ಬೆಂಗಳೂರು/ಬೆಳಗಾವಿ: ಕರ್ನಾಟಕದ ದಕ್ಷಿಣ ಭಾಗದ ಚಾಮರಾಜನಗರದಿಂದ ಕಲ್ಯಾಣ ಕರ್ನಾಟಕದ ಕೊನೆಯ ಜಿಲ್ಲೆಯಾದ ಬೀದರ್ವರೆಗೆ ಸಂಪರ್ಕ ಕಲ್ಪಿಸುವ ಮಹತ್ವದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಅಧಿಕೃತ ವೇಗ ದೊರೆತಿದೆ. ಸುಮಾರು 1100 ಕಿಲೋ ಮೀಟರ್ಗೂ ಅಧಿಕ ಉದ್ದದ ಈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ‘ಕಲ್ಯಾಣ ಪಥ’ ಎಂದು ಹೆಸರಿಡಲಾಗಿದ್ದು, ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನಪರಿಷತ್ ಅಧಿವೇಶನದಲ್ಲಿ ಸದಸ್ಯ ಶಶಿಲ್ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹೆದ್ದಾರಿ ಯೋಜನೆಗೆ ಅಂದಾಜು 1000 ಕೋಟಿ ರೂ. ವೆಚ್ಚ ನಿರ್ಧರಿಸಲಾಗಿದ್ದು, ಈಗಾಗಲೇ 150 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.
ಹಲವು ಜಿಲ್ಲೆಗಳ ಮೂಲಕ ಹಾದು ಹೋಗುವ ಹೆದ್ದಾರಿ:-
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಬೀದರ್, ಚಾಮರಾಜನಗರ, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ದಕ್ಷಿಣ, ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳ ಮೂಲಕ ಹೆದ್ದಾರಿ ಹಾದು ಹೋಗಲಿದೆ.
ಇದನ್ನು ಓದು : Watch Video- ಬಾಂಡಿ ಬೀಚ್ ಗುಂಡಿನ ದಾಳಿ: ಉಗ್ರನಿಂದ ರೈಫಲ್ ಕಿತ್ತುಕೊಂಡ ಸಾಮಾನ್ಯ ನಾಗರಿಕನ ಧೈರ್ಯಕ್ಕೆ ಶ್ಲಾಘನೆ
ಕಾಮಗಾರಿಯ ಸ್ಥಿತಿ:-
ಈ ಯೋಜನೆ ರಾಜ್ಯದ ಅತೀ ಉದ್ದದ ಹೆದ್ದಾರಿ ಕಾಮಗಾರಿಯಾಗಿದ್ದು, ಉದ್ದೇಶಿತ 286 ಕಾಮಗಾರಿಗಳ ಪೈಕಿ 281 ಕಾಮಗಾರಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದುವರೆಗೆ 75 ಕಿಲೋ ಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಭಾಗಗಳ ಕೆಲಸಕ್ಕೆ ಇನ್ನಷ್ಟು ಚುರುಕು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
‘ಕಲ್ಯಾಣ ಪಥ’ ಯೋಜನೆಯ ಪ್ರಯೋಜನಗಳು:-
ಈ ಹೆದ್ದಾರಿ ಯೋಜನೆಯಿಂದ ಹಾದು ಹೋಗುವ ಹಳ್ಳಿ, ತಾಲೂಕು ಮತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ.
- ರೈತರು ಹಾಗೂ ವ್ಯಾಪಾರಿಗಳಿಗೆ ಸರಕು ಸಾಗಾಣೆಗೆ ಉತ್ತಮ ರಸ್ತೆ ಸೌಲಭ್ಯ
- ಶಿಕ್ಷಣ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ
- ಹಳ್ಳಿಗಳ ಆರ್ಥಿಕ–ಸಾಮಾಜಿಕ ಬೆಳವಣಿಗೆಗೆ ಪೂರಕ ವಾತಾವರಣ
- ಹೆದ್ದಾರಿ ಆಸುಪಾಸಿನ ಆಸ್ತಿಗಳ ಮೌಲ್ಯದಲ್ಲಿ ಹೆಚ್ಚಳ
- ಸ್ಥಳೀಯರಿಗೆ ಉದ್ಯೋಗಾವಕಾಶಗಳ ಸೃಷ್ಟಿ
ಭವಿಷ್ಯದಲ್ಲಿ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಸ್ಥಾಪನೆಗೂ ಈ ಹೆದ್ದಾರಿ ಪೂರಕವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಜನರ ಕನಸಿಗೆ ಜೀವ:-
ಒಟ್ಟಿನಲ್ಲಿ ಚಾಮರಾಜನಗರದಿಂದ ಬೀದರ್ವರೆಗೆ ನೇರ ಚತುಷ್ಪಥ ಹೆದ್ದಾರಿ ಸಂಪರ್ಕ ಕಲ್ಪಿಸುವ ‘ಕಲ್ಯಾಣ ಪಥ’ ಯೋಜನೆಯು ದಕ್ಷಿಣದಿಂದ ಉತ್ತರ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂಚಾರವನ್ನು ಸುಗಮಗೊಳಿಸಲಿದೆ. ರಾಜ್ಯದ ಸಾರಿಗೆ ಮೂಲಸೌಕರ್ಯಕ್ಕೆ ಹೊಸ ಆಯಾಮ ನೀಡುವ ಈ ಯೋಜನೆಯಿಂದ ಜನರಿಗೆ ನೇರ ಹಾಗೂ ಪರೋಕ್ಷವಾಗಿ ಬಹುಪಯೋಗವಾಗಲಿದೆ.

[…] ಇದನ್ನು ಓದು: ಚಾಮರಾಜನಗರ– ಬೀದರ್ ‘ಕಲ್ಯಾಣ ಪಥ’ ಚತುಷ್ಪಥ… […]