ತುಮಕೂರು:ತುಮಕೂರು ಸೇರಿದಂತೆ ರಾಜ್ಯದ ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ನಿಜವಾದ ಕಾರಣಗಳೇನು ಎಂದು ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 18ರ ಗುರುವಾರ ಬೆಳಗ್ಗೆ 10 ಗಂಟೆಗೆ ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ಎತ್ತಿನಹೊಳೆ ಕಚೇರಿಗೆ ಸಾರ್ವಜನಿಕರೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಲಾಗುವುದುಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಸುಧಾಟೀ ಹೌಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಎತ್ತಿನಹೊಳೆ ಯೋಜನೆ ವಿಳಂಭಕ್ಕೆ ಕಾರಣಗಳು ಮತ್ತು ಪರಿಹಾರ ಎಂಬ ವಿಷಯಕುರಿತ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ಸಭೆಯ ನಿಗಧಿಯಂತೆ ದೆಹಲಿಯಲ್ಲಿ ಸಚಿವರಾದ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.ಆದರೆ ಸಚಿವಾಲಯ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳಿಂದ ವಿಳಂಬವಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ನಿಜವಾದ ಅಡೆ,ತೆಡೆ ಯಾರಿಂದ ಆಗಿದೆ.ಇದರ ಹಿಂದಿನ ಉದ್ದೇಶವೇನು ಎಂದು ಜಿಲ್ಲೆಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 18ರ ಗುರುವಾರ ಎತ್ತಿನಹೊಳೆ ಯೋಜನೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು ಎಂದರು.

ಕರ್ನಾಟಕ ಸರಕಾರ 2012 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿ, ಶೇ90 ರಷ್ಟು ನಾಲಾ ಕಾಮಗಾರಿ ಮುಕ್ತಾಯಗೊಂಡ ನಂತರ ಕೇಂದ್ರದ ಜಲಸಂಪನ್ಮೂಲ ಇಲಾಖೆ ಪರಿಸರ ಮತ್ತು ಅರಣ್ಯ ಇಲಾಖೆಯ ಎನ್.ಓ.ಸಿ ಕುರಿತಂತೆ ತಕರಾರು ತೆಗೆದಿದೆ.ಇದುವರೆಗೂ ಎತ್ತಿನಹೊಳೆ ಯೋಜನೆಗಾಗಲಿ, ಭದ್ರಮೇಲ್ದಂಡೆ ಯೋಜನೆಗಾಗಲಿ ಒಂದು ನೈಯಾಪೈಸೆ ಹಣವನ್ನು ಕೇಂದ್ರ ಸರಕಾರ ನೀಡಿಲ್ಲ. ಬಜೆಟ್ನಲ್ಲಿ ಘೋಷಣೆ ಮಾಡಿಯೂ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಒಂದು ವರ್ಷ ಕಳೆದರೂ ನೀಡಿಲ್ಲ.ಇದರ ವಿರುದ್ಧ ಎತ್ತಿನಹೊಳೆ ಯೋಜನಾ ವ್ಯಾಪ್ತಿಗೆ ಒಳಪಡುವ ಹಾಸನ,ತುಮಕೂರು, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,ಕೋಲಾರ ಜಿಲ್ಲೆಗಳ ಜನರು ಈಗಲೇ ಎಚ್ಚೆತ್ತುಕೊಂಡು ಹೋರಾಟ ರೂಪಿಸದಿದ್ದರೆ ಇಷ್ಟು ದಿನದವರೆಗೆ ರಾಜ್ಯ ಸರಕಾರ ನಡೆಸಿ, ಕಾಮಗಾರಿಗಳು ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತಾಗುತ್ತದೆ. ಹಾಗಾಗಿ ಶತಾಯ,ಗತಾಯ ಕೇಂದ್ರ ಸರಕಾರದ ಎಲ್ಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿ, ಯೋಜನೆ ಪೂರ್ಣಗೊಳ್ಳುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ ಎಂದರು.
ಸಮಾಲೋಚನಾ ಸಭೆಯಲ್ಲಿ ಮುಖಂಡರಾದ ಸಂಜೀವಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ರೈತ ಮುಖಂಡರಾದ ಷಡಕ್ಷರಿ,ನಿವೃತ್ತಅಧಿಕಾರಿ ಗೋವಿಂದೇಗೌಡ,ರೇವಣ್ಣಸಿದ್ದಯ್ಯ,ಪಿ.ಶಿವಾಜಿ,ದಸಂಸ ಮುಖಂಡರಾದ ಪಿ.ಎನ್.ರಾಮಯ್ಯ, ಗಣೇಶ್, ಆರ್.ವಿ.ಪುಟ್ಟಕಾಮಣ್ಣ,ಸೌಭಾಗ್ಯ,ಯಶೋಧಮ್ಮ, ಸಿಮೆಂಟ್ ಮಂಜುನಾಥ್, ಆದಿಲ್,ಜೈನ್ ಷೇಕ್ ಫಯಾಜ್,ಬಿ.ಉಮೇಶ್,ಹರೀಶ್, ದಯಾನಂದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
