ.ವಿ. ನೋಡುತ್ತ ಕುಳಿತಿದ್ದವನಿಗೆ ಪೊಲೀಸ್ ಠಾಣೆಯಿಂದ ಫೋನ್ ಕರೆ. ‘ನೀವು ಯಾರಿಗೋ ಹೊಡೆದಿದ್ದೀರಿ ಎಂದು ದೂರು ಕೊಟ್ಟಿದ್ದಾರೆ.
ಠಾಣೆಗೆ ಬಂದು ಕಾಣಿ’. ಮುಖ್ಯ ಪೇದೆಗೆ ನನ್ನ ಪರಿಚಯವಿದ್ದುದರಿಂದ ನನ್ನನ್ನು ಕೂರಿಸಿ, ಫಿರ್ಯಾದು ಕೊಟ್ಟ ವ್ಯಕ್ತಿಯನ್ನು ತೋರಿಸಿದರು. ಅವನು ನನ್ನ ಕಕ್ಷಿದಾರ (ರೋಗಿ)ನಾಗಿದ್ದ. ನಂತರ ತಿಳಿಯಿತು ಅವನಿಗೆ ಅಲ್ಲಿನ ಪೊಲೀಸ್ ಅಧಿಕಾರಿ ಪರಿಚಯದವರೆಂದು. ನನ್ನ ಪ್ರಶ್ನೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸದೆ, ಆರಕ್ಷಕರಿಗೂ ವ್ಯತಿರಿಕ್ತ ಉತ್ತರ ನೀಡುತ್ತಿದ್ದ ಮತ್ತು ಅಲ್ಲಿಯೂ ಮದ್ಯದ ವಾಸನೆ ಹರಡುತ್ತಿದ್ದುದನ್ನು ಕಂಡ ಮುಖ್ಯ ಪೇದೆ ತಾಳ್ಮೆ ಕಳೆದುಕೊಂಡು ‘ಕುಡಿದು ಬಂದು ಮಾತಾಡ್ತೀಯಾ ಕತ್ತೆಬಡವ’ ಎಂದರು ಸಿಟ್ಟಿನಿಂದ. ‘ಯಾಕೆ ನೀವ್ ಕುಡಿಯಲ್ವಾ? ಮಜ್ಜಿಗೆ ಏನ್ ಮದ್ಯಸಾರ ಅಲ್ವಾ?’ ಎಂದೆಲ್ಲಾ ಬಾಯಿಗೆ ಬಂದAತೆ ಅಸಂಬದ್ಧವಾಗಿ ನುಡಿಯುತ್ತಿದ್ದನು. ಪೊಲೀಸರು ನನ್ನನ್ನು ಕಳುಹಿಸಿ, ಅವರ ಭಾಷೆಯಲ್ಲಿ ಅವನಿಗೆ ಬುದ್ಧಿ ಹೇಳಲು ಪ್ರಾರಂಭಿಸಿದರು.
ಮನೋ ವೈದ್ಯನಾಗಿ ಇವನ್ನೆಲ್ಲಾ ಅನುಭವಿಸಬೇಕೆಂಬ ಪ್ರಶ್ನೆ ಕಾಡಿತ್ತು ಮತ್ತು ನಮ್ಮ ವೈದ್ಯಕೀಯ ವ್ಯವಸ್ಥೆ ಕುರಿತು ಛೇ! ವೈದ್ಯ ವೃತ್ತಿ ಬೇಕಾ ಎಂಬ ಜಿಜ್ಞಾಸೆ ನನ್ನನ್ನು ಕಾಡಿತ್ತು. ಒಬ್ಬ ವೈದ್ಯ ಅರಿತೂ ತಪ್ಪೆಸಗಿದರೆ ಅವನು ಶಿಕ್ಷಾರ್ಹನು. ನಮ್ಮ ವೃತ್ತಿಯಲ್ಲಿ ಯಾವುದೇ ಕಾಯಿಲೆಗೆ ಅಥವಾ ಔಷಧಿಗಳಿಗೆ ಸಂಬಂಧಿಸಿದಂತೆ ಶೇ. 1 ರಿಂದ 3 ರಷ್ಟು ವ್ಯತಿರಿಕ್ತ (Reaction) ಪರಿಣಾಮವನ್ನುಂಟು ಮಾಡುತ್ತವೆ. ಕೆಲವೊಮ್ಮೆ ಜೀವಕ್ಕೆ ಅಪಾಯವಾಗುವ ಸಂಭವವು ಉಂಟು.

ಅಕಸ್ಮಾತ್ ಹಾಗೆ ಸಾವು ಸಂಭವಿಸಿದಾಗ ಅವರ ಸಂಬಂಧಿಕರು ಕಾರಣವನ್ನು ತಿಳಿಯುವ ಗೋಜಿಗೆ ಹೋಗದೆ ವೈದ್ಯರ ಮೇಲೆ ಕೈ ಮಾಡುವುದು, ಆಸ್ಪತ್ರೆ ಗಾಜಿಗೆ ಕಲ್ಲು ಹೊಡೆಯುವುದು, ಪೀಠೋಪಕರಣಗಳನ್ನು ಧ್ವಂಸ ಮಾಡುವುದು, ಅಂಗಾಂಗಗಳನ್ನು ತೆಗೆದು ಮಾರಿದರು ಎಂದು ಆರೋಪ ಹೊರಿಸುವುದು, ರೋಗಿ ಗುಣಮುಖನಾಗದೆ ತೀರಿಕೊಂಡಾಗ ವೈದ್ಯರು ಕೊಂದರು ಎಂದು ದೂರು ಕೊಟ್ಟು ಭಾ.ದಂ.ಸಂ. 320 ರ ಅಡಿ ಕೈಗೆ ಕೋಳ ಹಾಕಿಸುವಂತಹ ಹೀನ ಕೃತ್ಯಗಳು ನಡೆಯುತ್ತಿವೆ.
ವೈದ್ಯರನ್ನೇ ಹತ್ಯೆ ಮಾಡಿದ ಘಟನೆಗಳೂ ನಡೆದಿವೆ. ಇವೆಲ್ಲವನ್ನೂ ಗಮನಿಸಿದಾಗ ಯಾರಿಗೆ ತಾನೇ ವೈದ್ಯ ವೃತ್ತಿ ಮಾಡಬೇಕೆನಿಸುತ್ತದೆ, ಅಲ್ಲವೇ? ಸ್ನೇಹಿತರೇ, ವೈದ್ಯ ವಿಭಾಗದ ಪ್ರೊಫೆಸರ್ವೊಬ್ಬರು ಹೇಳುತ್ತಿದ್ದ ಮಾತು ನನಗೆ ಜ್ಞಾಪಕಕ್ಕೆ ಬರುತ್ತಿದೆ. ‘If you are not in a position to diagnose, try steroids (ನಿನಗೆ ಕಾಯಿಲೆ ನಿರ್ದಿಷ್ಟವಾಗಿ ಪತ್ತೆಯಾಗದಿದ್ದಲ್ಲಿ ಸ್ಟಿರಾಯ್ಡ್ನ್ನು ಬಳಸಿ ನೋಡು) ಹೌದು, Steroids ರಾಮಬಾಣವಾಗಿತ್ತು. ಹಾಗೆಯೇ ಈ ಔಷಧಿಯನ್ನು ಅಮೃತವೆನ್ನುತ್ತಿದ್ದರು. ಆದರೆ ಅರಿವಿಲ್ಲದೆ ಇವುಗಳನ್ನು ನಿರಂತರವಾಗಿ ಉಪಯೋಗಿಸಿದಲ್ಲಿ ಅವನು ಸಾವಿನ ದವಡೆಗೆ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ.
ಹಾಗಿದ್ದರೆ ಈ ಹೊತ್ತಿನ ರಾಮಬಾಣ ಅಥವಾ ಅಮೃತ ಯಾವುದೆಂದರೆ, ಕೆಲವರ ಪ್ರಕಾರ ‘ಮದ್ಯಸಾರ’ ಖುಷಿಗೋ ದುಃಖಕ್ಕೊ ಕುಡಿಯುವ ಇದರ ಮಹತ್ವವೇನು ನೋಡೋಣ.
