ತುಮಕೂರು: ಮಾನವ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಹೇಳಿದರು.
ನಗರದ ವಿದ್ಯೋದಯ ಕಾನೂನು ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಿಂದಾಗಲೀ ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ ನ್ಯಾಯಕ್ಕಾಗಿ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಇದನ್ನು ಓದಿ: ತುಮಕೂರು: ಶಿಕ್ಷಕರು ಮಕ್ಕಳಿಗೆ ನೈತಿಕೆ ಮೌಲ್ಯ ಕಲಿಸಿ: ನ್ಯಾ.ನೂರುನ್ನಿಸ
ಜನವರಿಯಿಂದ ಈವರೆಗೆ ಒಟ್ಟು 325 ಬಾಲ ಗರ್ಭಿಣಿ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿ ದಾಖಲಾಗಿದ್ದು, ಜಿಲ್ಲಾಸ್ಪತ್ರೆ ಮಟ್ಟದಲ್ಲಿ 230 ಪ್ರಕರಣಗಳು ಗರ್ಭಿಣಿಯರ ವಯಸ್ಸಿನ ಖಾತರಿ ಹಂತದಲ್ಲಿವೆ. ಪೋಕ್ಸೋ ಹಾಗೂ ಬಾಲ ಗರ್ಭಿಣಿ ಪ್ರಕರಣಗಳು ಸೇರಿದಂತೆ ಮಕ್ಕಳ ಕಾಣೆ ಪ್ರಕರಣಗಳು ಗಡಿ ಭಾಗಗಳಲ್ಲಿ ಹೆಚ್ಚುತ್ತಿರುವುದರಿಂದ ಕಾನೂನು ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಶಾಲಾ-ಕಾಲೇಜು ಹಾಗು ವಿವಿಧ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ನಾಗರಿಕರಲ್ಲಿ ಅರಿವು ಮೂಡಿಸಿ ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ತಡೆಯಬೇಕು ಎಂದು ಹೇಳಿದರು.
ವಿದ್ಯೋದಯ ಫೌಂಡೇಷನ್ ನ ಸಿಇಓ ಕೆ.ಚಂದ್ರಣ್ಣ ಮಾತನಾಡಿ, ವಿದ್ಯಾಭ್ಯಾಸದಲ್ಲಿ ಕರ್ತವ್ಯಲೋಪ ಮಾಡಬಾರದು. ಏಕೆಂದರೆ ಶಿಕ್ಷಣವು ವ್ಯಕ್ತಿಯನ್ನು ಜ್ಞಾನ, ಶಿಸ್ತು ಮತ್ತು ಹೊಣೆಗಾರಿಕೆಗೆ ದಾರಿ ತೋರಿಸುತ್ತದೆ. ವಿದ್ಯೆ ಮತ್ತು ಜ್ಞಾನ ಮನದಲ್ಲಿ ಗಟ್ಟಿಯಾಗಿ ಬೇರೂರಿದ್ದರೆ ಉದ್ಯೋಗವನ್ನು ನಾವು ಹುಡುಕಬೇಕಾಗಿಲ್ಲ. ಉದ್ಯೋಗವೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯ ಕಡೆ ಕೇಂದ್ರೀಕರಿಸಿ ಸತತ ಪರಿಶ್ರಮ, ನಿಯಮಿತ ಅಭ್ಯಾಸ ಮತ್ತು ಅಧ್ಯಯನದಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯೋದಯ ಕಾಲೇಜಿನ ಟ್ರಸ್ಟಿ ಹೆಚ್.ಎಸ್.ರಾಜು,ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮುರಳೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ವಿದ್ಯೋದಯ ಕಾನೂನು ಕಾಲೇಜು ಪ್ರಾಂಶುಪಾಲ ಶಮಾ ಸೈಯದಿ, ಮಾನವ ಹಕ್ಕುಗಳ ಅನುಷ್ಠಾನ ಸಮಿತಿ ವಿದ್ಯೋದಯ ಕಾನೂನು ಕಾಲೇಜು ಸಂಚಾಲಕರು ಎನ್.ಎಸ್.ಮಂಜುಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
