ನವದೆಹಲಿ, ಡಿಸೆಂಬರ್ 11, 2025: “ನಮ್ಮ ಪ್ರಯಾಣಿಕರ ಆರೈಕೆ ನಮ್ಮ ಪ್ರಮುಖ ಆದ್ಯತೆ,” ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಪ್ರೆಸ್ಸ್ಟೇಟ್ಮೆಂಟ್ನಲ್ಲಿ ತಿಳಿಸಿದೆ. ಇತ್ತೀಚಿನ ಕಾರ್ಯಾಚರಣಾ ಅಡಚಣೆಗಳ ಹಿನ್ನೆಲೆಯಲ್ಲಿ ರದ್ದುಪಡಿಸಿದ್ದ ಎಲ್ಲಾ ವಿಮಾನಗಳ ಮರುಪಾವತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಹೆಚ್ಚಿನ ಪ್ರಯಾಣಿಕರ ಖಾತೆಗೆ ಹಣ ಜಮೆಯಾಗಿರುವುದಾಗಿ, ಉಳಿದವರಿಗೂ ಶೀಘ್ರದಲ್ಲಿ ಮರುಪಾವತಿ ಆಗುತ್ತದೆ ಎಂದು ಕಂಪನಿ ತಿಳಿಸಿದೆ.
ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ಟ್ರಾವೆಲ್ ಏಜೆನ್ಸಿಗಳು ಅಥವಾ ಆನ್ಲೈನ್ ಟ್ರಾವೆಲ್ ಪ್ಲಾಟ್ಫಾರ್ಮ್ ಮೂಲಕ ಬುಕ್ ಮಾಡಿದ್ದರೂ, ಅವರ ಮರುಪಾವತಿ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಅಂತಹವರು ತಮ್ಮ ಸಂಪೂರ್ಣ ವಿವರಗಳು ಕಂಪನಿಗೆ ಲಭ್ಯವಿಲ್ಲದಿದ್ದಲ್ಲಿ customer.experience@goindigo.in ಗೆ ಮೇಲ್ ಕಳುಹಿಸುವಂತೆ ವಿನಂತಿಸಿದೆ.
ಡಿಸೆಂಬರ್ 3, 4 ಮತ್ತು 5ರಂದು ಪ್ರಯಾಣಿಸಬೇಕಾಗಿದ್ದ ಹಲವಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಗಂಟೆಗಳ ಕಾಲ ಸಿಲುಕಿಕೊಂಡಿದ್ದರೆ, ಕೆಲವರು ಭಾರೀ ಅನಾನುಕೂಲ ಅನುಭವಿಸಿದ್ದಾರೆ. ಇಂತಹ ಗಂಭೀರವಾಗಿ ಪ್ರಭಾವಿತರಾಗಿರುವ ಪ್ರಯಾಣಿಕರಿಗೆ ಇಂಡಿಗೋ ₹10,000 ಮೌಲ್ಯದ ಪ್ರಯಾಣ ವೋಚರ್ಗಳನ್ನು ನೀಡುವುದಾಗಿ ಘೋಷಿಸಿದೆ. ಈ ವೋಚರ್ಗಳನ್ನು ಮುಂದಿನ 12 ತಿಂಗಳಲ್ಲಿ ಯಾವುದೇ ಇಂಡಿಗೋ ವಿಮಾನ ಪ್ರಯಾಣಕ್ಕೆ ಬಳಸಬಹುದು.
ಇದಲ್ಲದೆ, ಸರಕಾರದ ಮಾರ್ಗಸೂಚಿಗಳ ಪ್ರಕಾರ ಹೊರಡಿಸಲಾದ ನಿಯಮಾನುಸಾರ, ಪ್ರಯಾಣಕ್ಕೂ 24 ಗಂಟೆಗಳ ಒಳಗೆ ರದ್ದುಪಡಿಸಲಾದ ವಿಮಾನಗಳಿಗೆ ಪ್ರಯಾಣಿಕರು ₹5,000 ರಿಂದ ₹10,000 ರಷ್ಟು ಪರಿಹಾರಕ್ಕೆ ಅರ್ಹರಾಗಿದ್ದು, ಅದನ್ನೂ ಇಂಡಿಗೋ ಒದಗಿಸಲಿದೆ.
“ನಮ್ಮ ಪ್ರಯಾಣಿಕರಿಗೆ ನಾವು ನೀಡುವ ಭರವಸೆ — ಸುರಕ್ಷಿತ, ಸುಗಮ ಮತ್ತು ನಂಬಿಕೆ ಮೂಡುವ ಸೇವೆ. ಅದನ್ನು ಪುನಃ ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ನಮ್ಮನ್ನು ಮತ್ತೊಮ್ಮೆ ಸೇವೆ ಮಾಡಲು ನೀಡಿದ ಅವಕಾಶಕ್ಕೆ ಧನ್ಯವಾದಗಳು,” ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

[…] ಇದನ್ನು ಓದಿ: ಇಂಡಿಗೋ ಘೋಷಣೆ: ರದ್ದು ವಿಮಾನಗಳ ಮರುಪಾವತಿ, … […]