ಮಾನವನ ಮೂಲ ಮಂಗ ಅನ್ನುವುದಾದರೆ ಕುಡಿದ ಅಮಲಿನಲ್ಲಿ ಕೋತಿಗಳಾಗುವುದರಲ್ಲಿ ತಪ್ಪೇನಿದೆ? ಕೋತಿ ಕುಡಿಯದೆ ಮಂಗ. ಮನುಷ್ಯ ಕುಡಿದು ಮಂಗ. ವೈಜ್ಞಾನಿಕವಾಗಿ ಕಪಿಗಳಿಗೂ ನಮಗೂ ಇರುವ ವ್ಯತ್ಯಾಸ Neo Encephalon (ಹೊಸದಾಗಿ ಬೆಳೆದಿರುವ ಮೆದುಳು) ಇದನ್ನು Fore Brain ಎಂದು ಕರೆಯುತ್ತೇವೆ.
ಅದನ್ನು ಅರಿಯುವ ಮುನ್ನ ನಮ್ಮ ಸುಪ್ತ ಮನಸ್ಸನ್ನು ಅರಿಯಬೇಕಾಗುವುದು. ಸಿಗ್ಮಂಡ್ ಫ್ರಾಯ್ಡ್ ಎಂಬ ಮನೋಶಾಸ್ತ್ರಜ್ಞ ನು ಈ ಸುಪ್ತ ಮನಸ್ಸನ್ನು Id-Ego-Super ego ಎಂಬುದಾಗಿ ವಿಂಗಡಿಸಿರುವನು. ಈ Ego ಕಾರ್ಯವನ್ನು Fore Brain ನಿಭಾಯಿಸುತ್ತದೆ.
ಪೂರ್ವ ಸಂತತಿಯಾದ ಚಿಂಪಾಂಜಿ, ಗೊರಿಲ್ಲ, ಮಂಗ ಮತ್ತು ಇಂದಿನ ಮನುಷ್ಯನಲ್ಲಿ ಬದಲಾವಣೆ ಎಂದರೆ ಹೊಸದಾಗಿ ಬೆಳೆದಿರುವ ಮತ್ತು ನಿಪುಣತೆ ಹೊಂದಿರುವ ಮೆದುಳು. ಮಾನವ ಸಮಾಜ ಮತ್ತು ಸಂಘ ಜೀವಿಯಾಗಿರಲು ಈ ವಿಭಾಗದ ನರ ರಚನೆಯು ಮನುಷ್ಯನನ್ನು ಹದ್ದುಬಸ್ತಿನಲ್ಲಿ ಇಟ್ಟಿರುವುದು ಕಾರಣವಾಗಿದೆ. ಹೀಗಿರುವ ನರ ರಚನೆಯ ಮದ್ಯಸಾರದ ಅಮಲಿನ ಹಿಡಿತಕ್ಕೆ ಸಿಕ್ಕಿ ನಿಯಂತ್ರಣ ಕಳೆದುಕೊಂಡು ಮನುಷ್ಯ ಅರಿವಿಲ್ಲದೆ ಕೋತಿಯಂತೆ ವರ್ತಿಸುತ್ತಾನೆ ಮತ್ತು ಇಂತಹ ಸಮಯದಲ್ಲಿ ಅನಾಹುತಗಳು ಆಗುವ ಸಾಧ್ಯತೆಯೂ ಇರುತ್ತದೆ.
ಇದನ್ನು Pathological intoxication ಅಥವಾ Balck out ಎಂದು ಕರೆಯಬಹುದು. ಈ ಮದ್ಯಸಾರದಲ್ಲಿರುವ Ethyl alcohol ಪರಿಣಾಮದಿಂದ ಕೋಟಿಗೆ ಬೆಲೆ ಬಾಳುವ ವ್ಯಕ್ತಿ ಕೂಡ ಕೋತಿಯಂತೆ ವರ್ತಿಸುವುದನ್ನು ನಾವು ನೀವೆಲ್ಲ ನೋಡಿದ್ದೇವೆ. ಅಲ್ಲವೇ?
‘ಅತಿಯಾದ ಮದ್ಯಪಾನ, ಹೋದಲ್ಲೆಲ್ಲಾ ಅವಮಾನ’.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